ಬೆಂಗಳೂರು: ಮೈತ್ರಿ ಸರಕಾರದಲ್ಲಿ ತಾನು ಜಾರಿಗೊಳಿಸಿದ್ದ “ಕಾಂಪಿಟ್ ವಿತ್ ಚೀನ” ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹೈಜಾಕ್ ಮಾಡಿ ಅವರ ಸ್ವಂತ ಯೋಜನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪೀಣ್ಯದಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಸಿ ರಾಜರಾಜೇಶ್ವರಿ ನಗರ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ತಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತೇಜನ ನೀಡಿದ್ದೆ. ಅದನ್ನೇ ಈಗ ಆತ್ಮನಿರ್ಭರ ಭಾರತ ಎಂದು ಮೋದಿ ಹೇಳುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡಲು “ಬಡವರ ಬಂಧು’ ಯೋಜನೆ ಜಾರಿಗೆ ತಂದಿದ್ದೆ, ಈಗ ಮೋದಿ ಅವರು 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು “ಪಿಎಂ ಸ್ವನಿಧಿ’ ಘೋಷಿಸಿದ್ದಾರೆ. ಈ ದೇಶವನ್ನು ಬಾಂಗ್ಲಾದೇಶ, ವಿಯೆಟ್ನಾಂ ಜತೆ ಪೈಪೋಟಿ ನಡೆಸುವ ಹಂತಕ್ಕೆ ತರಲಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ
ಜೆಡಿಎಸ್ ಕೇವಲ ಕೃಷಿಕರಿಗಾಗಿರುವ ಪಕ್ಷ ಅಲ್ಲ, ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ಎಲಿವೇಟೆಡ್ ಕಾರಿಡಾರ್‌ನಂತಹ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದು ಜೆಡಿಎಸ್ ಸರಕಾರವಾಗಿದೆ. ಬೆಂಗಳೂರಿಗೆ ಕಾವೇರಿ ನೀರು ಸಿಗಲು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಕಾರಣ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 6.5 ಕೋಟಿ ಕನ್ನಡಿಗರ ಭರವಸೆ ಈಡೇರಿಸಿಲ್ಲ. ಬದಲಾಗಿ ಅವರನ್ನು ಮುಖ್ಯಮಂತ್ರಿ ಮಾಡಲು ಬೆಂಬಲ ನೀಡಿದ 17 ಶಾಸಕರ ಭರವಸೆ ಮಾತ್ರ ಈಡೇರಿಸಿದ್ದಾರೆ ಎಂದು ಟೀಕಿಸಿದರು.