ತಿಪಟೂರು: ಈಗಷ್ಟೇ ಲೋಕಸಭಾ ಚುನಾವಣಾ ಕದನ ಮುಗಿದು ಫಲಿತಾಂಶಕ್ಕೆ ಕಾಯುತ್ತಿರುವ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ನಗರಸಭಾ ಚುನಾವಣೆ ಘೋಷಿಸಿದ್ದು ರಾಜಕೀಯ ಮುಖಂಡರಿಗೆ ಒಂದು ರೀತಿಯ ತಲೆನೋವಾಗಿ ಪರಿಣಮಿಸಿದೆ. ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಲೆಕ್ಕಾಚಾರದಲ್ಲಿ ಮುಖಂಡರು ಮುಳುಗಿದ್ದಾರೆ.
ಹೆಚ್ಚಿದ ಸ್ಪರ್ಧಾಕಾಂಕ್ಷಿಗಳು: ತಿಪಟೂರು ನಗರ ಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೇ 29ರಂದು ಚುನಾವಣೆ ನಡೆಯಲಿದೆ. ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ ಗಳಿದ್ದು, 45256 ಮತದಾರರಿದ್ದಾರೆ. ಅದರಲ್ಲಿ 21896 ಪುರುಷರು, 23357 ಮಹಿಳಾ ಮತಗಳಿವೆ. ಈಗಾಗಲೇ ಮೇ 9ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದರೂ, ಯಾವುದೇ ಪಕ್ಷದ ಅಭ್ಯರ್ಥಿ ಗಳಿಂದ ಅಥವಾ ಪಕ್ಷೇತರರಿಂದಾಗಲಿ ಇದುವರೆಗೂ ಒಂದೂ ನಾಮಪತ್ರವೂ ಸಲ್ಲಿಕೆಯಾಗಿಲ್ಲ. ಪಕ್ಷಗಳ ಮುಖಂಡರಿಗಂತೂ ಯಾರಿಗೆ ಟಿಕೆಟ್ ನೀಡಬೇಕೆಂಬುದೇ ತಲೆನೋವಾಗಿದ್ದು ಸ್ಪರ್ಧಾ ಕಾಂಕ್ಷಿಗಳ ಸಂಖ್ಯೆ ಮಾತ್ರ ಏರುತ್ತಿದೆ.
ಅಧಿಕೃತ ಬಿಡುಗಡೆ ಇಲ್ಲ: ಟಿಕೆಟ್ಗಾಗಿ ಮುಖಂಡರ ಮೇಲೆ ಒತ್ತಡಗಳು ಹೆಚ್ಚುತ್ತಿದ್ದು, ಟಿಕೆಟ್ ಸಿಗದವರು ಬಂಡಾಯ ಏಳುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿದೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕೆಲ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದರೂ ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. ಆದರೆ, ಅಭ್ಯರ್ಥಿಗಳು ನಾನೇ ಸ್ಪರ್ಧಿಸುತ್ತಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಹಾಗೂ ಪಕ್ಷದ ಹೆಸರನ್ನು ಹಾಕಿಕೊಂಡು ರಾರಾಜಿಸುತ್ತಿದ್ದರೆ ಮುಖಂಡರು ಮಾತ್ರ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದ್ದಾರೆನ್ನಲಾಗಿದೆ.
ಚುನಾವಣೆಯಲ್ಲಿ ಮಾಜಿ ಸದಸ್ಯರೇ ಹೆಚ್ಚು ಸ್ಪರ್ಧೆ: ಈಗಾಗಲೇ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದೆರಡು ಬಾರಿ ಗೆದ್ದಿದ್ದ ಮಾಜಿ ಸದಸ್ಯರೇ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಚುನಾವಣೆ ಎದುರಿ ಸುವ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ನಗರವನ್ನು ಮಾದರಿ ನಗರವನ್ನಾಗಿ ಮಾಡುತ್ತೇ ವೆಂದು ಜನತೆಗೆ ಆಶ್ವಾಸನೆ ನೀಡಿ ಗೆದ್ದಿದ್ದ ಸದಸ್ಯರು ಈ ಬಾರಿಯೂ ನಾವೇ ಸ್ಪರ್ಧಿಸುತ್ತೇವೆ. ನಮಗೆ ಟಿಕೆಟ್ ಕೊಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಇನ್ನೂ ಕೆಲವೆಡೆ ಸಾಮಾನ್ಯ ಹಾಗೂ ಮಹಿಳಾ ಮೀಸಲಾತಿ ಇರುವುದರಿಂದ ಅವರ ಪತ್ನಿಯರನ್ನು ಚುನಾವಣಾ ಕಣಕ್ಕೆ ಇಳಿಸುವ ಸಾಧ್ಯತೆಗಳು ಕಂಡುಬಂದಿವೆ.
ತಂತ್ರ-ಕುತಂತ್ರ: ಒಂದೇ ವಾರ್ಡ್‌ಗೆ 4-5 ಅಭ್ಯರ್ಥಿಗಳಿರುವ ಕಾರಣ ಟಿಕೆಟ್ ಯಾರಿಗೆ ಕೊಡ ಬೇಕೆಂಬ ಗೊಂದಲ ಮುಖಂಡರಲ್ಲಿ ಮನೆ ಮಾಡಿದೆ. ಈಗಾಗಲೇ ಒಂದೆರಡು ಬಾರಿ ಗೆದ್ದು ಅಧಿಕಾರದ ರುಚಿ ಕಂಡಿರುವ ಸದಸ್ಯರು ಟಿಕೆಟ್ಗಾಗಿ ತಮ್ಮೆಲ್ಲಾ ತಂತ್ರ-ಕುತಂತ್ರಗಳನ್ನು ಉಪಯೋಗಿ ಸುತ್ತಿರುವುದು ಕಂಡು ಬರುತ್ತಿದೆ. ಪಕ್ಷದ ಯಾರನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಮುಖಂಡರಿಗೆ ಟಿಕೆಟ್ನಿಂದಾಗಿ ಎಲ್ಲಿ ಗೊಂದಲ ಉಂಟಾಗಿ ಬಿಡು ತ್ತದೆಯೋ ಎಂಬ ಭಯ ಕಾಡುತ್ತಿದೆ.
ಒಟ್ಟಾರೆ ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲವೆಂಬಂತೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಗೆಲುವಿಗಾಗಿ ರಣತಂತ್ರ ಎಣೆಯುತ್ತಿದ್ದು, ಮತದಾರ ಪ್ರಭು ಮಾತ್ರ ಯಾರಿಗೆ ಮತಹಾಕಿ ಆಶೀರ್ವದಿಸುತ್ತಾನೋ ಎಂಬುದು ಫಲಿತಾಂಶದ ಬಳಿಕ ತಿಳಿದು ಬರಲಿದೆ.