Advertisement

ಕಾಮನ್ವೆಲ್ತ್‌ ಗೇಮ್ಸ್‌ : ವನಿತಾ ಕ್ರಿಕೆಟ್‌ ಗೆಲುವನ್ನು ಕೈಚೆಲ್ಲಿದ ಭಾರತ

11:05 PM Jul 29, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ ಇತಿಹಾಸದ ವನಿತಾ ಕ್ರಿಕೆಟ್‌ ಉದ್ಘಾಟನ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ಕೈಯಲ್ಲಿದ್ದ ಪಂದ್ಯವನ್ನು ಕಳೆದುಕೊಂಡು ಕೈ ಕೈ ಹಿಸುಕಿಕೊಂಡಿತು.

Advertisement

ನಿರಂತರ ಕುಸಿತದ ಹೊರತಾಗಿಯೂ ಅಮೋಘ ಹೋರಾಟ ಸಂಘಟಿಸಿದ ಆಸ್ಟ್ರೇಲಿಯ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಓಪನರ್‌ ಶಫಾಲಿ ವರ್ಮ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಆಕರ್ಷಕ ಆಟದ ನೆರವಿನಿಂದ 6 ವಿಕೆಟಿಗೆ 154 ರನ್‌ ಪೇರಿಸಿತು. ಆಸ್ಟ್ರೇಲಿಯ 19 ಓವರ್‌ಗಳಲ್ಲಿ 7 ವಿಕೆಟಿಗೆ 157 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಕುಸಿತದಿಂದ ನೆಗೆತ
ರೇಣುಕಾ ಸಿಂಗ್‌ ದಾಳಿಗೆ ತತ್ತರಿಸಿದ ಆಸೀಸ್‌ 49 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. 15ನೇ ಓವರ್‌ನಲ್ಲಿ 110ಕ್ಕೆ 7ನೇ ವಿಕೆಟ್‌ ಪತನಗೊಂಡಾಗಲೂ ಪಂದ್ಯ ಭಾರತದ ಕೈಯಲ್ಲೇ ಇತ್ತು. ಆದರೆ ಕೆಳ ಕ್ರಮಾಂಕದ ಆಟಗಾರರಾದ ಆ್ಯಶ್ಲಿ ಗಾರ್ಡನರ್‌, ಗ್ರೇಸ್‌ ಹ್ಯಾರಿಸ್‌ ಮತ್ತು ಅಲಾನಾ ಕಿಂಗ್‌ ಸೇರಿಕೊಂಡು ಮುನ್ನುಗ್ಗಿ ಬೀಸತೊಡಗುವುದರೊಂದಿಗೆ ಪಂದ್ಯದ ಗತಿಯೇ ಬದಲಾಯಿತು. ಭಾರತದ ಬೌಲಿಂಗ್‌ ಧೂಳೀಪಟಗೊಂಡಿತು.

ಗಾರ್ಡನರ್‌-ಕಿಂಗ್‌ ಮುರಿಯದ 8ನೇ ವಿಕೆಟಿಗೆ ಕೇವಲ 4.4 ಓವರ್‌ಗಳಲ್ಲಿ 47 ರನ್‌ ಸಿಡಿಸಿ ಆಸ್ಟ್ರೇಲಿಯದ ಗೆಲುವನ್ನು ಸಾರಿದರು. ಗಾರ್ಡನರ್‌ ಗಳಿಕೆ 35 ಎಸೆತಗಳಿಂದ ಅಜೇಯ 52 ರನ್‌ (9 ಬೌಂಡರಿ). ಕಿಂಗ್‌ 18 ರನ್‌ ಮಾಡಿ ಔಟಾಗದೆ ಉಳಿದರು. ಹ್ಯಾರಿಸ್‌ ಕೊಡುಗೆ 20 ಎಸೆತಗಳಿಂದ 37 ರನ್‌ (5 ಫೋರ್‌, 2 ಸಿಕ್ಸರ್‌). 14 ರನ್ನಿಗೆ 4 ವಿಕೆಟ್‌ ಉರುಳಿಸಿದ ರೇಣುಕಾ ಸಿಂಗ್‌ ಸಾಹಸ ವ್ಯರ್ಥವಾಯಿತು.

Advertisement

ಕೌರ್‌ ಅರ್ಧ ಶತಕ
ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ನಾಯಕಿ ಕೌರ್‌ ಸರ್ವಾಧಿಕ 52 ರನ್‌ ಹೊಡೆದರು (34 ಎಸೆತ, 8 ಫೋರ್‌, 1 ಸಿಕ್ಸರ್‌). ಶಫಾಲಿ 33 ಎಸೆತಗಳಿಂದ 48 ರನ್‌ (33 ಎಸೆತ, 9 ಬೌಂಡರಿ), ಸ್ಮತಿ ಮಂಧನಾ 24 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 154 (ಕೌರ್‌ 52, ಶಫಾಲಿ 48, ಮಂಧನಾ 24, ಜೊನಾಸೆನ್‌ 22ಕ್ಕೆ 4, ಶಟ್‌ 26ಕ್ಕೆ 2). ಆಸ್ಟ್ರೇಲಿಯ-19 ಓವರ್‌ಗಳಲ್ಲಿ 7 ವಿಕೆಟಿಗೆ 157 (ಗಾರ್ಡನರ್‌ ಔಟಾಗದೆ 52, ಹ್ಯಾರಿಸ್‌ 37, ಕಿಂಗ್‌ ಔಟಾಗದೆ 18, ರೇಣುಕಾ 18ಕ್ಕೆ 4, ದೀಪ್ತಿ 24ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next