Advertisement

ದಾವಣಗೆರೆ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮತಗಟ್ಟೆಗಳ ಸಿದ್ಧತೆ ಕಾರ್ಯ ನಡೆದಿದೆ. ರಾಜ್ಯಾದ್ಯಂತ ಮತಗಟ್ಟೆಗಳಿಗಾಗಿ ಸರ್ಕಾರಿ ಶಾಲೆಗಳೇ ಆಯ್ಕೆಯಾಗಿರುವುದರಿಂದ ಅಲ್ಲಿ ಅಗತ್ಯ ಮೂಲ ಸೌಕರ್ಯ ಹೆಚ್ಚಿಸುವ ಕಾರ್ಯ ಭರದಿಂದ ಸಾಗಿದೆ.

Advertisement

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಒಟ್ಟು 58,282 ಸರ್ಕಾರಿ ಶಾಲೆಗಳನ್ನು ಮತಗಟ್ಟೆ ಕೇಂದ್ರಗಳೆಂದು ಗುರುತಿಸಲಾಗಿದೆ. ಮತಗಟ್ಟೆಗಳಲ್ಲಿ ಇರಬೇಕಾದ ಮೂಲ ಸೌಕರ್ಯಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು ಯಾವ ಮತಗಟ್ಟೆಯಲ್ಲಿ ಮೂಲ ಸೌಕರ್ಯ ಕೊರತೆ ಇದೆಯೋ ಅಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಮುಂದುವರಿದಿದೆ. ಮತಗಟ್ಟೆಗೆ ಆಯ್ಕೆಯಾದ ಶಾಲೆಗಳಲ್ಲಿ ರ್‍ಯಾಂಪ್‌, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್‌, ಪೀಠೊಪಕರಣ, ನಿರೀಕ್ಷಣಾ ಕೊಠಡಿ, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಸೂಚನಾ ಫಲಕ ವ್ಯವಸ್ಥೆ ಸೇರಿ ಇನ್ನಿತರ ವ್ಯವಸ್ಥೆಗಳು ಇರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳ ಒಟ್ಟು 55,498 ಮತಗಟ್ಟೆ ಕೇಂದ್ರಗಳಲ್ಲಿ ರ್‍ಯಾಂಪ್‌ ಸೌಲಭ್ಯ, 55,781 ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, 55,997 ಮತಗಟ್ಟೆಗಳಲ್ಲಿ ವಿದ್ಯುತ್‌, 56,288 ಮತಗಟ್ಟೆಗಳಲ್ಲಿ ಪೀಠೊಪಕರಣ, 56,436 ಮತಗಟ್ಟೆಗಳಲ್ಲಿ ನಿರೀಕ್ಷಣಾ ಕೊಠಡಿ, 55,845 ಮತಗಟ್ಟೆಗಳಲ್ಲಿ ಪುರುಷರ ಶೌಚಾಲಯ, 55,479 ಮತಗಟ್ಟೆಗಳಲ್ಲಿ ಮಹಿಳಾ ಶೌಚಾಲಯ ವ್ಯವಸ್ಥೆ ಹಾಗೂ 56,849 ಮತಗಟ್ಟೆಗಳಲ್ಲಿ ಸೂಚನಾ ಫಲಕ ವ್ಯವಸ್ಥೆ ಇರುವುದನ್ನು ಅಧಿಕಾರಿಗಳು ಸ್ಥಳ ಪರಿಶೀಲಿಸಿ ಖಚಿತ ಪಡಿಸಿಕೊಂಡಿದ್ದಾರೆ.

ಸೌಲಭ್ಯ ಕಲ್ಪಿಸುವ ಕಾರ್ಯ:
ಮೂಲ ಸೌಲಭ್ಯ ಕೊರತೆ ಇರುವ ಮತಗಟ್ಟೆಗಳನ್ನೂ ಗುರುತಿಸಲಾಗಿದ್ದು ವಾರದೊಳಗೆ ಎಲ್ಲ ಸೌಕರ್ಯ ಕಲ್ಪಿಸಿಕೊಳ್ಳುವ ಕಾರ್ಯ ನಡೆದಿದೆ. ಅಧಿಕಾರಿಗಳ ಸಮೀಕ್ಷೆ ಆಧರಿಸಿ ಒಟ್ಟು 2784 ಮತಗಟ್ಟೆಗಳಲ್ಲಿ ರ್‍ಯಾಂಪ್‌ ಸೌಲಭ್ಯ, 2501 ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, 2585 ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, 1994 ಮತಗಟ್ಟೆಗಳಲ್ಲಿ ಪೀಠೊಪಕರಣ ವ್ಯವಸ್ಥೆ, 1845 ಮತಗಟ್ಟೆಗಳಲ್ಲಿ ನಿರೀಕ್ಷಣಾ ಕೊಠಡಿ ವ್ಯವಸ್ಥೆ, 2437 ಮತಗಟ್ಟೆಗಳಲ್ಲಿ ಪುರುಷ ಶೌಚಗೃಹ ವ್ಯವಸ್ಥೆ, 2803 ಮತಗಟ್ಟೆಗಳಲ್ಲಿ ಮಹಿಳಾ ಶೌಚಗೃಹ ವ್ಯವಸ್ಥೆ ಹಾಗೂ 1433 ಮತಗಟ್ಟೆಗಳಲ್ಲಿ ಸೂಚನಾ ಫಲಕ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ.

ಶೌಚಗೃಹ ಇಲ್ಲದ ಮತಗಟ್ಟೆಗಳಲ್ಲಿ ನರೇಗಾ ಒಗ್ಗೂಡುವಿಕೆಯೊಂದಿಗೆ ನಿರ್ಮಾಣ ಮಾಡಿಕೊಳ್ಳಬೇಕು. ಕೊಠಡಿ ಹಾಗೂ ಇತರ ದುರಸ್ತಿಗಾಗಿ ತುರ್ತು ದುರಸ್ತಿ ಕಾಮಗಾರಿಗೆ ಮಂಜೂರಾದ ಅನುದಾನ ಬಳಕೆ ಮಾಡಿಕೊಳ್ಳಬೇಕು. ಮತಗಟ್ಟೆಗೆ ಆಯ್ಕೆಯಾದ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಮಾರ್ಚ್‌ ಅಂತ್ಯದೊಳಗೆ ಅಭಿವೃದ್ಧಿಪಡಿಸಿ ವರದಿ ಸಲ್ಲಿಸಬೇಕೆಂದು ಶಿಕ್ಷಣ ಇಲಾಖೆ ಆಯುಕ್ತರು ಎಲ್ಲ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.

Advertisement

ದಾವಣಗೆರೆ ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳು ಮತಗಟ್ಟೆಗಳಿಗಾಗಿ ಬಳಕೆಯಾಗಲಿವೆ. ಮತಗಟ್ಟೆಗಳಲ್ಲಿನ ಸೌಲಭ್ಯ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಲಾಗಿದ್ದು ಸಮಿತಿ ವರದಿ ಆಧರಿಸಿ ಕ್ರಿಯಾಯೋಜನೆ ಮಾಡಿ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು.
– ಜಿ.ಆರ್‌. ತಿಪ್ಪೇಶಪ್ಪ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next