Advertisement

ಮಳೆ-ಪ್ರವಾಹ ಹಾನಿ ಪರಿಹಾರಕ್ಕೆ ಕ್ರಮ

03:08 PM Sep 18, 2022 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ವೇಳೆ, ಮನೆಗೆ ನೀರು ನುಗ್ಗಿದಾಗ ಹಲವರು ತಮ್ಮ ತಮ್ಮ ಬೀಗರ ಮನೆಗೆ ಹೋಗಿರುವ ಸಾಧ್ಯತೆ ಇರುತ್ತದೆ. ಮನೆ ಹಾನಿ ಕುರಿತು ಜಂಟಿ ಸಮೀಕ್ಷೆಯ ವೇಳೆ ಅಂತಹವರ ಮನೆಗಳನ್ನು ಸಮೀಕ್ಷೆಯಿಂದ ಕೈಬಿಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಿ.ಸಿ. ಪಾಟೀಲ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾನಿ ಸಮೀಕ್ಷೆಗೆ ಇಂಜಿನಿಯರ್‌ಗಳ ಕೊರತೆ ಇದ್ದಲ್ಲಿ ಬೇರೆ ಬೇರೆ ಇಲಾಖೆಗಳ ಇಂಜಿನಿಯರ್‌ಗಳನ್ನು ನಿಯೋಜಿಸಿಕೊಂಡು ತಕ್ಷಣ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ನಿರಂತರ ಮಳೆ ಮತ್ತು ಪ್ರವಾಹ ಸನ್ನಿವೇಶ ನೋಡಿಕೊಂಡು ಜನ ಸಂಬಂಧಿಕರ ಮನೆಗೆ ಹೋಗಿರುತ್ತಾರೆ. ಇದನ್ನೇ ಮನೆಯಲ್ಲಿ ಯಾರು ವಾಸವಿಲ್ಲ ಅಂತ ತಿಳಿದು ಆ ಮನೆ ಸಮೀಕ್ಷೆಯಿಂದ ಕೈಬಿಡಬಾರದು. ಬಡವರ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಳೆಗೆ ಹಾನಿಯಾಗಿದ್ದು, ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಸಮೀಕ್ಷೆ ಕೈಗೊಳ್ಳಬೇಕು ಎಂದು ತಿಳಿಸಿದರು.

ಬಾದಾಮಿ ತಾಲೂಕಿಗೆ ಸಂಬಂಧಿಸಿದಂತೆ 2 ಕೋಟಿಗಿಂತ ಹೆಚ್ಚಿನ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಎ ಮತ್ತು ಬಿ-1, ಬಿ-2 ವರ್ಗದ ಮನೆಗಳಿಗೆ ಮೊದಲನೆ ಹಂತದ ಅನುದಾನವನ್ನು ತಕ್ಷಣ ವಿತರಿಸಬೇಕು. ಸಿ ಕೆಟಗೇರಿಯಲ್ಲಿರುವ ಮನೆಗಳಿಗೆ ಒಂದೇ ಬಾರಿಗೆ 50 ಸಾವಿರದಂತೆ ಬಿಡುಗಡೆ ಮಾಡತಕ್ಕದ್ದು, ಅದೇ ರೀತಿ ಇತರೆ ತಾಲೂಕುಗಳಲ್ಲಿ ಆಗಿರುವ ಮನೆ ಹಾನಿಗೆ ಎರಡಿ ದನಗಳಲ್ಲಿ ಪರಿಹಾರ ವಿತರಣೆಯಾಗಬೇಕು. ಇದರ ಜೊತೆಗೆ ಬೆಳೆ ಹಾನಿ ಸಮೀಕ್ಷೆ ಮಾಡುವುದು ಕೂಡ ಅಷ್ಟೇ ಅವಶ್ಯವಿದ್ದು, ಭೂಮಿಯಲ್ಲಿ ನೀರಿನ ತೇವಾಂಶ ಕಡಿಮೆಯಾದ ತಕ್ಷಣ ಕೃಷಿ ಅಧಿಕಾರಿಗಳು ಮುಂದಿನ 10-12 ದಿನಗಳಲ್ಲಿ ಸಮೀಕ್ಷೆ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಸಭೆಗೆ ಮಾಹಿತಿ ನೀಡಿ, ಪ್ರಾಥಮಿಕ ವರದಿ ಪ್ರಕಾರ ಸೆ. 1ರಿಂದ 16ರವರೆಗೆ ಜಿಲ್ಲೆಯಲ್ಲಿ ಎ ಕೆಟಗೇರಿಯ 489 ಮನೆ ಹಾಗೂ ಬಿ ಮತ್ತು ಸಿ ಕೆಟಗೇರಿಯ 860 ಮನೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. 326 ಹಳ್ಳಿಗಳ 18929 ಹೇಕ್ಟೇರ್‌ ಪ್ರದೇಶ ಕೃಷಿ ಮತ್ತು 3823 ಹೆಕ್ಟೇರ್‌ ಪ್ರದೇಶ ತೋಟಗಾರಿಕೆ ಬೆಳೆಗಳು ನಾಶವಾಗಿವೆ. 223 ಮನೆಗಳಿಗೆ ನೀರು ನುಗ್ಗಿದ್ದು, 22 ಲಕ್ಷ ಪರಿಹಾರ ಬಿಡುಗಡೆಯಾಗಿರುತ್ತದೆ. 4 ಜೀವ ಹಾನಿಯಾಗಿದ್ದು, ಈಗಾಗಲೇ ಪರಿಹಾರ ಧನ ವಿತರಿಸಲಾಗಿದೆ ಎಂದರು.

Advertisement

ಸಭೆಗೆ ಮುನ್ನ ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾದ ಹಾನಿ ಕುರಿತಾದ ವಿಡಿಯೋ ಚಿತ್ರವನ್ನು ಸಚಿವರು ವೀಕ್ಷಿಸಿದರು ಸಭೆಯಲ್ಲಿ ಶಾಸಕ ವಿರಣ್ಣ ಚರಂತಿಮಠ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ಜಿ.ಪಂ. ಸಿಇಒ ಟಿ. ಭೂಬಾಲನ್‌, ಎಸ್ಪಿ ಜಯಪ್ರಕಾಶ ಹಕ್ಕರಕಿ, ಎಡಿಸಿ ಮಹಾದೇವ ಮುರಗಿ, ಎಸಿ ಶ್ವೇತಾ ಬೀಡಿಕರ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next