ಸುಮಾರು 15 ವರ್ಷಗಳ ಬಳಿಕ ಶಿವರಾಜಕುಮಾರ್ ಅವರು ರೀಮೇಕ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರೋದು ನಿಮಗೆ ಗೊತ್ತೇ ಇದೆ. ಮಲಯಾಳಂ ಚಿತ್ರ “ಒಪ್ಪಂ’ ರೀಮೇಕ್‌ನಲ್ಲಿ ಶಿವಣ್ಣ ನಟಿಸುತ್ತಿದ್ದು, ಆ ಚಿತ್ರಕ್ಕೆ “ಕವಚ’ ಎಂದು ಹೆಸರಿಡಲಾಗಿದೆ. ಗುರುವಾರ ಚಿತ್ರದ ಮುಹೂರ್ತ ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯಿತು.
ಈ ಚಿತ್ರವನ್ನು ಎಚ್.ಎಂ.ಎ ಸಿನಿಮಾನಡಿ ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಇನ್ನು ಜಿ.ವಿ.ಆರ್. ವಾಸು ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಇಶಾ ಕೊಪ್ಪಿಕರ್, ಕೃತಿಕಾ, ವಸಿಷ್ಠ ಸಿಂಹ, ರಾಜೇಶ್ ನಟರಂಗ ನಟಿಸುತ್ತಿದ್ದಾರೆ.
ಸುಮಾರು 15 ವರ್ಷಗಳ ನಂತರ ಶಿವಣ್ಣ ರೀಮೇಕ್‌ನಲ್ಲಿ ನಟಿಸಲು ಕಾರಣ “ಒಪ್ಪಂ’ ಚಿತ್ರದ ಕಥೆಯಂತೆ. “15 ವರ್ಷಗಳಿಂದ ಯಾವುದೇ ರೀಮೇಕ್ ಮಾಡಿರಲಿಲ್ಲ. ಈ ಸಿನಿಮಾ ಮಾಡಲು ಕಾರಣ ಕಥೆ ಹಾಗೂ ಪಾತ್ರ. ಒಬ್ಬ ಅಂಧ ತನ್ನ ಕುಟುಂಬ ಉಳಿಸಲು ಏನೆಲ್ಲಾ ಮಾಡುತ್ತಾನೆ ಎಂಬ ಲೈನ್ ನನಗೆ ತುಂಬಾ ಇಷ್ಟವಾಯಿತು.
ಜೊತೆಗೆ ಅಂಧನ ಪಾತ್ರ ಕೂಡಾ ನನಗೆ ಮೊದಲು. ಈ ತರಹದ ಸವಾಲಿನ ಪಾತ್ರ ಮಾಡೋದು ಖುಷಿ. ಮೋಹನ್ ಲಾಲ್ ಮಟ್ಟಕ್ಕೆ ನಟಿಸುತ್ತೇನೋ ಗೊತ್ತಿಲ್ಲ, ಆದರೆ, ಶೇ 60 ರಷ್ಟಾದರೂ ನ್ಯಾಯ ಒದಗಿಸುತ್ತೇನೆ. ಈ ಪಾತ್ರಕ್ಕಾಗಿ ಮ್ಯಾನರೀಸಂ ಕೂಡಾ ಬದಲಾಗಬೇಕಿದೆ’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ.
ಕಮರ್ಷಿಯಲ್ ರೀಮೇಕ್ ಮಾಡಲ್ಲ: ಶಿವಣ್ಣ ರೀಮೇಕ್ ಮಾಡಲಾರಂಭಿಸಿದ್ದಾರೆಂದಕ್ಷಣ ಇದ್ದಬದ್ದ ಸಿನಿಮಾಗಳ ರೀಮೇಕ್ ಕಥೆ ಹೇಳುವಂತಿಲ್ಲ. ಏಕೆಂದರೆ ಶಿವಣ್ಣ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅದು ಕಮರ್ಷಿಯಲ್ ಸಿನಿಮಾಗಳನ್ನು ರೀಮೇಕ್ ಮಾಡಲ್ಲ ಎಂದು.
“ನನಗೆ ತುಂಬಾ ಇಷ್ಟವಾದ, ಮನಸ್ಸಿಗೆ ಹತ್ತಿರವಾದ ಕಥೆಯನ್ನಷ್ಟೇ ರೀಮೇಕ್ ಮಾಡುತ್ತೇನೆ. ಅದು ಬಿಟ್ಟು ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನು ರೀಮೇಕ್ ಮಾಡಲ್ಲ. “ಒಪ್ಪಂ’ ತರಹದ ಕಥೆಗಳು ಇಷ್ಟವಾಗಿ, ಆ ಪಾತ್ರ ಮಾಡಬೇಕೆಂಬ ಆಸೆ ನನಗೆ ಬಂದರೆ ಮಾತ್ರ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.