Advertisement
ಭಾರತದ ಹೆಗ್ಗಳಿಕೆ: ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಸಾಧನೆ ಗಮನಾರ್ಹ ಮಟ್ಟದಲ್ಲೇ ಇದೆ. ಒಟ್ಟು ಪದಕ ಸಾಧನೆಯಲ್ಲಿ 4ನೇ ಸ್ಥಾನವೆಂಬುದು ಭಾರತದ ಹೆಗ್ಗಳಿಕೆ. ಈವರೆಗೆ 181 ಚಿನ್ನ, 173 ಬೆಳ್ಳಿ ಹಾಗೂ 149 ಕಂಚು ಸೇರಿದಂತೆ ಒಟ್ಟು 503 ಪದಕ ಗೆದ್ದಿದೆ. ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಕೆನಡಾ ಮೊದಲ 3 ಸ್ಥಾನದಲ್ಲಿವೆ. 2002ರಿಂದೀಚೆ ನಿರಂತರವಾಗಿ ಟಾಪ್-5 ಸ್ಥಾನವನ್ನು ಕಾಯ್ದುಕೊಂಡು ಬರುತ್ತಿರುವುದು ಭಾರತದ ಹೆಗ್ಗಳಿಕೆ.
4 ವರ್ಷಗಳ ಹಿಂದೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತ 66 ಪದಕ ಜಯಿಸಿತ್ತು. ಇದರಲ್ಲಿ 7 ಚಿನ್ನ ಸೇರಿದಂತೆ ಶೇ. 25ರಷ್ಟು ಪದಕ ಶೂಟಿಂಗ್ ಒಂದರಲ್ಲೇ ಬಂದಿತ್ತು. ಶೂಟಿಂಗ್ ಪದಕಗಳ ಕೊರತೆಯನ್ನು ಭಾರತಕ್ಕೆ ನೀಗಿಸಿಕೊಳ್ಳಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ. ಉಳಿದಂತೆ ವೇಟ್‌ಲಿಫ್ಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ರೆಸ್ಲಿಂಗ್, ಟೇಬಲ್ ಟೆನಿಸ್, ಆ್ಯತ್ಲೆಟಿಕ್ಸ್ ನಲ್ಲಿ ನಮ್ಮವರು ಯಶಸ್ಸು ಸಾಧಿಸಬಹುದಾದರೂ ಸ್ವರ್ಣ ಪದಕ ಸಂಖ್ಯೆಯಲ್ಲಿ ಒಂದಿಷ್ಟು ಇಳಿಮುಖವಾಗುವ ಸಾಧ್ಯತೆ ಹೆಚ್ಚಿದೆ. ಸ್ಕ್ವಾಷ್, ಸ್ವಿಮ್ಮಿಂಗ್, ಸೈಕ್ಲಿಂಗ್, ಜಿಮ್ನಾಸ್ಟಿಕ್ ಜೂಡೊ, ಟ್ರಯತ್ಲಾನ್, ಲಾನ್ ಬೌಲ್ಸ್‌ನಲ್ಲಿ ಭಾರತ ಪಾಲ್ಗೊಳ್ಳಲಿದೆ. ಮೊದಲ ಸಲ ಅಳವಡಿ ಸಲಾದ ವನಿತಾ ಟಿ20 ಕ್ರಿಕೆಟ್‌ನಲ್ಲಿ ಭಾರತ ಫೇವರಿಟ್ ಆಗಿದೆ.
Related Articles
Advertisement
ಕುಸ್ತಿಯಲ್ಲಿ ನಿರೀಕ್ಷೆ: ಕುಸ್ತಿ ಸ್ಪರ್ಧೆಯಲ್ಲಿ ಆಖಾಡಕ್ಕಿಳಿಯಲಿ ರುವ ಎಲ್ಲ 12 ಮಂದಿಯ ಮೇಲೂ ಪದಕ ಭರವಸೆ ಇರಿಸಿಕೊಳ್ಳ ಲಾಗಿದೆ. ಹಾಲಿ ಚಾಂಪಿಯನ್‌ಗಳಾದ ವಿನೇಶ್ ಪೋಗಟ್, ಬಜರಂಗ್ ಪೂನಿಯ ಪೋಡಿಯಂ ಏರುವುದು ಖಚಿತ ಎನ್ನಲಡ್ಡಿ ಯಿಲ್ಲ. ಗೋಲ್ಡ್‌ಕೋಸ್ಟ್ ಕುಸ್ತಿಯಲ್ಲಿ ಭಾರತಕ್ಕೆ 5 ಚಿನ್ನ ಸೇರಿದಂತೆ 12 ಪದಕ ಒಲಿದಿತ್ತು.
ವೇಟ್‌ಲಿಫ್ಟಿಂಗ್‌ಗೆ ಚಾನು: ಗೋಲ್ಡ್‌ಕೋಸ್ಟ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ 9 ಪದಕ ಗೆದ್ದಿತ್ತು. ಇದರಲ್ಲಿ 4 ಬಂಗಾರ. ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಮೇಲೆ ಬಂಗಾರದ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಬ್ಯಾಡ್ಮಿಂಟನ್‌ಗೆ ಸಿಂಧು: ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು “ಸ್ವರ್ಣ ಸಿಂಧೂರಿ’ ಎನಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾದ ಕೆ. ಶ್ರೀಕಾಂತ್, ಲಕ್ಷ್ಯ ಸೇನ್ ಕೂಡ ಮೆಡಲ್ ರೇಸ್‌ನಲ್ಲಿದ್ದಾರೆ.
ಹಾಕಿ ಪದಕ ಗೆಲ್ಲಬೇಕಿದೆ: ಗೋಲ್ಡ್‌ಕೋಸ್ಟ್‌ನಲ್ಲಿ ಭಾರತದ ಹಾಕಿ ತಂಡಗಳೆರಡೂ ಬರಿಗೈಯಲ್ಲಿ ವಾಪಸಾಗಿದ್ದವು. ಇಲ್ಲಿ ಟೋಕಿಯೊ ಯಶಸ್ಸು ಸ್ಫೂರ್ತಿಯಾದರೆ 2 ಪದಕಗಳನ್ನು ನಿರೀಕ್ಷಿಸಲಡ್ಡಿಯಿಲ್ಲ.
ಟಿಟಿಯಲ್ಲಿ ಟಾಪ್: ಕಳೆದ ಗೇಮ್ಸ್‌ನಲ್ಲಿ ಭಾರತ ಟಿಟಿಯಲ್ಲಿ 8 ಪದಕ ಗೆದ್ದು ಟಾಪರ್ ಆಗಿತ್ತು. ಇದರಲ್ಲಿ ನಾಲ್ಕನ್ನು ಮಣಿಕಾ ಬಾತ್ರಾ ಒಬ್ಬರೇ ತಂದಿತ್ತಿದ್ದರು.
ಪಿ.ವಿ. ಸಿಂಧು ಭಾರತದ ಧ್ವಜಧಾರಿಅವಳಿ ಒಲಿಂಪಿಕ್ಸ್ ಪದಕ ಗೆದ್ದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನ ಸಮಾರಂಭದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜಧಾರಿಯಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಇದನ್ನು ಪ್ರಕಟಿಸಿತು. ಸಿಂಧು 2018ರ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲೂ ಭಾರತದ ಧ್ವಜಧಾರಿಯಾಗಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಈ ಅವಕಾಶ ನೀರಜ್ ಚೋಪ್ರಾ ಅವರದ್ದಾಗಿತ್ತು. ಆದರೆ ಅವರು ಗಾಯಾಳಾಗಿ ಹಿಂದೆ ಸರಿದ ಕಾರಣ ಸಿಂಧು ಅವರಿಗೆ ಈ ಅವಕಾಶ ಲಭಿಸಿತು. ಗೇಮ್ಸ್‌ನಲ್ಲಿ ಭಾರತದ 215 ಕ್ರೀಡಾಪಟುಗಳು ಸ್ಪರ್ಧಿಸಲಿದ್ದು, ಉದ್ಘಾಟನ ಸಮಾರಂಭದಲ್ಲಿ 164 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಭಾರತೀಯ ಕಾಲಮಾನದಂತೆ ಗುರುವಾರ ರಾತ್ರಿ 11.30ಕ್ಕೆ ಉದ್ಘಾಟನ ಸಮಾರಂಭ ಆರಂಭಗೊಳ್ಳಲಿದೆ. ಹೇಗಿರಲಿದೆ ಉದ್ಘಾಟನ ಸಮಾರಂಭ?
ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಕ್ತಾಯ ಸಮಾರಂಭವೂ ಇಲ್ಲೇ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ 30,000 ಮಂದಿ ಪ್ರೇಕ್ಷಕರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಇಂಗ್ಲಿಷ್ ಸಂಗೀತಗಾರ ಡುರಾನ್ ಪ್ರದರ್ಶನ ನೀಡಲಿದ್ದಾರೆ. ಅಂದಾಜು 2 ಗಂಟೆಗಳ ಕಾರ್ಯಕ್ರಮವನ್ನು ನಿರೀಕ್ಷಿಸಲಾಗಿದೆ. ಬ್ರಿಟನ್ನಿನ, ಮುಖ್ಯವಾಗಿ ಬರ್ಮಿಂಗ್‌ಹ್ಯಾಮ್‌ನ ವೈವಿಧ್ಯಮಯ ಸಂಸ್ಕೃತಿ, ಜನಜೀವನದ ಚಿತ್ರಣ ಇಲ್ಲಿರಲಿದೆ. 5,000 ಆ್ಯತ್ಲೀಟ್‌ಗಳು, 280 ಸ್ಪರ್ಧೆ
ಕೂಟದಲ್ಲಿ 5,000ಕ್ಕೂ ಅಧಿಕ ಆ್ಯತ್ಲೀಟ್‌ಗಳು ಭಾಗವಹಿಸಲಿದ್ದಾರೆ. ಒಟ್ಟು 19 ಕ್ರೀಡೆಗಳಿಂದ 280 ಸ್ಪರ್ಧೆಗಳು ನಡೆಯಲಿವೆ. ಒಂದೊಂದು ಕ್ರೀಡೆಯಲ್ಲಿ ಬೇರೆ ಬೇರೆ ಮಾದರಿಯ ಸ್ಪರ್ಧೆಗಳು ನಡೆಯುವುದರಿಂದ 280 ಚಿನ್ನದ ಪದಕಗಳು ಹಂಚಿಕೆಯಾಗಲಿವೆ. ಭಾರತದಿಂದ 210ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಸ್ಪರ್ಧೆಗಳೇ ಜಾಸ್ತಿ!
ವಿಶೇಷವೆಂದರೆ, ಈ ಬಾರಿಯ ಕೂಟದಲ್ಲಿ ಪುರುಷರಿಗಿಂತ ಮಹಿಳಾ ಸ್ಪರ್ಧೆಗಳೇ ಜಾಸ್ತಿ ಇರುವುದು! 136 ಮಹಿಳಾ ವಿಭಾಗದ ಸ್ಪರ್ಧೆಗಳು, 134 ಪುರುಷರ ವಿಭಾಗದ ಸ್ಪರ್ಧೆಗಳು ನಡೆಯಲಿವೆ. 10 ಮಿಶ್ರ ತಂಡ ವಿಭಾಗದ ಸ್ಪರ್ಧೆಗಳೂ ಇವೆ. ಪದಕ ಗೆದ್ದದ್ದು 61 ದೇಶಗಳು ಮಾತ್ರ
ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಹಿಂದೆ ಒಟ್ಟು 61 ದೇಶಗಳು ಪದಕಗಳನ್ನು ಗೆದ್ದಿವೆ. ಈ ಬಾರಿ ಭಾಗವಹಿಸುತ್ತಿರುವ 72 ದೇಶಗಳ ಪೈಕಿ 11 ದೇಶಗಳು ಇನ್ನಷ್ಟೇ ಪದಕದ ಖಾತೆಯನ್ನು ತೆರೆಯಬೇಕಿದೆ.