Advertisement

ಯಾವ ರಾಜ್ಯಗಳಲ್ಲಿ ಯಾರ ನಡುವಿದೆ ಸ್ಪರ್ಧೆ?

12:30 AM Mar 12, 2019 | |

ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಬಾರಿ ಯಾವ ರಾಜ್ಯಗಳಲ್ಲಿ ಯಾರ ನಡುವೆ ಜಟಾಪಟಿಯಿದೆ ಎನ್ನುವ  ಪ್ರಶ್ನೆಗೆ ಇಲ್ಲಿದೆ ಉತ್ತರ. ದೇಶದ ರಾಜಕೀಯ ಪರಿದೃಶ್ಯದ ಇಣುಕು ನೋಟ.. 

Advertisement

ಮಧ್ಯಪ್ರದೇಶ 29 ಲೋಕಸಭಾ ಸ್ಥಾನಗಳು
ಗುಜರಾತ್‌ 26
ರಾಜಸ್ಥಾನ 25 
ಅಸ್ಸಾಂ 14
ಛತ್ತೀಸ್‌ಗಢ 11
ಹರ್ಯಾಣ 10
ಉತ್ತರಾಖಂಡ 05
ಹಿಮಾಚಲ ಪ್ರದೇಶ 04
ಈ ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳು  124

5 ರಾಜ್ಯಗಳಲ್ಲಿ ಎನ್‌ಡಿಎ ವರ್ಸಸ್‌ ಯುಪಿಎ ಸಮರ
ಬಿಹಾರ: 40 ಲೋಕಸಭಾ ಸ್ಥಾನಗಳು
ಬಿಹಾರದಲ್ಲಿ ಸಿಎಂ ನಿತೀಶ್‌ ಕುಮಾರರ ಪಾರ್ಟಿ ಜೆಡಿಯು ಮತ್ತೂಮ್ಮೆ ಎನ್‌ಡಿಎ ಜೊತೆಗೂಡಿದೆ. ಬಿಜೆಪಿ ಮತ್ತು ಜಿಡಿಯು ತಲಾ 17-17 ಸ್ಥಾನಗಳಲ್ಲಿ ಮತ್ತು ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಪಕ್ಷ 6 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಅದೇ ಇನ್ನೊಂದು ಬದಿಯಲ್ಲಿ ಎನ್‌ಡಿಎಗೆ ವಿರುದ್ಧವಾಗಿ ಕಾಂಗ್ರೆಸ್‌, ಆರ್‌ಜೆಡಿ, ಹಿಂದೂಸ್ಥಾನಿ ಆವಾಮ್‌ ಮೋರ್ಚಾ, ಆರ್‌ಎಲ್‌ಎಸ್‌ಪಿ ಮತ್ತು ಇತರೆ ಪಕ್ಷಗಳು ಸ್ಪರ್ಧಿಸುತ್ತಿವೆ. ಮಹಾಘಟಬಂಧನದಲ್ಲಿ ಇನ್ನೂ ಕೂಡ ಸೀಟು ಹಂಚಿಕೆ ವಿಷಯ ಇತ್ಯರ್ಥವಾಗಿಲ್ಲ. 

ಮಹಾರಾಷ್ಟ್ರ: 48 ಲೋಕಸಭಾ ಸ್ಥಾನಗಳು
ಮಹಾರಾಷ್ಟ್ರದಲ್ಲಿ ಮತ್ತೂಮ್ಮೆ ಬಿಜೆಪಿ ಮತ್ತು ಶಿವಸೇನೆ ಜೊತೆಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿವೆ. ಸ್ಥಾನ ಹಂಚಿಕೆ ಕೂಡ ಮುಗಿದಿದ್ದು, ಬಿಜೆಪಿ 25 ಸ್ಥಾನಗಳಲ್ಲಿ ಮತ್ತು ಶಿವಸೇನೆ 23 ಸ್ಥಾನಗಳಲ್ಲಿ ಕಣಕ್ಕಿಳಿಯಲಿವೆ. ಈ ಹಂಚಿಕೆಯ ನಂತರ ಎರಡೂ ಬದಿಯಲ್ಲೂ ನೆಮ್ಮದಿ ಮೂಡಿದೆಯಾದರೂ, ಎನ್‌ಡಿಎದ ಭಾಗವಾಗಿರುವ ಆರ್‌ಪಿಐ ಪಕ್ಷಕ್ಕೆ ಒಂದೂ ಸೀಟು ಸಿಗದ ಕಾರಣ ಕೇಂದ್ರೀಯ ರಾಜ್ಯಮಂತ್ರಿ ರಾಮದಾಸ್‌ ಅಠಾವಳೆ ಅಸಮಾಧಾನಗೊಂಡಿದ್ದಾರೆ. ಇಲ್ಲಿ ಎನ್‌ಡಿಎಗೆ ವಿರುದ್ಧವಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆಯಾಗಿ ನಿಂತಿವೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಅವರು ಎಸ್‌ಪಿ ಮತ್ತು ಬಿಎಸ್‌ಪಿಗೂ ಮಹಾರಾಷ್ಟ್ರದಲ್ಲಿ ತಮ್ಮ ಜೊತೆಯಾಗಲು ಆಹ್ವಾನ ನೀಡಿದ್ದರು. ಈ ರಣನೀತಿಯಡಿ ಕಾಂಗ್ರೆಸ್‌ ಮಹಾರಾಷ್ಟ್ರದಲ್ಲಿ ಬಿಎಸ್‌ಪಿಗೆ 2 ಮತ್ತು ಎಸ್‌ಪಿಗೆ 1 ಸೀಟು ಕೊಡಲು ಸಿದ್ಧವಾಗಿದೆ. 

ತಮಿಳುನಾಡು: 39 ಲೋಕಸಭಾ ಸ್ಥಾನಗಳು
ತಮಿಳುನಾಡಲ್ಲಿ ಬಿಜೆಪಿಗೆ ಎಐಎಡಿಎಂಕೆಯ ಸಾಥ್‌ ದೊರೆತಿದೆ. ಒಟ್ಟು 40(ತಮಿಳುನಾಡು 39. ಪುದುಚೆರಿ 1) ಸ್ಥಾನಗಳಲ್ಲಿ ಎಐಎಡಿಎಂಕೆ  25 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇದರಲ್ಲಿ ಟಿಎಂಸಿ, ಎನ್‌ಆರ್‌ಸಿಗೂ ಸೀಟು ಬಿಟ್ಟುಕೊಡಲಿದೆ. ಇತ್ತ ಬಿಜೆಪಿ ತನ್ನ ಪಾಲಿನ 15 ಸೀಟುಗಳಲ್ಲಿ 8 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಉಳಿದ 7 ಸೀಟುಗಳಲ್ಲಿ ನಾಲ್ಕು ಸೀಟುಗಳನ್ನು ಪಿಎಂಕೆಗೆ ಮತ್ತು 3 ಸೀಟನ್ನು ಡಿಎಂಡಿಕೆ ಪಕ್ಷಕ್ಕೆ ಬಿಟ್ಟು ಕೊಡಲಿದೆ. ಅತ್ತ ಎನ್‌ಡಿಎ ವಿರುದ್ಧವಾಗಿ ಕಾಂಗ್ರೆಸ್‌ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಡಿಎಂಕೆಯು ತಮಿಳುನಾಡಿನ 9 ಮತ್ತು ಪುದುಚೆರಿಯ 1 ಲೋಕಸಭಾ ಸೀಟನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಉಳಿದ ಸೀಟುಗಳಲ್ಲಿ ಅದು ಸ್ಪರ್ಧಿಸಲಿದೆ. 

Advertisement

ಕರ್ನಾಟಕ: 28 ಲೋಕಸಭಾ ಸ್ಧಾನಗಳು
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದರೂ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳು ಇನ್ನೂ ಸೀಟು ಹಂಚಿಕೆ ವಿಷಯದಲ್ಲಿ ಗೊಂದಲ-ಜಿದ್ದಾಜಿದ್ದಿಯಲ್ಲೇ ಮುಳುಗಿವೆ, ಇತ್ತ ಬಿಜೆಪಿಯೂ ರಾಜ್ಯದಲ್ಲಿ ಭರದ ತಯಾರಿ ನಡೆಸಿದೆ. ಗಮನಾರ್ಹ ಸಂಗತಿಯೆಂದರೆ, ಈ ಬಾರಿ ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳೂ ಸೋಷಿಯಲ್‌ ಮೀಡಿಯಾದ ಬಳಕೆಯನ್ನು ಹೆಚ್ಚಿಸಿಕೊಂಡಿರುವುದು. 

ಜಾರ್ಖಂಡ್‌: 14 ಲೋಕಸಭಾ ಸ್ಥಾನಗಳು
14 ಲೋಕಸಭಾ ಸ್ಥಾನಗಳಿರುವ ಜಾರ್ಖಂಡ್‌ನ‌ಲ್ಲಿ ಬಿಜೆಪಿ ಸರ್ಕಾರವಿದೆ. ಬಿಜೆಪಿ ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌ನೊಂದಿಗೆ(ಎಜೆಎಸ್‌ಯು) ಚುನಾವಣೆಗಳನ್ನು ಸ್ಪರ್ಧಿಸಲಿದೆ. ಬಿಜೆಪಿ 13ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಎಜೆಎಸ್‌ಯು ಕೇವಲ ಒಂದು ಸ್ಥಾನದಲ್ಲಿ ಕಳಕ್ಕಿಳಿಯಲಿದೆ. ಎನ್‌ಡಿಎ ವಿರುದ್ಧವಾಗಿ ಪೂರ್ವ ಮುಖ್ಯಮಂತ್ರಿ ಹೇಮಂತ್‌ ಸೋರೇನ್‌ರ “ಜಾರ್ಖಂಡ್‌ ಮುಕ್ತಿ ಮೋರ್ಚಾ’ ಮತ್ತು ಮಾಜಿ ಮುಖ್ಯಮಂತ್ರಿ ಬಾಬು ಲಾಲ್‌ ಮರಾಂಡಿಯವರ “ಜಾರ್ಖಂಡ್‌ ವಿಕಾಸ ಮೋರ್ಚಾ’ ಸಮೇತ ಉಳಿದ ಪಕ್ಷಗಳ ಜೊತೆಗೆ ಕಾಂಗ್ರೆಸ್‌ ಮೈತ್ರಿಯನ್ನು ರಚಿಸಿದೆ. 

ಎನ್‌ಡಿಎ ಮತ್ತು ಯುಪಿಎ: ಬಂದವರು, ಹೋದವರು 
ಕಳೆದ ಲೋಕಸಭಾ ಚುನಾವಣೆಯ ನಂತರ ಎರಡೂ ದಳಗಳಲ್ಲೂ ಅನೇಕ ಬದಲಾವಣೆಗಳಾಗಿವೆ. ಎನ್‌ಡಿಎ ಮತ್ತು ಯುಪಿಎದಿಂದ ಒಂದೆಡೆ ಕೆಲವು ಹಳೆಯ ಮಿತ್ರ ಪಕ್ಷಗಳು ದೂರವಾದರೆ, ಹೊಸ ಪಕ್ಷಗಳು ಸೇರ್ಪಡೆಯಾಗಿವೆ. ದೂರ ಹೋದ ಪಕ್ಷಗಳು ಸನಿಹವಾಗಲೂ ಸಿದ್ಧವಾಗಿವೆ.   
2014ರಲ್ಲಿ ಎನ್‌ಡಿಎದಲ್ಲಿ 29 ರಾಜಕೀಯ ಪಕ್ಷಗಳಿದ್ದವು. ಈಗ ಈ ಮೈತ್ರಿಕೂಟದಿಂದ 16 ರಾಜಕೀಯ ಪಕ್ಷಗಳು ದೂರವಾಗಿವೆ. ಇದೇ ವೇಳೆಯಲ್ಲೇ ಭಾರತೀಯ ಜನತಾ ಪಕ್ಷವು ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಮತ್ತು  ಬಿಹಾರದಲ್ಲಿ ಜೆಡಿಯುನಂಥ ಮಹತ್ವದ ಪಕ್ಷಗಳನ್ನೂ ತನ್ನತ್ತ ಸೆಳೆದುಕೊಂಡಿರುವುದು ಅದಕ್ಕೆ ಪ್ಲಸ್‌ ಪಾಯಿಂಟ್‌ ಆಗಿ ಪರಿಣಮಿಸಿದೆ.  

2014ರಲ್ಲಿ ಯುಪಿಎದಲ್ಲಿ  ಒಟ್ಟು 14 ಪಕ್ಷಗಳಿದ್ದವು. ಈ ಬಾರಿ ಈ ಮೈತ್ರಿಕೂಟದಲ್ಲಿ ಚಿಕ್ಕ ಪುಟ್ಟ ಪಕ್ಷಗಳು ಸೇರಿದಂತೆ ಒಟ್ಟು 23 ಪಕ್ಷಗಳು ಇವೆ. ಇನ್ನೂ ಎರಡು ಪಕ್ಷಗಳೂ ಯುಪಿಎದ  ಜೊತೆಯಾಗಲು ಸಿದ್ಧವಾಗಿವೆ. ಕಾಂಗ್ರೆಸ್‌ಗೆ ಒಟ್ಟು 146 ಸೀಟುಗಳಿರುವ 5 ರಾಜ್ಯಗಳಲ್ಲಿ  ಜೆಡಿಎಸ್‌, ಡಿಎಂಕೆ, ಟಿಡಿಪಿ, ಜೆವಿಎಂನ ಸಂಗ ದೊರೆತಿದೆ.   

9 ರಾಜ್ಯಗಳಲ್ಲಿ  ತ್ರಿಕೋನ ಸ್ಪರ್ಧೆ
ದೆಹಲಿ: 7 ಲೋಕಸಭಾ ಸ್ಥಾನಗಳು 
ದೆಹಲಿಯಲ್ಲಿ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ, ಡಾ. ಹರ್ಷವರ್ಧನ್‌ರ ನೇತೃತ್ವದಲ್ಲಿ ಬಿಜೆಪಿ ಮತ್ತು ಶೀಲಾ ದೀಕ್ಷಿತ್‌ರ ನೇತೃತ್ವದಲ್ಲಿ ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇರಲಿದೆ. ಬಿಜೆಪಿಯ ವಿರುದ್ಧ ಆಪ್‌-ಕಾಂಗ್ರೆಸ್‌ ಮೈತ್ರಿ ರಚಿಸುವ ಸಾಧ್ಯತೆ ಮುರಿದುಬಿದ್ದಿದೆ. ಪ್ರಸಕ್ತ ಏಳೂ ಲೋಕಸಭಾ ಸ್ಥಾನಗಳಲ್ಲೂ ಬಿಜೆಪಿಯೇ ಇದ್ದು, ಈ ಬಾರಿಯೂ ಹಿಂದಿನ ಬಾರಿಯ ಫ‌ಲಿತಾಂಶವನ್ನೇ ಪುನರಾವರ್ತಿಸುವ ಭರವಸೆಯಲ್ಲಿದೆ.  

ಉತ್ತರಪ್ರದೇಶ: 80 ಲೋಕಸಭಾ ಸ್ಥಾನಗಳು
ಉತ್ತರಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಎಸ್‌ಪಿ-ಬಿಎಸ್‌ಪಿಯ ನಡುವೆ ತ್ರಿಕೋನ ಸ್ಪರ್ಧೆಯಿದೆ. ಕಾಂಗ್ರೆಸ್‌ ಅಂತೂ ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ಸೂಚನೆ ನೀಡುತ್ತಿದೆ. ಎಸ್‌ಪಿ-ಬಿಎಸ್‌ಪಿ  ಕೈಜೋಡಿಸಿವೆ, ರಾಷ್ಟ್ರೀಯ ಲೋಕದಳವೂ ಅವುಗಳ ಜೊತೆಗಿದೆ. ಎಸ್‌ಪಿ 37 ಸೀಟುಗಳಲ್ಲಿ ಮತ್ತು ಬಿಎಸ್‌ಪಿ 38 ಸೀಟುಗಳಲ್ಲಿ ಸ್ಪರ್ಧಿಸಿದರೆ, ಆರ್‌ಎಲ್‌ಡಿ 3 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಅಮೇಠಿ ಮತ್ತು ರಾಯಬರೇಲಿ ಸೀಟುಗಳಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಸ್ಪರ್ಧಿಸಲಿದ್ದಾರೆ. ಇಲ್ಲಿ ಎಸ್‌ಪಿ-ಬಿಎಸ್‌ಪಿ ಸ್ಪರ್ಧಿಸವು. ಪ್ರಿಯಾಂಕಾ ವಾದ್ರಾ ಕಾಂಗ್ರೆಸ್‌ನ ಚುನಾವಣೆಯ ನೇತೃತ್ವ ವಹಿಸಿದ್ದಾರೆ.  

ಪಶ್ಚಿಮ ಬಂಗಾಳ: 42 ಲೋಕಸಭಾ ಸ್ಥಾನಗಳು
ಪ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಬಿಜೆಪಿಯ ವಿರುದ್ಧವಾಗಿ ಟಿಎಂಸಿ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 34 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ಗೆ  4, ಬಿಜೆಪಿಗೆ 2 ಮತ್ತು ಸಿಪಿಎಂಗೆ 2 ಸ್ಥಾನಗಳು ದೊರೆತಿದ್ದವು. ಈ ಬಾರಿ ಮಹಾಘಟಬಂಧನದಂತೆಯೇ ಬಿಜೆಪಿಯೂ ಕೂಡ ಪ. ಬಂಗಾಳತ್ತ ಹೆಚ್ಚು ಗಮನ ಹರಿಸಿದೆ. ಇವುಗಳನ್ನು ಹೊರತುಪಡಿಸಿದರೆ ಜಮ್ಮು-ಕಾಶ್ಮೀರ, ಪಂಜಾಬ್‌, ಒಡಿಶಾ, ಆಂಧ್ರಪ್ರದೇಶ, ಕೇರಳ, ತೆಲಂಗಾಣದಲ್ಲೂ ತ್ರಿಕೋನ ಸ್ಪರ್ಧೆ ಇರಲಿದೆ. ಈ 9 ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳು 332. ಹೀಗಾಗಿ, ಈ ರಾಜ್ಯಗಳಲ್ಲಿನ ಫ‌ಲಿತಾಂಶ ಮುಖ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next