ಮಂಗಳೂರು: ಮಂಗಳೂರನ್ನು ಸ್ಟಾರ್ಟ್‌ಅಪ್, ಶಿಕ್ಷಣ, ಮೆಡಿಕಲ್ ಟೂರಿಸಂ ಹಬ್ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸಿದೆ. ಮುಂದಿನ 7 ವರ್ಷಗಳಲ್ಲಿ ದೇಶದ ಚಿತ್ರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದರು.
ಗೇರುಬೀಜ ಆಮದು ಸುಂಕದಲ್ಲಿ ಶೇ.5 ಕಡಿತಗೊಳಿಸುವ ಪ್ರಸ್ತಾವನೆ ಸದ್ಯ ಕೇಂದ್ರದ ಮುಂದಿದೆ. ಭಾರತೀಯ ಆರ್ಥಿಕತೆಯಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮಟ್ಟ ಏರಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಇದಕ್ಕಾಗಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಮೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸುರೇಶ್ ಪ್ರಭು ಅವರು ರೈಲ್ವೇ ಸಚಿವರಾದ ಬಳಿಕ ಮಂಗಳೂರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ರೈಲ್ವೇ ವಲಯದಲ್ಲಿ ಹೊಸತನದ ಗಾಳಿ ಬೀಸಲು ಇವರೇ ಮೂಲ ಕಾರಣ ಎಂದರು.
ಕೇಂದ್ರವು 924 ಕೋ.ರೂ. ವೆಚ್ಚದಲ್ಲಿ ಅಡ್ಡಹೊಳೆಯಿಂದ ಬಿ.ಸಿ. ರೋಡ್ ಚತುಷ್ಪಥ, ಬಿ.ಸಿ. ರೋಡ್‌ನಿಂದ ಸುರತ್ಕಲ್ ವರೆಗೆ ಷಟ್ಪಥಕ್ಕೆ ಅನುಮೋದನೆ ನೀಡಿದೆ. ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಕೂಡ ಪರಿಶೀಲನೆಯ ಹಂತದಲ್ಲಿದೆ ಎಂದು ತಿಳಿಸಿದರು.
ಉದ್ಯಮಿ ಸೀತಾರಾಮ್, ಮಂಗಳೂರು ಬಿಜೆಪಿ ದಕ್ಷಿಣ ವಿಭಾಗ ಅಧ್ಯಕ್ಷ ವೇದವ್ಯಾಸ ಕಾಮತ್, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.