ಗೋಲ್ಡ್ ಕೋಸ್ಟ್ : ಇಲ್ಲೀಗ ಸಾಗುತ್ತಿರುವ 2018ರ ಕಾಮನ್ವೆಲ್ತ್ ಗೇಮ್ಸ್ ನ ಇಂದು ಬುಧವಾರದ 7ನೇ ದಿನದಂದು ಶ್ರೇಯಸೀ ಸಿಂಗ್ (96+2) ಅವರು ಆಸ್ಟ್ರೇಲಿಯದ ಎಮಾ ಕೋಕ್ಸ್ (96+1) ಅವರನ್ನು ಮಹಿಳೆಯರ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಸೋಲಿಸುವುದರೊಂದಿಗೆ ಭಾರತಕ್ಕೆ 12ನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು.
ಇದೇ ಸ್ಪರ್ಧೆಯಲ್ಲಿ ಭಾರತದ ವರ್ಷಾ ವರ್ಮನ್ ಅವರು (86) ಸ್ವಲ್ಪ ನಿರಾಶೆಯ ನಿರ್ವಹಣೆ ತೋರಿ ನಾಲ್ಕನೇ ಸ್ಥಾನಿಯಾಗಿ ಮೂಡಿ ಬಂದು ಪದಕ ವಂಚಿತರಾದರು. ಸ್ಕಾಟ್ಲಂಡ್‌ನ ಲಿಂಡಾ ಪಿಯರ್‌ಸನ್ (87) ಅವರು ಈ ಸ್ಪರ್ಧೆಯ ಕಂಚಿನ ಪದಕ ಗೆದ್ದುಕೊಂಡರು.
50 ಎಂ ಪುರುಷರ ಪಿಸ್ಟಲ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ಓಂ ಪ್ರಕಾಶ್ ಕಂಚಿನ ಪದಕ ಗೆದ್ದುಕೊಂಡರು. ಆದರೆ ಹಾಲಿ ಚಾಂಪ್ಯನ್ ಜಿತೂ ರಾಯ್ ಅವರು 8ನೇ ಸ್ಥಾನಿಯಾಗಿ ಅತೀವ ನಿರಾಶೆ ಉಂಟುಮಾಡಿದರು.
ಈ ನಡುವೆ ಭಾರತದ ಮೇರಿ ಕೋಮ್ ಅವರು ಮಹಿಳೆಯರ 46-48 ಕೆಜಿ ಫೈನಲ್ ಪ್ರವೇಶಿಸಿದರು. ಇದಕ್ಕಾಗಿ ಮೇರಿ ಅವರು ಶ್ರೀಲಂಕೆಯ ಅನುಷಾ ದಿಲ್‌ರುಕ್ಷಿ ಅವರನ್ನು 5-0 ಅಂತರದಲ್ಲಿ ಸೋಲಿಸಿದರು.
ಇದರೊಂದಿಗೆ ಭಾರತದ ಪದಕ ಗಳಿಕೆ 12 ಚಿನ್ನ , 4 ಬೆಳ್ಳಿ, 7 ಕಂಚಿನ ಸಾಧನೆಯಲ್ಲಿ ಸ್ಥಿತವಾಯಿತು.