ಬಾಗಲಕೋಟೆ: ಕೊರೊನಾ ಸಂಕಷ್ಟದ ಸಮಯದಲ್ಲಿ ಯಾರೂ ಮನೆಯಿಂದ ಹೊರ ಬರಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಾಲೆ-ಕಾಲೇಜುಗಳನ್ನೂ ಶಿಕ್ಷಕರು ಮನೆಯಿಂದಲೇ ನಡೆಸಬೇಕಾದ ಅನಿವಾರ್ಯ ಎದುರಾಗಿದೆ.
ಗ್ರಾಮೀಣ ಭಾಗದ ಶಿಕ್ಷಕರು, ತಂತ್ರಜ್ಞಾನದಲ್ಲಿ ಸುಧಾರಣೆ ಕಂಡುಕೊಂಡು, ಮಕ್ಕಳಿಗೆ ಬೋಧನೆ ಮಾಡಲು ಸರಳ ವಿಧಾನ ಹೇಳಿಕೊಟ್ಟ ಪಿಯುಸಿ ವಿದ್ಯಾರ್ಥಿಯೊಬ್ಬ, ವಿಶ್ವ ದರ್ಜೆಯ ಕಾಮನ್‌ವೆಲ್ತ್ ಇನ್ನೋವೇಶನ್ ಅವಾರ್ಡ್‌ಗೆ ಭಾಜನನಾಗಿದ್ದಾನೆ.
ಹೌದು, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ, ಬಾಗಲಕೋಟೆ ನವನಗರದ ವಿದ್ಯಾರ್ಥಿ ಮೊಹ್ಮದ ಅಜರುದ್ದೀನ್ ಬಡೇಖಾನ್ ಎಂಬ ವಿದ್ಯಾರ್ಥಿಯೇ ಈ ಕಾಮನ್‌ವೆಲ್ತ ಇನ್ನೋವೇಶನ್ ಅವಾರ್ಡ್‌ಗೆ ಭಾಜವಾದ ವ್ಯಕ್ತಿ. ಬಾಗಲಕೋಟೆಯ ಶಿಕ್ಷಕ ದಂಪತಿಗಳಾದ ರಸೂಲಸಾಹೇಬ ಬಡೇಖಾನ್ ಮತ್ತು ನುಜಹತ್ ಪರವೀನ್ ಅವರ ಹಿರಿಯ ಪುತ್ರ ಮೊಹ್ಮದ ಅಜರುದ್ದೀನ್, ಚಿಕ್ಕಂದಿನಿಂದಲೇ ಕ್ರಿಯೆಟಿವಿಟಿ ವಿದ್ಯಾರ್ಥಿ.
ಬಾಗಲಕೋಟೆಯ ಕೇಂದ್ರೀಯ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿದ ಈತ, ಪ್ರತಿಯೊಂದು ಚಟುವಟಿಕೆಯಲ್ಲೂ ಭಾಗಿಯಾಗುತ್ತಿದ್ದ. ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಈತ, ಇನ್ನೋವೇಶನ್ ಇನ್ ಟೆಕ್ನಾಲಜಿಯಲ್ಲಿ ವಿಶೇಷತೆ ಕೂಡ ಹೊಂದಿದ್ದಾನೆ. ಹೀಗಾಗಿ ಸದಾ ಕ್ರಿಯಾಶೀಲತೆಯಲ್ಲಿರುವ ಈತ, ಕಳೆದ ವರ್ಷದ ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಆನ್‌ಲೈನ್ ಶಿಕ್ಷಣದಲ್ಲಿ ಸುಧಾರಣೆ ಕುರಿತು ದೇಶದ ಸುಮಾರು 4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ್ದ. ಇದರಿಂದ ಆತ ದೇಶಾದ್ಯಂತ ಗುರುತಿಸಿಕೊಂಡಿದ್ದ.
ರಾಜ್ಯದ ಏಕೈಕ ವಿದ್ಯಾರ್ಥಿ : ಕಾಮನ್‌ವೆಲ್ತ್ ಆಫ್ ಲರ್ನಿಂಗ್ ಸಂಸ್ಥೆ ಹಾಗೂ ಥಾಟ್ ಲೀಡರ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಗಳು, ಪ್ರತಿವರ್ಷ ಕಾಮನ್‌ವೆಲ್ತ್ ಸೇಶನ್ ಅಡಿಯಲ್ಲಿ ಕಾಮನ್ ವೆಲ್ತ ಇನ್ನೋವೇಶನ್ ಅವಾರ್ಡ್ ನೀಡುತ್ತವೆ. ಈ ಪ್ರಶಸ್ತಿಗೆ ವಿಶ್ವದ 54 ರಾಷ್ಟ್ರಗಳ ಹಲವು ತಾಂತ್ರಿಕ ನೈಪುಣ್ಯತೆಯುಳ್ಳ ಸ್ಪರ್ಧಿಗಳು ಭಾಗವಹಿಸುತ್ತಾರೆ. ಪ್ರಸ್ತುತ ಜೂನ್ 1ರಂದು ನಡೆದ ಈ ಸ್ಪರ್ಧೆಯಲ್ಲಿ ಭಾರತದ ಐಎಫ್‌ಎಸ್ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿಯೂ ಪಾಲ್ಗೊಂಡಿದ್ದರು. ಭಾರತದಿಂದ ಒಟ್ಟು 16 ಜನ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಕರ್ನಾಟಕದಿಂದ ಬಾಗಲಕೋಟೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹ್ಮದ ಅಜರುದ್ದೀನ್ ಬಡೇಖಾನ್ ಪಾಲ್ಗೊಂಡಿದ್ದ.
ವಿದ್ಯಾರ್ಥಿ ಮೊಹ್ಮದ ಅಜರುದ್ದೀನ್, ಫೆಂಡಾಮಿಕ್ ಇನ್ನೋವೇಶನ್ ಇನ್ ಟೆಕ್ನಾಲಜಿ ಟ್ರೇನಿಂಗ್ ಇನ್ ರೂರಲ್ ಏರಿಯಾಜ್ (ಗ್ರಾಮೀಣ ಶಿಕ್ಷಕರಿಗೆ ತಂತ್ರಜ್ಞಾನದ ತರಬೇತಿ) ವಿಷಯದಲ್ಲಿ ಮಾಡಿದ ಸಾಧನೆಗೆ ಈ ಕಾಮನ್ ವೆಲ್ತ ಇನ್ನೋವೇಶನ್ ಅವಾರ್ಡ ಲಭಿಸಿದೆ. ಅಲ್ಲದೇ ಕಾಮನ್‌ವೆಲ್ತ್ ಆಫ್ ಲರ್ನಿಂಗ್ ಸಂಸ್ಥೆ, ಈ ವಿದ್ಯಾರ್ಥಿಯನ್ನು ಕಾಯಂ ಸದಸ್ಯನನ್ನಾಗಿ ಮಾಡಿದ್ದು, ಇನ್ನು ಮುಂದೆ ಈ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಈ ವಿದ್ಯಾರ್ಥಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ.