Advertisement

Udupi: ಉಡುಪಿಯ ವಿಶ್ವ ಪ್ರಸಿದ್ಧಿಯನ್ನು ಉಳಿಸಲು ಬದ್ಧ: ಪ್ರಸಾದ್‌ರಾಜ್‌ ಕಾಂಚನ್‌

10:16 AM Apr 18, 2023 | Team Udayavani |

ಉಡುಪಿ: ಕಾಂಗ್ರೆಸ್‌ ಪಕ್ಷದ ಕೊಡುಗೆಯಿಂದ ಉಡುಪಿ ಪ್ರಸ್ತುತ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಮಾದರಿ ಯೋಜನೆಗಳ ಮೂಲಕ ಇದೇ ಐತಿಹಾಸವನ್ನು ಮುಂದುವರಿಸಲಿದ್ದೇವೆ ಎಂದು ಕಾಂಗ್ರೆಸ್‌  ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಹೇಳಿದರು.

Advertisement

ಸೋಮವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಬ್ರಹ್ಮಗಿರಿಯ ಕಾಂಗ್ರೆಸ್‌ ಭವನದ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಿಂದ ಶಾಸಕರಾದ ಟಿ.ಎ. ಪೈ, ಯು.ಆರ್‌. ಸಭಾಪತಿ ಮೊದಲಾದವರು ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ನೆಲೆಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯನ್ನು ಈಗ ಮುಂದುವರಿಸಿಕೊಂಡು ಹೋಗಲಿದ್ದೇನೆ. ಸದಾ ಪಕ್ಷದ ಕಾರ್ಯಕರ್ತರ ಜತೆಗೆ ಇರುತ್ತೇನೆ ಎಂದರು.

ಚುನಾವಣೆ ಎದುರಿಸಲು ಎಲ್ಲ ರೀತಿಯಿಂದಲೂ ಸಜ್ಜಾಗಿದ್ದೇವೆ. ಕಾಂಗ್ರೆಸ್‌ಗೆ ಪೂರಕವಾದ ವಾತಾವರಣವಿದೆ. ಕ್ಷೇತ್ರ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆಗಬೇಕಿರುವ ಕಾರ್ಯ, ಯೋಜನೆಗಳ ಕುರಿತ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದೇವೆ ಎಂದರು. ಮಾಜಿ ಸಚಿವ, ಕಾಪು ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಮಾತನಾಡಿ, ಟಿಕೆಟ್‌ ಘೋಷಣೆ ಯಾದ ಸಂದರ್ಭ ಉಡುಪಿಯ ಕೆಲವು ಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಅಪ್ಪಿತಪ್ಪಿ ಇವರು ಗೆದ್ದರೆ ಬಾಂಬ್‌ ಬೀಳಬಹುದು. ಹೀಗಾಗಿ ವಿದ್ಯಾವಂತ ಹಾಗೂ ಜನರ ನೋವುಗಳಿಗೆ ಸ್ಪಂದಿಸುವ ಅಭ್ಯರ್ಥಿಯಾದ ಪ್ರಸಾದ್‌ ರಾಜ್‌ರನ್ನು ಗೆಲ್ಲಿಸುವಂತೆ ಕರೆ ನೀಡಿದರು. ಪಕ್ಷದ ಮುಖಂಡ ನಿತ್ಯಾನಂದ ಶೆಟ್ಟಿ ಮಾತನಾಡಿ, ಪ್ರಸಾದ್‌ರಾಜ್‌ ಕುಟುಂಬ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದೆ. ಸರಳಾ ಕಾಂಚನ್‌ ಅವರು ಬ್ರಹ್ಮಾವರ ಕ್ಷೇತ್ರವಿದ್ದ ಸಂದರ್ಭ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು ಎಂದರು.

ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಬ್ಲಾಕ್‌ ಅಧ್ಯಕ್ಷರಾದ ರಮೇಶ್‌ ಕಾಂಚನ್‌, ದಿನಕರ ಹೇರೂರು, ಮೀನುಗಾರಿಕ ಕಾಂಗ್ರೆಸ್‌ನ ಮಂಜುನಾಥ್‌, ಜಿಲ್ಲಾ ವಕ್ತಾರ ಭಾಸ್ಕರ್‌ ರಾವ್‌ ಕಿದಿಯೂರು, ಪ್ರಮುಖರಾದ ಎಂ.ಎ. ಗಫ‌ೂರ್‌, ಸರಳಾ ಕಾಂಚನ್‌, ಪ್ರಖ್ಯಾತ್‌ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಅಮೃತ್‌ ಶೆಣೈ, ಬಿ. ನರಸಿಂಹಮೂರ್ತಿ, ಕುಶಲ್‌ ಶೆಟ್ಟಿ, ಅಣ್ಣಯ್ಯ ಶೇರಿಗಾರ್‌, ಜಯಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

“ಮಿಷನ್‌ ಉಡುಪಿ 23′

ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ರಾಜ್‌ ಕಾಂಚನ್‌ ಅವರ “ಮಿಷನ್‌ ಉಡುಪಿ 23′ ಹೊಸ ದೃಷ್ಟಿ ಹೊಸ ಸೃಷ್ಟಿ ಶೀರ್ಷಿಕೆಯಡಿಲ್ಲಿ ಪ್ರಣಾಳಿಕೆಯನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಲಾಯಿತು. ಉಡುಪಿ ನಗರದ ನೀರಿನ ಸಮಸ್ಯೆ ಮುಕ್ತಿ, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗಾಗಿ ಕೃಷಿ, ಮೀನುಗಾರಿಕೆ ಉದ್ಯಮಕ್ಕೆ ಉತ್ತೇಜನ, ಸರಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ಮೇಲ್ದರ್ಜೆಗೆ ಏರಿಸುವುದು, ನಗರ ಪ್ರದೇಶದ ಏಕವಿನ್ಯಾಸ ಪರವಾನಿಗೆ ಸಮಸ್ಯೆಗೆ ಪರಿಹಾರ, ಸರಕಾರಿ ಕಚೇರಿಯಲ್ಲಿ ತ್ವರಿತ ಸೇವೆಯ ಜತೆಗೆ ಲಂಚ ಮುಕ್ತಗೊಳಿಸಲು ಕ್ರಮ, ಮಲ್ಪೆ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಆದ್ಯತೆ, ಮೀನುಗಾರಿಕೆ ಕಾಲೇಜು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಶೇಷ ಪ್ರಯತ್ನ, ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಐಟಿ ಪಾರ್ಕ್‌ ಸ್ಥಾಪನೆ, ಒಳಚರಂಡಿ ವ್ಯವಸ್ಥೆ ಸುಧಾರಿಸಲು ವಿಶೇಷ ಯೋಜನೆ ಸೇರಿದಂತೆ ಕಾಂಗ್ರೆಸ್‌ ಪಕ್ಷ ಈಗಾಗಲೇ ಕರಾವಳಿಗೆ ಘೋಷಿಸಿದ್ದ ಅಂಶಗಳನ್ನು ಒಳಗೊಂಡಂತೆ ಉಡುಪಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಅನೇಕ ಅಂಶಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖೀಸಲಾಗಿದೆ.

ಕನಸು ಆಶಯ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನ, ಸರಕಾರಿ ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜು, ವಾರಾಹಿ ಯೋಜನೆ, ಬ್ರಹ್ಮಾವರ ಒಳಚರಂಡಿ ಸಮಸ್ಯೆಗೆ ಸೂಕ್ತ ಪರಿಹಾರ, ಐಟಿ ಹಬ್‌ ರಚನೆ, ತಿಮ್ಮಪ್ಪ ಕುದ್ರು-ಬ್ರಹ್ಮಾವರ ಸಂಪರ್ಕ ಸೇತುವೆ, ಹೊನ್ನಾಳ-ಹಂಗಾರಕಟ್ಟೆ ಹಾಗೂ ಹೊನ್ನಾಳ ಬೆಂಗ್ರೆ ಸೇತುವೆ ರಚನೆ, ಚಾಂತಾರು ಕೆರೆ ಅಭಿವೃದ್ಧಿ ಸಹಿತ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನ ಮಾಡಲಿದ್ದೇವೆ ಎಂದು ಪ್ರಸಾದ್‌ರಾಜ್‌ ಕಾಂಚನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next