Advertisement

ನೋಂದಾವಣೆ-ವಿತರಣೆಗೆ ಆಯೋಗ ತಡೆ

02:54 AM Apr 14, 2019 | Sriram |

ಕಾಪು: ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಕೇಂದ್ರಗಳು ಚುನಾವಣ ಆಯೋಗದ ಕೆಂಗಣ್ಣಿಗೆ ಗುರಿಯಾಗಿವೆ. ಅದರ ಸೂಚನೆಯ ಮೇರೆಗೆ ಕಾರ್ಡ್‌ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ಫಲಾನುಭವಿಗಳ ನೋಂದಾವಣೆ ಮತ್ತು ಕಾರ್ಡ್‌ ವಿತರಣೆಯನ್ನು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಚುನಾವಣ ಆಯೋಗ ಮೌಖೀಕವಾಗಿ ಸೂಚನೆ ನೀಡಿದೆ. ಅದರಂತೆ ಸೇವಾ ಕೇಂದ್ರಗಳು ಸೇವೆಯನ್ನು ನಿಲ್ಲಿಸಿವೆ. ಉಡುಪಿ ಜಿಲ್ಲೆಯಲ್ಲಿ 15ಕ್ಕಿಂತಲೂ ಹೆಚ್ಚಿನ ಸೇವಾ ಸಿಂಧು ಕೇಂದ್ರಗಳು ಈ ಸೇವೆ ಒದಗಿಸುತ್ತಿದ್ದು, ಈಗ ಸಾವಿರಾರು ಮಂದಿ ಸಮಸ್ಯೆ ಅನುಭವಿಸುವಂತಾಗಿದೆ. ಕೇಂದ್ರಗಳು ವ್ಯವಹಾರ ನಷ್ಟ ಎದುರಿಸುವಂತಾಗಿದೆ.

ಸ್ಥಾಗಿತ್ಯ ಯಾಕಾಗಿ?
ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಯೋಜನೆಗೆ ನೋಂದಾವಣೆ ಮಾಡಿಸಿ, ಕಾರ್ಡ್‌ ಪಡೆಯಲು ಅವಕಾಶ ಮಾಡಿಕೊಡಲಾಗಿತ‌ು¤. ಆದರೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇದರ ದುರ್ಲಾಭ ಪಡೆಯುವ ಸಾಧ್ಯತೆ ಇರುವುದನ್ನು ಮನಗಂಡು ಉಡುಪಿ ಜಿಲ್ಲೆಯಲ್ಲಿ ಸೇವೆ ಸ್ಥಗಿತಗೊಳಿಸಲು ಆಯೋಗ ಸೂಚಿಸಿದೆ.

ಸೇವಾ ಸಿಂಧು ಕೇಂದ್ರಗಳು
ಜಿಲ್ಲೆಯಲ್ಲಿ 145ಕ್ಕೂ ಅಧಿಕ ಸೇವಾ ಸಿಂಧು ಕೇಂದ್ರಗಳು ನೋಂದಾವಣೆಯಾಗಿದ್ದರೂ 10ರಿಂದ 15 ಕೇಂದ್ರಗಳು ಮಾತ್ರ ಗುಣಮಟ್ಟದ ಸೇವೆ ನೀಡುತ್ತಿವೆ. ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಯೋಜನೆಯು ಸೇವಾ ಸಿಂಧು ವ್ಯಾಪ್ತಿಯೊಳಗೆ ಸೇರ್ಪಡೆಯಾದ ಬಳಿಕ ಎಲ್ಲ ಕೇಂದ್ರಗಳೂ ತಮ್ಮಲ್ಲಿ ಯೋಜನೆಯ ಐಡಿ ತೆರೆಯಲು ಪ್ರಯತ್ನ ಪಟ್ಟಿದ್ದವು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇತರ ಸಾಮಾನ್ಯ ಸೇವೆಗಳನ್ನು ಚೆನ್ನಾಗಿ ನೀಡುತ್ತಿರುವ ಕೇಂದ್ರಗಳಿಗೆ ಪ್ರಥಮ ಪ್ರಾಶಸ್ತ್ಯದಡಿ ಈ ಯೋಜನೆಯ ನೋಂದಣಿ- ಕಾರ್ಡ್‌ ವಿತರಣೆಗೆ ಅವಕಾಶ ನೀಡಿದ್ದರು.

200ಕ್ಕೂ ಅಧಿಕ ಸರಕಾರಿ ಸೌಲಭ್ಯ
ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ 200ಕ್ಕೂ ಅಧಿಕ ಸೇವೆಗಳು ಲಭ್ಯವಿವೆ. ಒಂದೇ ಸೂರಿನಡಿ ಇಷ್ಟು ಸೌಲಭ್ಯ ದೊರಕುವುದರಿಂದ ನಿತ್ಯ ನೂರಾರು ಮಂದಿ ನೋಂದಾವಣೆ, ಗುರುತು ಪತ್ರ ಮತ್ತು ಸೌಲಭ್ಯ ಪಡೆಯಲು ಬರುತ್ತಿದ್ದರು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಜನರನ್ನು ಗುಂಪಾಗಿ ಕರೆತಂದು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಚುನಾವಣ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

Advertisement

ಚುನಾವಣೆ ಬಳಿಕ ಮುಂದುವರಿಕೆ
ಉಡುಪಿ ಜಿಲ್ಲೆಯಲ್ಲಿ 145 ಸಾಮಾನ್ಯ ಸೇವಾ ಕೇಂದ್ರಗಳು – ಡಿಜಿಟಲ್‌ ಸೇವಾ ಸಿಂಧು ಕೇಂದ್ರಗಳಿವೆ. 15 ಕಡೆ ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಯೋಜನೆಯ ಗುರುತುಪತ್ರ ನೀಡಲಾಗುತ್ತಿತ್ತು. ಈಗಿನ ತಡೆ ತಾತ್ಕಾಲಿಕವಾಗಿದ್ದು, ಚುನಾವಣೆಯ ಬಳಿಕ ಎಂದಿನಂತೆ ಕಾರ್ಯನಿರ್ವಹಿಸಲಿವೆ. ತೀರಾ ಅಗತ್ಯವುಳ್ಳವರು ಜಿಲ್ಲಾಸ್ಪತ್ರೆಯಲ್ಲಿ ಸ್ವತಃ ಬಂದು ಆರೋಗ್ಯ ಕಾರ್ಡ್‌ ಪಡೆಯಲು ಅವಕಾಶವಿದೆ ಎಂದು ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಯೋಜನೆಯ ಅಧಿಕಾರಿಗಳ ಮೂಲ ತಿಳಿಸಿದೆ.

ದಕ್ಷಿಣ ಕನ್ನಡದಲ್ಲೇನು?
ದಕ್ಷಿಣ ಕನ್ನಡದಲ್ಲಿ ಇಂತಹ ಸಮಸ್ಯೆ ಆಗಿಲ್ಲ. ಸಾಮಾನ್ಯ ಸೇವಾ ಕೇಂದ್ರಗಳು ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಸೇವೆ ಒದಗಿಸುತ್ತವೆ ಎಂಬುದಾಗಿ ಮೂಲಗಳು ತಿಳಿಸಿವೆ.

ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾವಣೆಗಾಗಿ ಬರುವ ರೋಗಿಗಳಿಗೆ ತೊಂದರೆಯಾಗದಂತೆ ಸೇವೆ ಒದಗಿಸುಲು ಜಿಲ್ಲಾಸ್ಪತ್ರೆಗೆ ಸೂಚನೆ ನೀಡಿದ್ದೇವೆ. ಚುನಾವಣ ನೀತಿ ಸಂಹಿತೆಯ ಕಾರಣದಿಂದ ಹೊಸದಾಗಿ ಹೆಸರು ಸೇರ್ಪಡೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಚುನಾವಣ ಆಯೋಗದ ಸೂಚನೆಯಂತೆ ಮುಂದಿನ ಆದೇಶದವರೆಗೆ ಈ ತಡೆ ಜಾರಿಯಲ್ಲಿರುತ್ತದೆ.
-ಡಾ| ಹೆಪ್ಸಿಬಾ ರಾಣಿ ಕೊರ್ಲಪಾಟಿ
ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next