Advertisement

ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರೂ ಬದ್ಧರಾಗಿ

03:51 PM May 22, 2022 | Team Udayavani |

ಹಾವೇರಿ: ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ಹಕ್ಕುಗಳ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಪೋಷಕರಿಲ್ಲದ ಮಕ್ಕಳ ಆಸ್ತಿ ಹಾಗೂ ಇತರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಹಾಗೂ ಸಹಾಯ ಒದಗಿಸಲಾಗುವುದು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.

Advertisement

ನಗರದ ಎಸ್‌ಎಂಎಸ್‌ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ರೂರಲ್‌ ಡೆವೆಲಪ್‌ಮೆಂಟ್‌ ಸೊಸೈಟಿ ಸಹಯೋಗದಲ್ಲಿ ಜರುಗಿದ ಮಕ್ಕಳ ಸಹಾಯವಾಣಿ ದಿನಾಚರಣೆ ಹಾಗೂ ಮಕ್ಕಳ ಸಹಾಯವಾಣಿ 1098 ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವು ಕಾನೂನುಗಳು ಜಾರಿಯಲ್ಲಿವೆ. ಐಪಿಸಿ ಸೆಕ್ಷನ್‌ 82 ಮತ್ತು 83 ರಂತೆ ಏಳು ವರ್ಷದಿಂದ ಹನ್ನೆರಡು ವರ್ಷದೊಳಗಿನ ಮಕ್ಕಳು ಮಾಡುವ ಅಪರಾಧ ಅಪರಾಧವಲ್ಲ. ತಪ್ಪೆಸಗುವ ಮಕ್ಕಳಿಗೆ ಅದರ ಪರಿಣಾಮದ ಜ್ಞಾನ ಇರುವುದಿಲ್ಲ ಎಂಬ ಕಾರಣಕ್ಕಾಗಿ ವಿನಾಯಿತಿ ನೀಡಲಾಗಿದೆ. ಮಕ್ಕಳ ಪ್ರಕರಣಗಳಲ್ಲಿ ಇತರ ಸಾಮಾನ್ಯ ಪ್ರಕರಣಗಳಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತಿಲ್ಲ. ಮಕ್ಕಳ ಪ್ರಕರಣಗಳನ್ನು ಬಾಲ ನ್ಯಾಯ ಮಂಡಳಿಗಳಲ್ಲಿ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣದ ಕುರಿತು ಸೂಕ್ತ ತೀರ್ಪು ನೀಡಬೇಕಾಗುತ್ತದೆ ಎಂದರು.

ಶಿಕ್ಷಣದಿಂದ ವಂಚಿತರಾಗಿ ಫ್ಯಾಕ್ಟರಿ, ಅಂಗಡಿ, ಹೋಟೆಲ್‌ ಹಾಗೂ ಇತರ ಸ್ಥಳಗಳಲ್ಲಿ ದುಡಿಯುವುದನ್ನು ಗಮನದಲ್ಲಿಟ್ಟು ಸರ್ಕಾರ ಮಕ್ಕಳ ಹಕ್ಕು ರಕ್ಷಣೆಗೆ ಕಾನೂನನ್ನು ಜಾರಿಗೆ ತಂದಿದೆ. ಯಾವ ಕ್ಷೇತ್ರದಲ್ಲಿ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಗುರುತಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ 1098 ಮಕ್ಕಳ ಸಹಾಯವಾಣಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಕ್ಕಳು ಕಳೆದುಹೋದಲ್ಲಿ, ಭಿಕ್ಷಾಟನೆ ಕಂಡುಬಂದಲ್ಲಿ ಉಚಿತ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಕೋರಿದರು. ಬಾಲ ನ್ಯಾಯ ಮಂಡಳಿ ಕಾಯ್ದೆಯಡಿ ಹಲವು ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಅನಾಥ ಮಕ್ಕಳು, ಪಾಲಕರಿಲ್ಲದ ಮಕ್ಕಳು, ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ನೆರವು ಒದಗಿಸಲಾಗುವುದು ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್‌.ಎಚ್‌. ಮಜೀದ ಪ್ರಸ್ತಾವಿಕವಾಗಿ ಮಾತನಾಡಿ, ತೊಂದರೆಗೆ ಸಿಲುಕಿದ ಮಕ್ಕಳ ನೆರವಿಗಾಗಿ ರಾಷ್ಟ್ರೀಯ ಉಚಿತ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿದರೆ ಮಕ್ಕಳ ನೆರವಿಗೆ ಧಾವಿಸಲಾಗುವುದು. ಈವರೆಗೆ ಸಹಾಯವಾಣಿಗೆ ಕರೆ ಮಾಡಿದ ಜಿಲ್ಲೆಯ 3576 ಮಕ್ಕಳಿಗೆ ರಕ್ಷಣೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಕಾರ್ಯಕ್ರಮದ ನಂತರ ಮಕ್ಕಳ ಸಹಾಯವಾಣಿ 1098 ಜಾಗೃತಿ ಜಾಥಾಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಅವರು ಚಾಲನೆ ನೀಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಕೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾ ಧಿಕಾರಿ ಶೈಲಜಾ ಕುರಹಟ್ಟಿ, ಎಸ್‌ಎಂಎಸ್‌ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೈ.ಎಂ.ಓಲೇಕಾರ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next