ಬೆಳಗಾವಿ: ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕುಷಿತ ನೀರು ಸೇವಿಸಿ ವೃದ್ಧ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿದ ಕಾರಜೋಳ ಘೋಷಿಸಿದ್ದಾರೆ.
ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಕೆಲವರು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 70 ವರ್ಷದ ಶಿವಪ್ಪ ಎಂಬುವರು ನಿಧನ ಹೊಂದಿರುತ್ತಾರೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ ಜನರಿಗೆ ಹೆಚ್ಚಿನ ಕಾಳಜಿ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶಿವಪ್ಪ ಅಸುನೀಗಿದ್ದಾರೆ. ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಕಾರಜೋಳ ಹೇಳಿದ್ದಾರೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಆರ್‌ಒ ಪ್ಲಾಂಟ್ ಗಳನ್ನು ಅಳವಡಿಸಲಾಗಿದೆ. ಬೋರ್ ವೆಲ್, ಪೈಪ್‌ಲೈನ್ ನೀರು ಕುಡಿಯದಂತೆ ವಿನಂತಿಸಿಕೊಳ್ಳುತ್ತೇನೆ. ಗ್ರಾಮದಲ್ಲಿ ಈಗಾಗಲೇ ಡಂಗೂರ ಹೊಡೆದರೂ ತಪ್ಪಿ ಕೆಲವರು ಈ ನೀರು ಕುಡಿದಿದ್ದಾರೆ. ಇನ್ನು ಮುಂದೆಯಾದರೂ ಶುದ್ಧ ಕುಡಿಯುವ ನೀರು ಕುಡಿಯಬೇಕು ಎಂದು ವಿಡಿಯೋ ಮೂಲಕ ಸಚಿವ ಕಾರಜೋಳ ಮನವಿ ಮಾಡಿದ್ದಾರೆ.
ಕಲುಷಿತ ನೀರು ಸೇವಿಸಿದ ಇನ್ನುಳಿದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಮುಂದಿನ ತಿಂಗಳೊಳಗಾಗಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪುತ್ತಿದ್ದಂತೆ ಎಚ್ಚೆತ್ತುಕೊಂಡ ರಾಮದುರ್ಗ ತಾಲೂಕು ಆಡಳಿತ ಪ್ರತಿಯೊಬ್ಬ ಗ್ರಾಮಸ್ಥರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಂಡಿದೆ. ಸ್ಥಳದಲ್ಲಿ ಡಿಎಚ್‌ಒ ಡಾ| ಮಹೇಶ ಕೋಣಿ, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಇದ್ದಾರೆ. ಓರ್ವ ಡಿಎಚ್‌ಒ, ತಾಲೂಕಾ ಆರೋಗ್ಯ ಅಧಿಕಾರಿ, ಮೂವರು ಸಿಎಚ್‌ಒ, ನಾಲ್ವರು ವೈದ್ಯರು ಸೇರಿ 33 ಸಿಬ್ಬಂದಿ ನಿಯೋಜಿಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ಬೆಳಗ್ಗೆಯಿಂದ ಮತ್ತೆ 45 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಂತಿ ಭೇದಿ, ಸುಸ್ತು, ರಕ್ತದೊತ್ತಡ ಸಮಸ್ಯೆ ಕಂಡುಬಂದವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.