ನವದೆಹಲಿ: ಇಸ್ರೋದ ಚಂದ್ರಯಾನ-3 ನೌಕೆ ಮಾತ್ರವಲ್ಲದೇ, ರಷ್ಯಾದ ಲೂನಾ 25 ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಪೈಪೋಟಿ ನಡೆಸಿದೆ. ವಿಶೇಷವೆಂದರೆ, ಭಾರತದ ಚಂದ್ರಯಾನ-3 ನೌಕೆ ನಭಕ್ಕೆ ಚಿಮ್ಮಿದ (ಜುಲೈ 14) ಒಂದು ತಿಂಗಳ ಬಳಿಕ ಲೂನಾ 25ರ ಉಡಾವಣೆ(ಆಗಸ್ಟ್ 11) ಆಗಿದೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆ.23ರಂದು ಚಂದ್ರನ ಮೇಲ್ಮೆ„ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವ ನಿರೀಕ್ಷೆಯಿದೆ. ಆದರೆ, ವಿಳಂಬವಾಗಿ ಉಡಾವಣೆಯಾದರೂ ರಷ್ಯಾದ ಮೊದಲ ಚಂದ್ರಯಾನ ಲೂನಾ 25 ಆಗಸ್ಟ್ 21ರಂದೇ ಶಶಾಂಕನ ಅಂಗಳ ಪ್ರವೇಶಿಸಲಿದೆ.
ರಷ್ಯಾವು ಸುಮಾರು 50 ವರ್ಷಗಳ ಬಳಿಕ ಕೈಗೊಂಡ ಮೊದಲ ಚಂದ್ರಯಾನ ಯೋಜನೆಯಿದು. ಆ.11ರಂದು ಉಡಾವಣೆಯಾದ ನೌಕೆಯು ಕೇವಲ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. ನಂತರದ 5ರಿಂದ 7 ದಿನಗಳಲ್ಲಿ ಅದು ಚಂದ್ರನ ಮೇಲ್ಮೆ„ ಮೇಲೆ ಇಳಿಯಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್‌ನ ಈ ಸಾಧನೆಗೆ ಇಸ್ರೋ ಕೂಡ ಪ್ರತಿಕ್ರಿಯಿಸಿದ್ದು, “ಲೂನಾ-25ರ ಯಶಸ್ವಿ ಉಡಾವಣೆಗಾಗಿ ರಾಸ್‌ಕಾಸ್ಮೋಸ್‌ಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ನಮ್ಮ ಬಾಹ್ಯಾಕಾಶ ಪಯಣದಲ್ಲಿ ಮತ್ತೂಂದು ಸಮ್ಮಿಲನವು ಹರ್ಷ ತಂದಿದೆ’ ಎಂದು ಹೇಳಿದೆ.
ಲೂನಾ-25 ಏನು ಮಾಡಲಿದೆ?
ಚಂದ್ರಯಾನ-3 ನೌಕೆಯು 2 ವಾರಗಳ ಅವಧಿಗೆ ಮಾತ್ರ ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸಲಿದೆ. ಆದರೆ, ರಷ್ಯಾದ ನೌಕೆಯು ಬರೋಬ್ಬರಿ ಒಂದು ವರ್ಷ ಕಾಲ ಶಶಿಯ ಮಡಿಲಲ್ಲೇ ಉಳಿಯಲಿದೆ. ಲೂನಾ-25 ಒಟ್ಟಾರೆ 1.8 ಟನ್ ತೂಕ ಹೊಂದಿದ್ದು, 31 ಕೆಜಿ ವೈಜ್ಞಾನಿಕ ಸಲಕರಣೆಗಳನ್ನು ಹೊತ್ತುಕೊಂಡಿದೆ. ಇದು ಚಂದ್ರನ ತಳಪಾಯವನ್ನು ಆವರಿಸಿರುವ ಏಕೀಕೃತ ಘನವಸ್ತುಗಳ ಪದರ(ರೆಗೋಲಿತ್) ಮತ್ತು ಚಂದ್ರನ ಧ್ರುವೀಯ ಹೊರಗೋಳದ ಪ್ಲಾಸ್ಮಾ ಮತ್ತು ಧೂಳಿನ ಕಣಗಳನ್ನು ಅಧ್ಯಯನ ನಡೆಸಲಿದೆ.