Advertisement

ಹೈಜಂಪ್‌ನಲ್ಲಿ ಭಾರತಕ್ಕೆ ಮೊದಲ ಪದಕ: ತೇಜಸ್ವಿನ್‌ ಶಂಕರ್‌ ಕಂಚಿನ ತೇಜಸ್ಸು

10:10 PM Aug 04, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ ಹೈಜಂಪ್‌ನಲ್ಲಿ ಭಾರತದ ತೇಜಸ್ವಿನ್‌ ಶಂಕರ್‌ ಕಂಚಿನ ಪದಕ ಗೆದ್ದು ನೂತನ ಮೈಲುಗಲ್ಲು ನೆಟ್ಟರು. ಗೇಮ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಹೈಜಂಪ್‌ ಪದಕ ತಂದಿತ್ತ ಹಿರಿಮೆಗೆ ಪಾತ್ರರಾದರು.

Advertisement

ಬುಧವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ 23 ವರ್ಷದ ತೇಜಸ್ವಿನ್‌ ಶಂಕರ್‌ 2.22 ಮೀ. ಎತ್ತರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಬಹಾಮಸ್‌ನ ಡೊನಾಲ್ಡ್‌ ಥಾಮಸ್‌ ಮತ್ತು ಇಂಗ್ಲೆಂಡ್‌ನ‌ ಜೋಯೆಲ್‌ ಕ್ಲಾರ್ಕ್‌ ಕೂಡ 2.22 ಮೀ. ಎತ್ತರಕ್ಕೇ ನೆಗೆದಿದ್ದರು. ಆದರೆ ಇವರಿಬ್ಬರು ಈ ಎತ್ತರಕ್ಕೆ ಒಂದಕ್ಕೂ ಹೆಚ್ಚು ಸಲ ಜಂಪ್‌ ಮಾಡಿದ್ದರು. ಆದರೆ ತೇಜಸ್ವಿನ್‌ ಶಂಕರ್‌ ಒಂದೇ ಪ್ರಯತ್ನದಲ್ಲಿ ಈ ದೂರ ದಾಖಲಿಸಿದ್ದರಿಂದ ಕಂಚು ಒಲಿಸಿಕೊಂಡರು.

ತೇಜಸ್ವಿನ್‌ ಶಂಕರ್‌ 2.25 ಮೀ. ಹಾಗೂ 2.28 ಮೀ. ಎತ್ತರ ನೆಗೆಯುವ ಪ್ರಯತ್ನದಲ್ಲಿ ವಿಫ‌ಲರಾದರು. ಇಲ್ಲವಾದರೆ ಬೆಳ್ಳಿ ಗೆಲ್ಲಬಹುದಿತ್ತು. 2018ರ ಗೋಲ್ಡ್‌ಕೋಸ್ಟ್‌ ಗೇಮ್ಸ್‌ನಲ್ಲಿ ಶಂಕರ್‌ 2.24 ಮೀಟರ್‌ ನೆಗೆದೂ 6ನೇ ಸ್ಥಾನಿಯಾಗಿದ್ದರು.

ನ್ಯೂಜಿಲ್ಯಾಂಡ್‌ನ‌ ಹಾಮಿಷ್‌ ಕೆರ್ರ ಚಿನ್ನ ಹಾಗೂ ಆಸ್ಟ್ರೇಲಿಯದ ಬ್ರ್ಯಾಂಡನ್‌ ಸ್ಟಾರ್ಕ್‌ ಬೆಳ್ಳಿ ಗೆದ್ದರು. ಇಬ್ಬರದೂ 2.25 ಮೀ. ಸಾಧನೆಯಾಗಿತ್ತು. 2.28 ಮೀ. ಪ್ರಯತ್ನದಲ್ಲಿ ಇಬ್ಬರೂ ವಿಫ‌ಲರಾಗಿದ್ದರು. ಆದರೆ ಕಡಿಮೆ ಪ್ರಯತ್ನದ ಮಾನದಂಡವನ್ನು ಬಳಸಿ ವಿಜೇತರನ್ನು ನಿರ್ಧರಿಸಲಾಯಿತು.

“ನಾನು ಕೆರ್ರ ಹಾಗೂ ಸ್ಟಾರ್ಕ್‌ ಸಾಹಸವನ್ನು ಟಿವಿಯಲ್ಲಿ ತಪ್ಪದೇ ನೋಡುತ್ತಿದ್ದೆ. ಇವರೊಂದಿಗೆ ಪೋಡಿಯಂ ಹಂಚಿಕೊಳ್ಳಲು ಖುಷಿಯಾಗುತ್ತಿದೆ’ ಎಂಬುದು ಶಂಕರ್‌ ಪ್ರತಿಕ್ರಿಯೆ.

Advertisement

ಇದಕ್ಕೂ ಮೊದಲು ಗೇಮ್ಸ್‌ ಹೈಜಂಪ್‌ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಸಾಧನೆ 1970ರ ಎಡಿನ್‌ಬರ್ಗ್‌ ಕೂಟದಲ್ಲಿ ದಾಖಲಾಗಿತ್ತು. ಅಂದು ಭೀಮ ಸಿಂಗ್‌ 2.06 ಮೀ. ಎತ್ತರ ನೆಗೆದಿದ್ದರು.

ನ್ಯಾಯಾಲಯಕ್ಕೆ ಮೊರೆ :

ತೇಜಸ್ವಿನ್‌ ಶಂಕರ್‌ ಈ ಕೂಟಕ್ಕೆ ಆಯ್ಕೆಯಾದುದರ ಹಿಂದೆ ದೊಡ್ಡ ಕತೆ ಇದೆ. ಮೊದಲು ಪ್ರಕಟಗೊಂಡ ಆ್ಯತ್ಲೆಟಿಕ್ಸ್‌ ತಂಡದಲ್ಲಿ ಅವರ ಹೆಸರಿರಲಿಲ್ಲ. ಹೀಗಾಗಿ ದಿಲ್ಲಿ ಹೈಕೋರ್ಟ್‌ ಮೊರೆಹೋದರು. ಪ್ರಸಕ್ತ ಋತುವಿನಲ್ಲಿ 2.27 ಮೀ. ಹಾಗೂ 2.29 ಮೀ. ನೆಗೆತದ ಸಾಧನೆಗೈದರೂ ತನ್ನನ್ನು ಕಡೆಗಣಿಸಲಾಗಿದೆ ಎಂಬುದು ಇವರ ಆರೋಪವಾಗಿತ್ತು. ಇದನ್ನು ಎತ್ತಿಹಿಡಿದ ನ್ಯಾಯಪೀಠ ಶಂಕರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿತು.

ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ ಇದನ್ನು ಗೇಮ್ಸ್‌ ಸಂಘಟಕರಿಗೆ ತಿಳಿಸಿತು. ಜು. 22ರಂದಷ್ಟೇ ಶಂಕರ್‌ ಭಾರತ ತಂಡವನ್ನು ಸೇರಿಕೊಂಡಿದ್ದರು. ಇದೀಗ ತಮ್ಮ ಆಯ್ಕೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡರು. ಭಾರತಕ್ಕೆ ಪದಕದೊಂದಿಗೆ ಮರಳಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next