Advertisement

ಕಾಮನ್‍ವೆಲ್ತ್ ಗೇಮ್ಸ್‌ : ಬ್ಯಾಡ್ಮಿಂಟನ್‌ ಸಿಂಗಲ್ಸ್‌; ಸಿಂಧು, ಶ್ರೀಕಾಂತ್‌ ಗೆಲುವು

10:03 PM Aug 04, 2022 | Team Udayavani |

ಬರ್ಮಿಂಗ್‌ಹ್ಯಾಮ್‌:  ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿಗೆ ಸಮಾಧಾನಪಟ್ಟ ಬಳಿಕ ಭಾರತೀಯ ಬ್ಯಾಡ್ಮಿಂಟನ್‌ ಆಟಗಾರರೀಗ ಸಿಂಗಲ್ಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Advertisement

ಗುರುವಾರದ ಪಂದ್ಯಗಳಲ್ಲಿ ಪಿ.ವಿ.ಸಿಂಧು ಮತ್ತು ಕೆ. ಶ್ರೀಕಾಂತ್‌ ಗೆಲುವು ಸಾಧಿಸಿ ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪಿ.ವಿ.ಸಿಂಧು ಮಾಲ್ಡೀವ್ಸ್‌ನ ಫಾತಿಮಾತ್‌ ನಬಾಹಾ ಅಬ್ದುಲ್‌ ರಜಾಕ್‌ ಅವರನ್ನು ಬಹಳ ಸುಲಭದಲ್ಲಿ 21-4, 21-11 ಅಂತರದಿಂದ ಸೋಲಿಸಿದರು. ಕೆ. ಶ್ರೀಕಾಂತ್‌ ಉಗಾಂಡದ ಡೇನಿಯಲ್‌ ವನಗಲಿಯ ವಿರುದ್ಧ 21-9, 21-9 ಅಂತರದ ಜಯ ಸಾಧಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಬಿ. ಸುಮೀತ್‌ ರೆಡ್ಡಿ ಅವರಿಗೆ ಇಂಗ್ಲೆಂಡಿನ ಜೆಸಿಕಾ ಪಗ್‌-ಕಾಲಂ ಹೆಮ್ಮಿಂಗ್‌ ಜೋಡಿಯ ಸವಾಲನ್ನು ಮೀರಿ ನಿಲ್ಲಲಾಗಲಿಲ್ಲ. ಇಲ್ಲಿ ಆತಿಥೇಯ ನಾಡಿನ ಜೋಡಿ 21-18, 21-16 ಅಂತರದ ಗೆಲುವು ಒಲಿಸಿಕೊಂಡಿತು.

ಸ್ಕ್ವಾಷ್‌: ಕ್ವಾ. ಫೈನಲ್‌ಗೆ ಸೌರವ್‌-ದೀಪಿಕಾ : 

Advertisement

ಬರ್ಮಿಂಗ್‌ಹ್ಯಾಮ್‌:  ಸೌರವ್‌ ಘೋಷಾಲ್‌-ದೀಪಿಕಾ ಪಳ್ಳಿಕಪ್‌ ಸ್ಕ್ವಾಷ್‌ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಗುರುವಾರದ ಮುಖಾಮುಖಿಯಲ್ಲಿ ಅವರು ವೇಲ್ಸ್‌ನ ಎಮಿಲಿ ವಿಟ್ಲಾಕ್‌-ಪೀಟರ್‌ ಕ್ರೀಡ್‌ ವಿರುದ್ಧ 11-8, 11-4 ಆಂತರದ ಸುಲಭ ಜಯ ಸಾಧಿಸಿದರು.

ವನಿತೆಯರ ಡಬಲ್ಸ್‌ ಸ್ಪರ್ಧೆಯಲ್ಲಿ ಸುನಯನಾ ಕುರುವಿಲ್ಲ-ಅನಾಹತ್‌ ಸಿಂಗ್‌ ಜೋಡಿ ದ್ವಿತೀಯ ಸುತ್ತು ತಲುಪಿದೆ. ಇವರು ಶ್ರೀಲಂಕಾದ ಯೆಹೆನಿ ಕುರುಪ್ಪು-ಚನಿತ್ಮಾ ಸಿನಾಲಿ ವಿರುದ್ಧ 11-9, 11-4 ಅಂತರದ ಗೆಲುವು ಒಲಿಸಿಕೊಂಡರು.

ಪುರುಷರ ಡಬಲ್ಸ್‌ನಲ್ಲಿ ಅಭಯ್‌ ಸಿಂಗ್‌-ವೇಲವನ್‌ ಸೆಂಥಿಲ್‌ ಕುಮಾರ್‌ ಜೋಡಿ ಮುಂದಿನ ಸುತ್ತು ಮುಟ್ಟಿದೆ. ಆದರೆ ಜೋಶ್ನಾ ಚಿನ್ನಪ್ಪ ಮಿಶ್ರ ಡಬಲ್ಸ್‌ನಲ್ಲೂ ಆಘಾತ ಅನುಭವಿಸಿದರು. ಅನುಭವಿ ಜೋಡಿಯಾದ ಜೋಶ್ನಾ ಚಿನ್ನಪ್ಪ-ಹರೀಂದರ್‌ಪಾಲ್‌ ಸಂಧು ಆಸ್ಟ್ರೇಲಿಯದ ಡೋನ್ನಾ ಲೋಬನ್‌- ಕ್ಯಾಮರಾನ್‌ ಪಿಲ್ಲೆ ಅವರಿಗೆ 8-11, 9-11 ಅಂತರದಿಂದ ಶರಣಾಯಿತು.

ಸೌರವ್‌ ಸಂಭ್ರಮ:

ಬುಧವಾರ ರಾತ್ರಿ ಸೌರವ್‌ ಘೋಷಾಲ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತದ ಗೇಮ್ಸ್‌ ಸಂಭ್ರಮವನ್ನು ಹೆಚ್ಚಿಸಿದ್ದರು. ಇದು ಕಾಮನ್ವೆಲ್ತ್‌ ಗೇಮ್ಸ್‌ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಸ್ಕ್ವಾಷ್‌ ಪದಕವೆಂಬುದು ಉಲ್ಲೇಖನೀಯ.

ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ಗೇರಿದ ಅಮಿತ್‌ ಪಂಘಲ್‌, ಜಾಸ್ಮಿನ್‌:

ಬರ್ಮಿಂಗ್‌ಹ್ಯಾಮ್‌: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕನಿಷ್ಠ ಎರಡು ಕಂಚಿನ ಪದಕಗಳಂತೂ ಖಾತ್ರಿಯಾಗಿವೆ. ಈ ಭರವಸೆ ಮೂಡಿಸಿರುವುದು ಅಮಿತ್‌ ಪಂಘಲ್‌ ಮತ್ತು ಜಾಸ್ಮಿನ್‌. ಇವರಿಬ್ಬರೂ ಸೆಮಿಫೈನಲ್‌ಗೇರಿರುವುದರಿಂದ ಕಂಚಿಗಂತೂ ಚಿಂತೆಯಿಲ್ಲ. ಅಮಿತ್‌ ಪಂಘಲ್‌ ಫ್ಲೈವೇಟ್‌ ವಿಭಾಗದ (48-51 ಕೆಜಿ) ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ‌ ಲೆನ್ನನ್‌ ಮುಲ್ಲಿಗನ್‌ ಅವರನ್ನು ಮಣಿಸಿದರು.

ವನಿತೆಯರ ಲೈಟ್‌ವೇಟ್‌ ವಿಭಾಗದ (60 ಕೆಜಿ) ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಜಾಸ್ಮಿನ್‌ ನ್ಯೂಜಿಲೆಂಡ್‌ನ‌ ಟ್ರಾಯ್‌ ಗಾರ್ಟನ್‌ ಅವರನ್ನು 4-1 ಅಂತರದಿಂದ ಕೆಡವಿದರು. ಇದಕ್ಕೂ ಮೊದಲು ನಿಖತ್‌ ಜರೀನ್‌ (50 ಕೆಜಿ), ನೀತು ಗಂಘಾಸ್‌ (48 ಕೆಜಿ) ಮತ್ತು ಮೊಹಮ್ಮದ್‌ ಹುಸ್ಸಮುದ್ದೀನ್‌ (57 ಕೆಜಿ) ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇಲ್ಲಿ ಗೆಲುವು ಸಾಧಿಸಿದರೆ ಇವರಿಂದಲೂ ಪದಕ ಖಾತ್ರಿಯಾಗಲಿದೆ.

ಒಂದು ವೇಳೆ ಅಮಿತ್‌ ಫ‌ಂಘಲ್‌, ಜಾಸ್ಮಿನ್‌ ಸೆಮಿಫೈನಲ್‌ನಲ್ಲಿ ಗೆದ್ದರೆ ಫೈನಲ್‌ಗೇರಲಿದ್ದಾರೆ. ಆಗ ಭಾರತಕ್ಕೆ ಕನಿಷ್ಠ ಬೆಳ್ಳಿ ಖಾತ್ರಿಯಾಗಲಿದೆ! ಸೆಮೀಸ್‌ನಲ್ಲಿ ಸೋತರೆ ನಿಯಮಾವಳಿಗಳ ಪ್ರಕಾರ ಕಂಚು ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next