Advertisement

ವ್ಯಸನಮುಕ್ತ ರಾಜ್ಯ ನಿರ್ಮಾಣಕ್ಕೆ ಬದ್ಧ: ಆರಗ

06:02 PM Jul 05, 2022 | Nagendra Trasi |

ಶಿವಮೊಗ್ಗ: ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ನಿಯಂತ್ರಣಕ್ಕಾಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜತೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ರಾಜ್ಯವನ್ನು ವ್ಯಸನಮುಕ್ತವಾಗಿಸಲು ಸರ್ಕಾರ ಆಂದೋಲನದ ರೀತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಕಳೆದ ಸಾಲಿನಲ್ಲಿ ಟನ್‌ಗಟ್ಟಲೆ ಮಾದಕ ವಸ್ತುಗಳನ್ನು ಪೊಲೀಸ್‌ ಇಲಾಖೆ ವಶಪಡಿಸಿಕೊಂಡಿದ್ದು, ಕಳೆದ ತಿಂಗಳು ನಾಶಗೊಳಿಸಲಾಗಿದೆ. ಆದರೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವಿಲ್ಲದೆ ಈ ಪಿಡುಗನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಸಹ ಮಾದಕ ವಸ್ತು ಸೇವನೆ ಪಿಡುಗು ನೇರ ಪರಿಣಾಮ ಬೀರುತ್ತದೆ. ಕೆಲವು ಬಾಹ್ಯ ಶಕ್ತಿಗಳು ಮಾದಕ ವಸ್ತುಗಳನ್ನು ದೇಶದೊಳಗೆ ತರುವ ಮೂಲಕ ನಮ್ಮ ದೇಶದ ಮೇಲೆ ಅಪರೋಕ್ಷ ಯುದ್ಧ ಹೂಡಲು ಪ್ರಯತ್ನಿಸುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮಾದಕ ವಸ್ತುಗಳ ಬಳಕೆ, ಮಾರಾಟವನ್ನು ಸಂಪೂರ್ಣ ಮಟ್ಟಹಾಕಲು ಬದ್ಧವಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯನ್ನು ವ್ಯಸನ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಂಘ ಸಂಸ್ಥೆಗಳ ಜತೆ ಕೈಜೋಡಿಸಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ವಿಶೇಷ ವಾರ್ಡ್‌: ಮೆಗ್ಗಾನ್‌ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಸನ ಮುಕ್ತ ವಿಶೇಷ ವಾರ್ಡ್‌ ಈ ತಿಂಗಳ ಒಳಗಾಗಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಸೆಲ್ವಮಣಿ ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

Advertisement

ಅರ್ಧದಲ್ಲೇ ಶಾಲೆ ಬಿಡುವ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಮಾದಕ ವಸ್ತು ಸೇವನೆ ಮಟ್ಟ ಹಾಕಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್‌. ವೈಶಾಲಿ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಪದಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವ್ಯಸನಮುಕ್ತ ಶಿವಮೊಗ್ಗ ಅಭಿಯಾನ
ವ್ಯಸನಮುಕ್ತ ಶಿವಮೊಗ್ಗ ಉದ್ದೇಶಕ್ಕಾಗಿ ಸಭೆ ನಡೆಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರನ್ನು ಅಭಿಯಾನಕ್ಕೆ ಬಳಸಿಕೊಳ್ಳಲು ಯೋಚಿಸಲಾಗಿದ್ದು ಅವರು ಪೊಲೀಸ್‌ ಇಲಾಖೆಯೊಂದಿಗೆ ಕೈ ಜೋಡಿಸಲಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿ ಶಿವಮೊಗ್ಗದಲ್ಲಿ ಈ ನೂತನ ಆಂದೋಲನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಕಂದಾಯ, ಪೊಲೀಸ್‌, ಶಿಕ್ಷಣ, ಅಬಕಾರಿ ಅಧಿಕಾರಿಗಳು ಭಾಗಿಯಾಗಿದ್ದರು. ಪ್ರತಿ ತಿಂಗಳು ಸಭೆ ನಡೆಸಿ ಅವಲೋಕನ ನಡೆಸಲಾಗುವುದು. ಸರ್ಕಾರ ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ದೊಡ್ಡ ಅಭಿಯಾನ ನಡೆಸುತ್ತಿದೆ. ಅದರ ಭಾಗವಾಗಿ ಶಿವಮೊಗ್ಗದಲ್ಲಿ ಮಾದರಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next