Advertisement

ಈಗ ಸೆಬಿ ರಂಗಪ್ರವೇಶ: ಷೇರು ಮಾರುಕಟ್ಟೆ ಸಮಗ್ರತೆ ರಕ್ಷಣೆಗೆ ಬದ್ಧ

04:15 PM Feb 05, 2023 | |

ಹೊಸದಿಲ್ಲಿ: “ಕಳೆದೊಂದು ವಾರದಲ್ಲಿ ಬೃಹತ್‌ ಉದ್ಯಮ ಸಂಸ್ಥೆ(ಅದಾನಿ ಗ್ರೂಪ್‌)ಯೊಂದರ ಷೇರು ಗಳ ಬೆಲೆಯಲ್ಲಿ ಭಾರೀ ಏರಿಳಿತವನ್ನು ನಾವು ಗಮನಿಸಿದ್ದೇವೆ. ಷೇರು ಮಾರುಕಟ್ಟೆಯ ಸಮ ಗ್ರತೆ ಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ.’

Advertisement

ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಪತನಗೊಳ್ಳು ತ್ತಿರುವ ನಡುವೆಯೇ ಶನಿವಾರ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ(ಭಾರತೀಯ ಷೇರುಗಳು ಮತ್ತು ವಿನಿಮಯ ಮಂಡಳಿ) ಹೊರಡಿಸಿದ ಪ್ರಕಟನೆಯಲ್ಲಿನ ಅಂಶಗಳಿವು.

ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯು ಸ್ಥಿರವಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಷ್ಟಪಡಿಸಿದ ಬೆನ್ನಲ್ಲೇ ಸೆಬಿ ಕೂಡ ಸ್ಪಷ್ಟನೆ ನೀಡಿದ್ದು, “ಮಾರುಕಟ್ಟೆಯ ಸಮಗ್ರತೆಯನ್ನು ಕಾಪಾಡುವಲ್ಲಿ ನಾವು ಬದ್ಧರಾಗಿದ್ದೇವೆ. ಮಾರುಕಟ್ಟೆಯಲ್ಲಿ ಯಾವುದೇ ಅಡ್ಡಿ, ಆತಂಕಗಳಿಲ್ಲದೇ ಪಾರದರ್ಶಕವಾಗಿ ಮತ್ತು ದಕ್ಷ ರೀತಿಯಲ್ಲಿ ಕೆಲಸ ಮಾಡುವಂಥ ರಚನಾತ್ಮಕತೆ ಮುಂದುವರಿಯುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ’ ಎಂದಿದೆ. ಆದರೆ ಪ್ರಕಟನೆಯಲ್ಲಿ ಎಲ್ಲೂ ಅದಾನಿ ಸಮೂಹ ಸಂಸ್ಥೆಯ ಹೆಸರನ್ನು ಸೆಬಿ ಉಲ್ಲೇಖಿಸಿಲ್ಲ.ಇದೇ ವೇಳೆ ಯಾವುದೇ ನಿರ್ದಿಷ್ಟ ಕಂಪೆನಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಕೇಳಿಬಂದರೂ, ನಾವು ನೀತಿ ನಿಬಂಧನೆಗಳ ಅನುಸಾರ, ಪರಿಶೀಲನೆ ನಡೆಸುತ್ತೇವೆ. ಬಳಿಕವೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದೂ ಸೆಬಿ ಹೇಳಿದೆ.

ಸೆಬಿ ಕುರಿತು ಟಿಎಂಸಿ ಸಂಸದೆ ಪ್ರಶ್ನೆ: ಅದಾನಿ ಪ್ರಕರಣವನ್ನು ಸೆಬಿ ತನಿಖೆ ನಡೆಸುತ್ತಿರುವುದು ನಿಜವಾದರೆ ಸೆಬಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ವಕೀಲ ಸಿರಿಲ್‌ ಶ್ರಾಫ್ ಅವರು ತನಿಖೆಯಿಂದ ಹಿಂದೆ ಸರಿಯಬೇಕು ಎಂದು ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಮನವಿ ಮಾಡಿದ್ದಾರೆ. “ನನಗೆ ಲಾಯರ್‌ ಸಿರಿಲ್‌ ಶ್ರಾಫ್ ಬಗ್ಗೆ ಬಹಳ ಗೌರವವಿದೆ. ಆದರೆ ಅವರ ಮಗಳು ಗೌತಮ್‌ ಅದಾನಿ ಅವರ ಪುತ್ರನನ್ನು ವಿವಾಹವಾಗಿದ್ದಾರೆ. ಹೀಗಾಗಿ ಈ ಕುರಿತ ತನಿಖೆಯಿಂದ ಸಿರಿಲ್‌ ಅವರು ಹಿಂದೆಸರಿದರೆ ಉತ್ತಮ ಎನ್ನುವುದು ನನ್ನ ಭಾವನೆ’ ಎಂದು ಮೊಯಿತ್ರಾ ಟ್ವೀಟ್‌ ಮಾಡಿದ್ದಾರೆ.

ಭಾರತದ ವರ್ಚಸ್ಸಿಗೆ ಧಕ್ಕೆಯಾಗಿಲ್ಲ: ನಿರ್ಮಲಾ
20 ಸಾವಿರ ಕೋಟಿ ರೂ.ಗಳ ಎಫ್ಪಿಒ ವಾಪಸ್‌ ಪಡೆಯುವ ಅದಾನಿ ಗ್ರೂಪ್‌ನ ನಿರ್ಧಾರದಿಂದಾಗಿ ಭಾರತದ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪುನರುಚ್ಚರಿಸಿದ್ದಾರೆ. ಶನಿವಾರ ಮಾತನಾಡಿದ ಅವರು “ಎಫ್ಪಿಒಗಳು ಬರುತ್ತವೆ ಹೋಗುತ್ತವೆ. ಇಂಥ ಏರಿಳಿತಗಳು ಎಲ್ಲ ಮಾರುಕಟ್ಟೆಗಳಲ್ಲೂ ಸಾಮಾನ್ಯ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಕಳೆದ 2 ದಿನಗಳಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ 8 ಶತಕೋಟಿ ಡಾಲರ್‌ನಷ್ಟು ಹೆಚ್ಚಳವಾಗಿದೆ. ಇದು ನಮ್ಮ ದೇಶದ ಆರ್ಥಿಕ ಸದೃಢತೆಗೆ ಸಾಕ್ಷಿ’ ಎಂದು ತಿಳಿಸಿದ್ದಾರೆ.

Advertisement

ಬಾಂಡ್‌ ಮಾರಾಟವನ್ನೂ ಕೈಬಿಟ್ಟ ಅದಾನಿ?
ಎಫ್ಪಿಒ(ಫಾಲೋ ಆನ್‌ ಪಬ್ಲಿಕ್‌ ಆಫ‌ರ್‌) ವಾಪಸ್‌ ಪಡೆದ ಎರಡೇ ದಿನಗಳಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಲಿ. ತನ್ನ ಬಾಂಡ್‌ ಮಾರಾಟ ಯೋಜನೆಯನ್ನು ಕೂಡ ಕೈಬಿಟ್ಟಿದೆ. ಮೊತ್ತ ಮೊದಲ ಬಾರಿಗೆ ಬಾಂಡ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ 1,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಕಂಪೆನಿ ಯೋಜಿಸಿತ್ತು. ಹೀಗೆ ಸಂಗ್ರಹವಾದ ಹಣವನ್ನು ತನ್ನ ಹೊಸ ಏರ್‌ಪೋರ್ಟ್‌, ಬಂದರು, ವಿದ್ಯುತ್‌ ಸ್ಥಾವರ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳಿಗೆ ಬಳಸುವುದು ಕಂಪೆನಿಯ ಲೆಕ್ಕಾಚಾರವಾಗಿತ್ತು. ಆದರೆ ಹಿಂಡನ್‌ಬರ್ಗ್‌ ವರದಿ ಬಳಿಕ ಕಂಪೆನಿಯ ಷೇರುಗಳು, ಮಾರುಕಟ್ಟೆ ಮೌಲ್ಯ ಪತನಗೊಂಡ ಕಾರಣ ಈಗ ಅದು ಬಾಂಡ್‌ ಮಾರಾಟ ನಿರ್ಧಾರದಿಂದಲೂ ಹಿಂದಕ್ಕೆ ಸರಿದಿದೆ ಎಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next