Advertisement

ಗೋ ಶಾಲೆಗಳಿಗೆ ಆರ್ಥಿಕ ನೆರವು ನೀಡಲು ಬದ್ಧ; ಸಚಿವ ಪ್ರಭು ಚವ್ಹಾಣ್‌

06:25 PM Nov 26, 2022 | Nagendra Trasi |

ಶಿವಮೊಗ್ಗ: ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಗೋಶಾಲೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

Advertisement

ಶುಕ್ರವಾರ ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದಲ್ಲಿ ಕರ್ಕಿ ಶ್ರೀಮಠದ ಸಹಕಾರದೊಂದಿಗೆ ನಡೆಯುತ್ತಿರುವ ಜ್ಞಾನೇಶ್ವರಿ ಗೋಶಾಲೆಗೆ ಭೇಟಿ ನೀಡಿ, ಗೋಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಕಸಾಯಿಖಾನೆಗೆ ಹೋಗುತ್ತಿರುವ ಗೋವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಗೋಶಾಲೆಗಳಿಗೆ ಬರುತ್ತಿರುವ ಜಾನುವಾರುಗಳ
ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದರು.

ರಾಜ್ಯಾದ್ಯಂತ ಸರ್ಕಾರದ ವತಿಯಿಂದಲೇ ಒಟ್ಟು 100 ಗೋಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಗೋಶಾಲೆಗಳ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿದ್ದು, ಅವುಗಳ ವೇಗ ಹೆಚ್ಚಿಸಲಾಗುವುದು. ಈಗಾಗಲೇ ಘೋಷಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳ ಆರಂಭಕ್ಕೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ. ಕೆಲವು ಕಡೆ ಸ್ಥಳ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು, ಸರ್ಕಾರದ ಈ ಮಹತ್ವದ ಕಾರ್ಯದೊಂದಿಗೆ ಸಾಕಷ್ಟು ಸಂಖ್ಯೆಯ ದಾನಿಗಳು ಗೋಶಾಲೆಗಳಿಗೆ ಉದಾರ ದಾನ ನೀಡಲು ಆಸಕ್ತಿ ತೋರಿಸಿದ್ದಾರೆ ಎಂದರು.

ರಾಜ್ಯ ಸರ್ಕಾರದ ಪುಣ್ಯಕೋಟಿ ವಿಶೇಷ ಯೋಜನೆಯಡಿ ಗೋವಿನ ಸಂತತಿ ರಕ್ಷಣೆ ಹಾಗೂ ಗೋಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಸರ್ಕಾರಿ ನೌಕರರಿಂದ ಸುಮಾರು 100 ಕೋಟಿ ರೂ. ಸಹಾಯಧನ ನೀಡುತ್ತಿರುವುದು ಈ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.

ಪ್ರಸ್ತುತ ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ ನೀಡಲಾಗುತ್ತಿರುವ 17 ರೂ.ಗಳನ್ನು ಗುಜರಾತ್‌ ದಲ್ಲಿರುವಂತೆ 30 ರೂ.ಗಳಿಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಶೀಘ್ರವೇ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ಅನುಷ್ಠಾನಕ್ಕೆ ತರಲಾಗುವುದು ಎಂದರು.

Advertisement

ಚಿತ್ರನಟ ಸುದೀಪ್‌ ಅವರನ್ನು ಪಶುಪಾಲನಾ ಇಲಾಖೆಯ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ ನಟ ಸುದೀಪ್‌ ಅವರು 31 ಗೋವುಗಳನ್ನು ದತ್ತು ಸ್ವೀಕರಿಸಿದ್ದಾರೆ. ಅಲ್ಲದೇ ತಾವು 31 ಗೋವುಗಳನ್ನು ದತ್ತು ಪಡೆದಿದ್ದು, ಮುಖ್ಯಮಂತ್ರಿಗಳು 11ಗೋವುಗಳನ್ನು ದತ್ತು ಪಡೆದು ತಮ್ಮ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಹೀಗೆ ಸಾರ್ವಜನಿಕರೂ ಕೂಡ ಇದೇ ಮಾದರಿಯಲ್ಲಿ ಗೋವುಗಳನ್ನು ದತ್ತು ಪಡೆದು ಗೋವುಗಳ ರಕ್ಷಣೆಗೆ ಮುಂದಾಗಬೇಕು. ರಾಜ್ಯದ ಎಲ್ಲಾ ಚುನಾಯಿತ ಪ್ರತಿನಿಧಿ ಗಳು ತಮ್ಮ ಕಾರ್ಯಕ್ಷೇತ್ರದ ಒಂದು ಗೋಶಾಲೆಯನ್ನು ದತ್ತು ಪಡೆದು ನಿರ್ವಹಿಸಲು ಮನವಿ ಮಾಡಲಾಗುವುದು ಎಂದರು.

ಪಶುಪಾಲನಾ ಇಲಾಖೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಈಗಾಗಲೇ 400 ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಗೆ ಸಂಬಂಧಿ ಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಪ್ರಕರಣ ಇತ್ಯರ್ಥಗೊಂಡ ನಂತರ ನೇಮಕಗೊಂಡ ಅಭ್ಯರ್ಥಿಗಳಿಗೆ ಕರ್ತವ್ಯದ ಮೇಲೆ ಹಾಜರಾಗಲು ಸೂಚನಾಪತ್ರ ರವಾನಿಸಲಾಗುವುದು.

ಯಾವುದೇ ಫಲಾಪೇಕ್ಷೆಯಿಲ್ಲದೇ ಗೋವುಗಳನ್ನು ಸಂರಕ್ಷಿಸುತ್ತಿರುವ, ಗೋಶಾಲೆಗಳನ್ನು ನಡೆಸುತ್ತಿರುವ ಸಂಘ-ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು. ಶಿವಮೊಗ್ಗದ ಸುರಭಿ ಗೋಶಾಲೆಯ ಮುಖ್ಯಸ್ಥ ನಟರಾಜ್‌ ಭಾಗ್ವತ್‌, ಮಹಾವೀರ ಗೋಶಾಲೆಯ ಮುಖ್ಯಸ್ಥ ಬಾಬುಲಾಲ್‌ ಜೈನ್‌, ಜ್ಞಾನೇಶ್ವರಿ ಗೋಶಾಲೆಯ ಮುಖ್ಯಸ್ಥ ಚಂದ್ರಹಾಸ ರಾಯ್ಕರ್‌ ಹಾಗೂ ಸೋಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next