ಮುಂಬೈ: ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಶುಕ್ರವಾರ (ಡಿಸೆಂಬರ್ 01) ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಹೆಚ್ಚಳ ಮಾಡಿದ್ದು, ನೂತನ ದರ ಇಂದಿನಿಂದಲೇ ಅನ್ವಯವಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:INDIA A; ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ವಿಕೆಟ್ ಕೀಪರ್’ಗೆ ಎ ತಂಡ ನಾಯಕತ್ವ
19ಕೆಜಿಯ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಏರಿಕೆಯಾಗಿದ್ದರಿಂದ ನವದೆಹಲಿಯಲ್ಲಿ ಸಿಲಿಂಡರ್ ಬೆಲೆ 1796.50 ರೂ. ಹಾಗೂ ಮುಂಬೈನಲ್ಲಿ 1749 ರೂಪಾಯಿಗೆ ಹೆಚ್ಚಳವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1904 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1968 ರೂಪಾಯಿಗೆ ಮತ್ತು ಕೋಲ್ಕತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,908 ರೂಪಾಯಿಗೆ ಏರಿಕೆಯಾಗಿದೆ.
ಆದರೆ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ. ನವೆಂಬರ್ 1ರಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಹೆಚ್ಚಳ ಮಾಡಿದ್ದು, ನವೆಂಬರ್ 16ರಂದು 57 ರೂಪಾಯಿ ಇಳಿಕೆ ಮಾಡಲಾಗಿತ್ತು.
14.2 ಕೆಜಿಯ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 903 ರೂಪಾಯಿ ಇದ್ದು, ಈ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿಯನ್ನು 200 ರೂಪಾಯಿಯಿಂದ 300 ರೂಪಾಯಿಗೆ ಏರಿಕೆ ಮಾಡಿತ್ತು.