ಬೆಂಗಳೂರು:ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವ ಕುರಿತು ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಪ್ರಕರಣಕ್ಕೂ ಚುನಾವಣಾ ಆಯೋಗಕ್ಕೂ ಸಂಬಂಧವೇ ಇಲ್ಲ. ಆಯೋಗ ಅನಗತ್ಯವಾಗಿ ಮಧ್ಯಪ್ರವೇಶ ಮಾಡಿರುವುದು ಸರಿಯಲ್ಲ. ಅನರ್ಹರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವತಿಯಿಂದ ಕೆವಿಯೆಟ್ ಹಾಕಿದ್ದೇವು. ಸುಪ್ರೀಂ ಕೋರ್ಟ್ ನಮಗೆ ನೊಟೀಸ್ ನೀಡಿದೆ.
ಸೆಪ್ಟಂಬರ್ 26 ರಂದು ನಮ್ಮ ಪರ ವಕೀಲರು ಸುಪ್ರೀಂ ಕೊರ್ಟ್ ಮುಂದೆ ವಾದ ಮಂಡಿಸಲಿದ್ದಾರೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಉತ್ತಮ ಉದ್ದೇಶಕ್ಕಾಗಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಅನರ್ಹ ಶಾಸಕರು ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸ್ಪೀಕರ್ ಎತ್ತಿ ಹಿಡಿದಿದ್ದಾರೆ. ಜನರು ಸ್ಪೀಕರ್ ಆದೇಶವನ್ನು ಬಯಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯುವ ವಿಶ್ವಾಸ ಇದೆ ಎಂದು ಹೇಳಿದರು.
ಇದೇ ವೇಳೆ, ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕಾದ ಹೂಸ್ಟನ್ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿನ ಪ್ರವಾಹ ಸಂತ್ರಸ್ಥರಿಗೆ ಸಾಂತ್ವನ ಹೇಳುತ್ತಾರೆ. ಆದರೆ, ನಮ್ಮ ರಾಜ್ಯದ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಎಲ್ಲರೂ ಬಿಜೆಪಿ ಸಂಸದರೇ ಇದ್ದಾರೆ.ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಏನು ಮಾಡುತ್ತಿದ್ದಾರೆ. ಇವರೆಲ್ಲ ಜನರ ಪ್ರತಿನಿಧಿಗಳು ಆಗಲಿಕ್ಕೆ ಲಾಯಕ್ ಇಲ್ಲ. ಜನ ವಿರೋಧಿ ನೀತಿಯನ್ನೇ ಬಿಜೆಪಿ ಅನುಸರಿಸುತ್ತಿದೆ. ಅದೇ ಕಾರಣಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.