Advertisement

ಮತ್ತೆ ಕಮಿಷನ್‌ ದಂಗಲ್‌; ರಾಜ್ಯದಲ್ಲಿ ಶೇ.40 ಕಮಿಷನ್‌ ಸದ್ದು

11:51 AM Aug 25, 2022 | Team Udayavani |

ಬೆಂಗಳೂರು: ಗುತ್ತಿಗೆದಾರರ ಬಿಲ್‌ ಪಾವತಿಗೆ ಶೇ.40ರಷ್ಟು ಕಮಿಷನ್‌ ಪಾವತಿ ಆರೋಪ ಮತ್ತೆ ಮುನ್ನೆಲೆಗೆ ಬಂದಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಯೋಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

Advertisement

ಶೇ.40 ಕಮಿಷನ್‌ ಆರೋಪ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಭ್ರಷ್ಟಾಚಾರ ಶರವೇಗದಲ್ಲಿದ್ದು ಇಡೀ ಸರ್ಕಾರ ಲೂಟಿಯಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಕೆ.ಸುಧಾಕರ್‌, ಆರಗ ಜ್ಞಾನೇಂದ್ರ, ಗೋಪಾಲಯ್ಯ, ಬಿ.ಸಿ.ನಾಗೇಶ್‌ ಸೇರಿ ಸಂಪುಟ ಸದಸ್ಯರು ಮುಗಿಬಿದ್ದಿದ್ದು, ಕೆಂಪಣ್ಣ ಅವರು ಯಾವುದೇ ದಾಖಲೆ ಇಲ್ಲದೆ ಆರೋಪಿಸುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ, ಇದು ಕಾಂಗ್ರೆಸ್‌ ಪ್ರೇರಿತ, ದಾಖಲೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಈ ಮಧ್ಯೆ ತಮ್ಮ ಮೇಲೆ ಗಂಭೀರ ಆರೋಪ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ದಾಖಲೆ ಇಲ್ಲದೆ ಮಾತನಾಡಿದ್ದಾರೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣ ತನಿಖೆಗೆ ವಹಿಸಿದರೆ ಸಾಬೀತು ಮಾಡಲು ಸಿದ್ಧ. ಲಂಚ ಕೊಟ್ಟಿದ್ದಕ್ಕೆ ದಾಖಲೆ ಕೊಡಲು ಸಾಧ್ಯವೇ. ಮತ್ತೂಮ್ಮೆ ಪ್ರಧಾನಿಗೆ ಪತ್ರ ಬರೆಯುತ್ತೇವೆ. ಮಾನನಷ್ಟ ಮೊಕದ್ದಮೆ ಹಾಕಿದರೆ ನ್ಯಾಯಾಲಯಕ್ಕೆ ಯಾವ ದಾಖಲೆ ಸಲ್ಲಿಸಬೇಕೋ ಸಲ್ಲಿಸುತ್ತೇವೆ ಎಂದು ಕೆಂಪಣ್ಣ ತಿರುಗೇಟು ನೀಡಿದ್ದಾರೆ. ಒಟ್ಟಾರೆ, ಕಮಿಷನ್‌ ಪ್ರಕರಣ ರಾಜಕೀಯವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕೆಸರೆರೆಚಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.

Advertisement

ಸಿದ್ದರಾಮಯ್ಯ ಏನೆಂದರು?
ಕೆಂಪಣ್ಣ ನಿಯೋಗದ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯವರು ಶೇ.40 ಕಮಿಷನ್‌ ಕುರಿತು ಏಪ್ರಿಲ್‌ ತಿಂಗಳಿನಲ್ಲಿ ನಮ್ಮನ್ನು ಮಾತುಕತೆಗೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಇಷ್ಟು ಸಮಯ ಆದರೂ ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ದಾಖಲೆ ಕೊಡಿ ಎಂದು ಹೇಳುತ್ತಾರೆ. ಸಂಘದವರೇ ಅಧಿಕೃತ ಪತ್ರ ಬರೆದರೂ ದಾಖಲೆ ಬೇಕಾ. ಇದುವರೆಗೆ ತನಿಖೆಗೆ ವಹಿಸಿಲ್ಲ ಎಂದರೆ ಇವರು ಭ್ರಷ್ಟಾಚಾರ ಒಪ್ಪಿಕೊಂಡಂತೆ ಎಂದು ದೂರಿದರು. ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಲಿ, ಎಲ್ಲ ದಾಖಲೆ ಕೊಡುತ್ತೇವೆ. ನಾವು ಸಾಬೀತು ಮಾಡದಿದ್ದರೆ ನಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳುತ್ತಿದ್ದರೂ ದಾಖಲೆ ಕೊಡಿ ಎಂದು ಹೇಳಿಕೊಂಡೇ ಭ್ರಷ್ಟಾಚಾರ ಪೋಷಿಸಲಾಗುತ್ತಿದೆ. ಇದೊಂದು ಭಂಡ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್‌ ಅನುಮೋದನೆಗೆ ಮೊದಲೇ ಶೇ. 30ರಿಂದ 40 ಲಂಚ ಕೊಡಬೇಕಾಗಿದೆ ಎಂದು ಹೇಳಿದ್ದಾರೆ. ಗುತ್ತಿಗೆದಾರರಿಗೆ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿ ಇಂದ ಸುಮಾರು 22,000 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಬೇಕಿದೆ ಎಂದು ಹೇಳಿದ್ದಾರೆ. ಅನುದಾನ ಮೀಸಲಿಡದೆ ಟೆಂಡರ್‌ ಯಾಕೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು.

ನಾವು ಸರ್ಕಾರದ ಮೇಲೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಆಗ್ರಹಕ್ಕೆ ಬೆಲೆ ಕೊಡದೆ ಹೋದರೆ ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಚುನಾವಣಾ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಶೇ.10 ಕಮಿಷನ್‌ ಸರ್ಕಾರ ಎಂದು ಆರೋಪ ಮಾಡಿದಾಗ ಎಲ್ಲರೂ ಅದಕ್ಕೆ ಪ್ರಚಾರ ನೀಡಿದರು, ಯಾರು ಅವರ ಬಳಿ ದಾಖಲೆ ಕೇಳಿಲ್ಲ. ಈಗ ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡಲು ಸಿದ್ಧರಿದ್ದಾರೆ. ತನಿಖೆ ಆಗಬೇಕೋ ಬೇಡವೋ ಎಂದು ಪ್ರಶ್ನಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ . ಈ ಹಿಂದೆ ಆರೋಪ ಮಾಡಿದ ಎಲ್ಲದಕ್ಕೂ ಸರ್ಕಾರ ಕ್ರಮ ಜರುಗಿಸಿದೆ. ಗುತ್ತಿಗೆದಾರರ ಸಂಘದಿಂದ ಏನೇ ದೂರುಗಳಿದ್ದರೂ ಲೋಕಾಯುಕ್ತಕ್ಕೆ ನೀಡಲಿ, ಕ್ರಮ ತೆಗೆದುಕೊಳ್ಳುತ್ತಾರೆ. ಪುರಾವೆ, ದಾಖಲೆಗಳ ಜೊತೆಗೆ ದೂರು ಸಲ್ಲಿಸಲಿ. ಪ್ರಧಾನಿಯವರಿಗೆ ಪತ್ರ ಬರೆಯುವ ಅವಕಾಶ ಎಲ್ಲರಿಗೂ ಇದೆ.
-ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಳ್ಳೆಯವರು . ಆದರೆ, ಅವರ ಮಾತು ನಡೆಯುತ್ತಿಲ್ಲ. ಇಡೀ ವ್ಯವಸ್ಥೆ ಭ್ರಷ್ಟವಾಗಿದೆ. ಪ್ರಧಾನಿಗೆ ಪತ್ರ ಬರೆದು, ಒಮ್ಮೆ ಸಿಎಂ ಭೇಟಿ ಮಾಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಮತ್ತೂಮ್ಮೆ ಪ್ರಧಾನಿಗೆ ಪತ್ರ ಬರೆಯುತ್ತೇವೆ. ಬೆಂಗಳೂರಿನಲ್ಲಿ ಪರ್ಸೆಂಟೇಜ್‌ ಬೇಡಿಕೆ ಶೇ.40ರಿಂದ 50ಕ್ಕೆ ಏರಿಕೆಯಾಗಿದೆ. ಸಿಎಂ ಒಮ್ಮೆ ಸಭೆ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ. ಕಮಿಷನ್‌ ದಂಧೆ ನಿಂತಿಲ್ಲ, ಲಂಚಕ್ಕೆ ಬೇಡಿಕೆ ತಪ್ಪಿಲ್ಲ, ಇಲ್ಲದಿದ್ದರೆ ಹಣ ಪಾವತಿಯಾಗುತ್ತಿಲ್ಲ.
– ಕೆಂಪಣ್ಣ , ಗುತ್ತಿಗೆದಾರರ ಸಂಘದ ಅಧ್ಯಕ್ಷ

ಭ್ರಷ್ಟಾಚಾರ ವಿಚಾರ ನಾವು ಸುಮ್ಮನೆ ಬಿಡುವುದಿಲ್ಲ. ಕೆಂಪಣ್ಣ ಅವರೇ ಬಹಿರಂಗವಾಗಿ ಹೇಳಿದ ಮೇಲೆ ದಾಖಲೆ ಬೇಕೆ? ಸಂಪುಟದಲ್ಲಿ “ಮುತ್ತು ರತ್ನ’ಗಳನ್ನು ಇಟ್ಟುಕೊಂಡಿದ್ದಾರೆ. ನಮ್ಮ ಪಕ್ಷ ಇದರ ವಿರುದ್ಧ ಹೋರಾಟ ನಡೆಸಲಿದೆ. ಬಿಜೆಪಿಯವರು ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಬಸವರಾಜ ಬೊಮ್ಮಾಯಿ ಅವರೇ ಮಾಧುಸ್ವಾಮಿ ಹೇಳಿದಂತೆ ಮ್ಯಾನೇಜ್‌ಮೆಂಟ್‌ ಸರ್ಕಾರ ಕೇವಲ ತಳ್ಳಿಕೊಂಡು ಹೋಗುವುದು ನಿಮ್ಮ ಕೆಲಸವೇ. ಶೇ.40 ಕಮಿಷನ್‌ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲವೇ. ಬಿಬಿಎಂಪಿಯಲ್ಲಿ ಶೇ.50, ಇಲಾಖೆಗಳಲ್ಲಿ ಶೇ.40, ಕೆಲವೆಡೆ ಶೇ.100. ಕೆಲಸವೇ ಮಾಡದೆ ಹಣ ಪಡೆದಿರುವುದು ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ “ಮನಿ’ರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾರೆ.
– ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಕ್ಷಣದಿಂದ ಏನೇನೋ ಹೇಳಿಕೆ ನೀಡಲು ಆರಂಭಿಸಿ¨ªಾರೆ. ಕಾಂಗ್ರೆಸ್‌ ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ . ಕೆಂಪಣ್ಣನವರು ವಯಸ್ಸಲ್ಲಿ ಹಾಗೂ ಅನುಭವದಲ್ಲಿ ಹಿರಿಯರು. ಇವೆಲ್ಲ ಕಾಂಗ್ರೆಸ್‌ ಪ್ರಾಯೋಜಿತವಾಗಿದ್ದು, ಇದನ್ನೇ ಚುನಾವಣೆಯ ಅಜೆಂಡಾ ಮಾಡಿಕೊಳ್ಳಲು ಹೊರಟಿ¨ªಾರೆ. ಕಾಂಗ್ರೆಸ್‌ ಪಕ್ಷ ಕೆಂಪಣ್ಣನವರನ್ನು ಬಲಿಪಶು ಮಾಡುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಬಲಿಯಾಗುವುದು ಬೇಡ .
-ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ

ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪ ಮಾಡಿದರೆ ಸಾಲದು. ದಾಖಲೆ ಕೊಡಬೇಕು. ಲಂಚ ಕೊಟ್ಟವರು, ಸ್ವೀಕಾರ ಮಾಡಿದವರೂ ಇಬ್ಬರಿಗೂ ಶಿಕ್ಷೆಯಾಗಬೇಕು. ಯಾರಿಗೆ ಕೊಟ್ಟಿದ್ದಾರೆ ಹೇಳಲಿ, ದಾಖಲೆ ಕೊಡಲಿ.
-ಆರಗ ಜ್ಞಾನೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next