Advertisement

ಧರ್ಮಾಂಧತೆ-ಹಿಂಸಾಚಾರ ವಿರುದ್ಧ ಕಿಡಿ

10:00 AM Jun 17, 2022 | Team Udayavani |

ಹುಬ್ಬಳ್ಳಿ: ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್‌ ಜಿಹಾದಿ ಧರ್ಮಾಂಧತೆ, ಹಿಂಸಾಚಾರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ನಿಂದ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್‌ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಭಗವಾನ್‌ ಶ್ರೀರಾಮನ ಜಯಂತಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ವ್ಯವಸ್ಥಿತವಾಗಿ ದಾಳಿ ನಡೆಸಲಾಯಿತು. ಇದರಿಂದಾಗಿ ಹಲವೆಡೆ ಕರ್ಫ್ಯೂ ವಿಧಿಸಲಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಮಾಜ ತಾಳ್ಮೆ ಕಾಯ್ದುಕೊಂಡಿತು, ಇದರಿಂದಾಗಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ನಂತರ ಕೆಲವೆಡೆ ಶ್ರೀ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟವೂ ನಡೆಯಿತು. ಹಿಂದೂ ಸಮಾಜ ತಮ್ಮ ದೇಶದಲ್ಲಿ ದೇವರುಗಳ ಮೆರವಣಿಗೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಹಿಜಾಬ್‌ ವಿವಾದದ ಸಂದರ್ಭದಲ್ಲೂ ಭಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಹಲವೆಡೆ ದಾಳಿಗಳು ನಡೆದವು. ಇತ್ತೀಚೆಗೆ ಸಹೋದರಿ ನೂಪುರ ಶರ್ಮಾ ಮತ್ತು ನವೀನ ಜಿಂದಾಲ್‌ ಅವರ ಹೇಳಿಕೆಗಳ ಮೇಲೆ, ಕಳೆದ ಎರಡು ಶುಕ್ರವಾರ ಪ್ರಾರ್ಥನೆಯ ನಂತರ ಹೊರ ಬಂದ ಗಲಭೆಕೋರರು ಹಿಂದೂ ಮನೆಗಳು, ಅಂಗಡಿಗಳು, ವಾಹನಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಯಿತು. ಸರ್ಕಾರಿ ಆಸ್ತಿ, ದೇವಸ್ಥಾನಗಳಿಗೂ ಅಪಾರ ಹಾನಿಯಾಗಿದೆ. ಪೊಲೀಸ್‌ ಪಡೆಗಳ ಮೇಲೂ ದಾಳಿ ನಡೆಸಲಾಯಿತು. ಹಲವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಧರ್ಮದ್ರೋಹಿಗಳಿಂದ ಅನಿಯಂತ್ರಿತ ಪ್ರಚಾರ ಮಾಡಲಾಗುತ್ತಿದೆ. ಕೋಮು ದ್ವೇಷ ಹರಡುವ ಹೇಳಿಕೆಗಳನ್ನು ನೀಡಲಾಗಿದ್ದರೂ ದೇಶದ ಹಲವು ಜಾತ್ಯತೀತ ಪಕ್ಷಗಳು ಮೌನ ವಹಿಸಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವ ಹಲವು ರಾಜಕೀಯ ಪಕ್ಷಗಳು ಕಳೆದೆರಡು ಶುಕ್ರವಾರ ನಡೆದ ಪ್ರಜಾಪ್ರಭುತ್ವದ ಕೊಲೆಗೆ ಮೌನ ವಹಿಸಿವೆ. ಈ ದಾಳಿಗಳಿಂದ ಇಡೀ ದೇಶದ ಹಿಂದೂ ಸಮಾಜಕ್ಕೆ ನೋವಾಗಿದೆ. ದೇಶಾದ್ಯಂತ ಹಿಂದೂ ಸಮಾಜವು ಘಟನೆಗಳ ವಿರುದ್ಧ ಧರಣಿ ಮತ್ತು ಜ್ಞಾಪಕ ಪತ್ರದ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ದೇಶಾದ್ಯಂತ ಇಂತಹ ದ್ವೇಷಪೂರಿತ ಭಾಷಣ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಕುರಿತು ರಾಷ್ಟ್ರಪತಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಬೇಕೆಂದು ಹಿಂದೂ ಸಮಾಜದ ಪರವಾಗಿ ವಿಶ್ವ ಹಿಂದೂ ಪರಿಷದ್‌ ಒತ್ತಾಯಿಸಿದೆ.

ಕೆ.ಗೋವರ್ಧನ ರಾವ, ರಮೇಶ ಕದಂ, ಸುಭಾಸಸಿಂಗ ಜಮಾದಾರ, ಚಂದ್ರಶೇಖರ ಗೋಕಾಕ, ವಿಜಯ ಕ್ಷೀರಸಾಗರ, ಸುಭಾಸ ಡಂಕ, ಆನಂದ ವಿಶ್ವನಾಥ ಮಠ, ಪ್ರಕಾಶ ಬಳ್ಳಾರಿ, ಚೇತನ ರಾವ, ರಘು ಯಲ್ಲಕ್ಕನವರ, ವಿವೇಕ ಮೂಕಾಶಿ, ಗಂಗಾಧರ ಶೆಟ್ಟರ ಸೇರಿದಂತೆ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next