Advertisement

ನೆನೆವುದೆನ್ನ ಮನಂ ಸ್ವಾತಂತ್ರ್ಯ ಪೂರ್ವ ಪತ್ರಿಕಾರಂಗಮಂ

11:09 PM Nov 06, 2022 | Team Udayavani |

ಮಣಿಪಾಲದಲ್ಲಿ ಬೆಳೆದ ಪತ್ರಿಕಾರಂಗದ ಶ್ರೇಷ್ಠ ಸಾಧಕರ ಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮವನ್ನು ನ. 7ರಂದು (ಇಂದು) “ಉದಯವಾಣಿ’ಯು ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದೆ. ಮಣಿಪಾಲದಲ್ಲಿ 1937ರಲ್ಲಿ ಆರಂಭಗೊಂಡ “ಅಂತರಂಗ’ ವಾರಪತ್ರಿಕೆಯು ಕೆಲವೇ ವರ್ಷ ಮುನ್ನಡೆದರೂ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಯಿತು. ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಎಸ್‌.ಯು. ಪಣಿಯಾಡಿ, ವ್ಯವಸ್ಥಾಪಕ ಸಂಪಾದಕರಾಗಿ ಕಮಾಲ್‌ ಹೈದರ್‌, ಉಪಸಂಪಾದಕರಾಗಿ ಎಂ.ವಿ.ಹೆಗ್ಡೆ, ಪಾ.ವೆಂ.ಆಚಾರ್ಯ, ಬನ್ನಂಜೆ ರಾಮಾಚಾರ್ಯ, ವ್ಯವಸ್ಥಾಪಕರಾಗಿ ಬೈಕಾಡಿ ಕೃಷ್ಣಯ್ಯ ಅವರು ಸೇವೆ ಸಲ್ಲಿಸಿ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಇವರೆಲ್ಲರೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು. ಇವರೆಲ್ಲ ಜನಿಸಿ ಒಂದು ಶತಮಾನ ಕಳೆದಿದೆ. ಇವರ ಜನ್ಮ ಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮವನ್ನು “ಉದಯವಾಣಿ’ಯ ಸುವರ್ಣೋತ್ತರ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದೆ. 1930ರ ದಶಕದ ಕೊನೆ, 1940ರ ದಶಕದ ಆರಂಭದಲ್ಲಿ “ಅಂತರಂಗ’ ಪತ್ರಿಕೆ ನಡೆದರೆ, ನಾಲ್ಕು ದಶಕಗಳ ಬಳಿಕ 1983ರಲ್ಲಿ ಮಣಿಪಾಲದಲ್ಲಿ ಉದಯವಾಣಿಯ ಸಹೋದರ ಪತ್ರಿಕೆ “ತರಂಗ’ ಆರಂಭಗೊಂಡಿತು. ಇದೀಗ “ತರಂಗ’ ಆರಂಭವಾಗಿ ನಾಲ್ಕು ದಶಕ ಕಳೆದಿದೆ.

Advertisement

ಎಸ್‌.ಯು.ಪಣಿಯಾಡಿ 1897-1959
ಶ್ರೀನಿವಾಸ ಉಪಾಧ್ಯ ಪಣಿಯಾಡಿಯವರು ಎಸ್‌.ಯು. ಪಣಿಯಾಡಿಯವರೆಂದೇ ಪ್ರಸಿದ್ಧರು. ಇವರು ಪತ್ರಿಕಾರಂಗದ ಜತೆ ಸ್ವಾತಂತ್ರ್ಯ ಚಳವಳಿ, ತುಳು ಚಳವಳಿ, ತುಳು ಸಾಹಿತ್ಯ, ತುಳು ವ್ಯಾಕರಣ, ಮುದ್ರಣ ಸಂಸ್ಥೆಯ ಸ್ಥಾಪನೆ, ಹಣಕಾಸು ಸಂಸ್ಥೆಯ ಸ್ಥಾಪನೆ ಮೊದಲಾದ ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದವರು. ಅವರು ಮಣಿಪಾಲದಲ್ಲಿ ಆರಂಭಿಸಿದ “ಅಂತರಂಗ’ ವಾರಪತ್ರಿಕೆ ತನ್ನ ಸೊÌàಪಜ್ಞತೆ ಯಿಂದಾಗಿ ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಮನ್ನಣೆ ಗಳಿಸಿದೆ. ಮದ್ರಾಸಿನಲ್ಲಿ ಸಂಸ್ಕೃತದಲ್ಲಿ ಶಿರೋ ಮಣಿ ಪದವಿ ಪಡೆದು 1920ರಲ್ಲಿ ಗುಜರಾತಿನ ಬರೋಡಾದ ಗ್ರಂಥಾಲಯದಲ್ಲಿ ಉದ್ಯೋಗಸ್ಥರಾ ದರು. 1923ರಲ್ಲಿ ರಾಜೀನಾಮೆ ನೀಡಿ ಉಡುಪಿಗೆ ಬಂದು ವ್ಯವಹಾರ, ಸ್ವಾತಂತ್ರ್ಯ ಹೋರಾಟ, ತುಳು ಚಳವಳಿಯಲ್ಲಿ ತೊಡಗಿಕೊಂಡರು. ಇವರು ಉಡುಪಿ ಅನಂತೇಶ್ವರ ದೇವಸ್ಥಾನದ ಅರ್ಚಕ ಮನೆತನದವರು. ಉಡುಪಿ ರಥಬೀದಿಯ ಮಧ್ವಸಿದ್ಧಾಂತ ಗ್ರಂಥಾಲಯದ ಪಾವಂಜೆ ಗುರುರಾಯರ ಪುತ್ರಿ ಭಾರತಿ ಇವರ ಪತ್ನಿ. ನಾವು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು “ಅಂತರಂಗ’ ಪತ್ರಿಕೆಯ ಪ್ರಭಾವಲಯವನ್ನು. ಇದರ ಬೆಲೆ ಒಂದಾಣೆಯಾಗಿತ್ತು. ಇದೊಂದು ಆ ಕಾಲದ ಕ್ರಾಂತಿಕಾರಿ ಪ್ರಯೋಗ. ಬಹುಬೇಗನೆ ಕರ್ನಾಟಕದ ಜನ ಮನಸ್ಸನ್ನು ಗೆದ್ದುಕೊಂಡಿತು. ಆಗ ಜನಪ್ರಿಯವಾಗಿದ್ದ ಬೆಂಗಳೂರಿನ “ಪ್ರಜಾಮತ’ದ ಸಂಪಾದಕರಾಗಿದ್ದ ಬಿ.ಎನ್‌.ಗುಪ್ತ ಅವರು “ಅಂತರಂಗ’ದ ಜಯಭೇರಿಯನ್ನು ಕಂಡು “ಇವನೆಲ್ಲಿಂದ ಬಂದ್ನಪ್ಪಾ? ಗ್ರಹಚಾರ’ ಎಂದು ಉದ್ಗರಿಸಿದ್ದರಂತೆ. ಸ್ವಾತಂತ್ರ್ಯ ಚಳವಳಿ, ತುಳು ಚಳವಳಿಗಾಗಿ ಎಲ್ಲವನ್ನೂ ಕಳೆದುಕೊಂಡ ಮಹಾನುಭಾವ ಇವರು. ಹೀಗಾಗಿ ಅಂತರಂಗವು ಬಹುಕಾಲ ಬಾಳಲಿಲ್ಲ.

ಕಮಾಲ್‌ ಹೈದರ್‌ 1916-1998
“ಅಂತರಂಗ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದವರು ಕಮಾಲ್‌ ಹೈದರ್‌. 18ನೆಯ ವಯಸ್ಸಿನಲ್ಲಿಯೇ ಕನ್ನಡದ ಪ್ರತಿಭಾವಂತ ಪತ್ರಕರ್ತರಾದರು. ಮಣಿಪಾಲದಲ್ಲಿ ವಾಸವಿದ್ದ ಅವರು 1935ರಲ್ಲಿ ಕಾಸರಗೋಡು ಮಂಜೇಶ್ವರದಿಂದ ಹೊರಡುತ್ತಿದ್ದ ಜ್ಯೋತಿ ಪತ್ರಿಕೆಯ ಸಂಪಾದಕರಾಗಿದ್ದರು, ಅಂಕಣವನ್ನೂ ಬರೆಯುತ್ತಿ ದ್ದರು. ಹೈದರ್‌ಗೆ ಇಂಗ್ಲಿಷ್‌ ಭಾಷೆಯಲ್ಲಿ ಉತ್ತಮ ಹಿಡಿತ ವಿತ್ತು, ಇವರ ಪತ್ನಿ ಮಂಗಳೂರಿನ ಅಹಮ್ಮದ್‌ ಅವರ ಪುತ್ರಿ ವಹಿದಾ. 1946ರಲ್ಲಿ ಹೈದರ್‌ ಕಲ್ಕತ್ತಾಕ್ಕೆ ತೆರಳಿ ಅಲ್ಲಿ ಕೆಲವು ದಿನ “ಸ್ಟಾರ್‌ ಆಫ್ ಇಂಡಿಯ’ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಹೈದರ್‌ ಮುಂಬಯಿಯ ಪ್ರೀಪ್ರಸ್‌ನಲ್ಲಿದ್ದಿರುವ ಸಾಧ್ಯತೆ ಇದೆ. ಹೈದರ್‌ ಅವರು 1946ರಲ್ಲಿ ಲಾಹೋರ್‌ಗೆ ಹೋಗಿ ಬಳಿಕ ಪಾಕಿಸ್ಥಾನದಲ್ಲಿಯೇ ನೆಲೆ ನಿಂತರು. ಆಗಷ್ಟೆ ಮಹಮ್ಮದಾಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ ಆರಂಭಿಸಿದ ಇಂಗ್ಲಿಷ್‌ ಪತ್ರಿಕೆಗೆ ನೇರವಾಗಿ ಸುದ್ದಿ ಸಂಪಾದಕರಾಗಿ ಸೇರಿದರು. ದೇಶ ವಿಭಜನೆ ಬಳಿಕ “ಪಾಕಿಸ್ಥಾನ್‌ ಟೈಂಸ್‌’ ಎಂಬ ಹೆಸರು ಬಂತು. ಸಂಪಾದಕ ಹುದ್ದೆಗೂ ಏರಿದ ಹೈದರ್‌ 1974ರಲ್ಲಿ ನಿವೃತ್ತಿ ಹೊಂದಿದರು. ಉತ್ತಮ ಛಾಯಾಚಿತ್ರಗ್ರಾಹಕರಾಗಿದ್ದ ಅವರಲ್ಲಿ ಅಪರೂಪದ ಕೆಮರಾಗಳ ಸಂಗ್ರಹವಿತ್ತು. ಹಲವಾರು ದೇಶಗಳಿಗೆ ಪ್ರವಾಸ ಮಾಡಿದ್ದ ಹೈದರ್‌ 1980ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದರು. ಒಟ್ಟಾರೆ ಇವರು ಕರಾವಳಿಯ ಬ್ಯಾರಿ ಸಮುದಾಯದವರೆಂಬುದನ್ನು ಬ್ಯಾರಿ ಅಕಾಡೆಮಿಯೂ ಖಚಿತಪಡಿಸಿದೆ. 1940ರ ದಶಕದಲ್ಲಿ ದೇಶ ಬಿಟ್ಟಿದ್ದರೂ ಹೈದರ್‌ ಅವರು ಬನ್ನಂಜೆ ರಾಮಾಚಾರ್ಯರೊಂದಿಗೆ 1970ರ ವರೆಗೂ ಕನ್ನಡದಲ್ಲಿ ಪತ್ರ ವ್ಯವಹಾರ ನಡೆಸುತ್ತಿದ್ದರು.

ಎಂ.ವಿ.ಹೆಗ್ಡೆ 1914-1984
ಎಂ.ವಿ.ಹೆಗ್ಡೆಯವರ ಪೂರ್ಣ ಹೆಸರು ಮಟ್ಟಾರು ವಿಟಲ ಹೆಗ್ಡೆ. ಇವರು ಪತ್ರಿಕೋ ದ್ಯಮದ ಜತೆಗೆ ಸಮಾಜ ಸುಧಾರಣೆ, ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯವಾದ, ಸಾಹಿತ್ಯ ಹೀಗೆ ಬಹುಮುಖ ಕೊಡುಗೆಗಳನ್ನು ನೀಡಿದವರು. ಎಸ್‌.ಯು.ಪಣಿಯಾಡಿಯವರ ನಿಕಟವರ್ತಿಗಳಾಗಿ “ಅಂತರಂಗ’ ಪತ್ರಿಕೆಯ ಮೂಲಕ ಕರ್ನಾಟಕದ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡರು. ಪ್ರಖರ ವೈಚಾರಿಕರಾಗಿದ್ದ ಹೆಗ್ಡೆಯವರು “ತಾಳ ಮೇಳ’, “ತುಂತುರು’, “ನಿಮ್ಮೊಳಗೇ ಇರುವ ನೀತಿ ದೇವ’ ಎಂಬಿತ್ಯಾದಿ ಸ್ಥಿರ ಶೀರ್ಷಿಕೆಯಡಿ ಅಂಕಣಗಳನ್ನು ಬರೆಯುತ್ತಿದ್ದರು. “ನವಭಾರತ’ ಪತ್ರಿಕೆಯ ಸಂಪಾದಕೀಯ ಮಂಡಳಿ ಮುಖ್ಯಸ್ಥರಾಗಿ ಕೊನೆಯವರೆಗೂ ಸೇವೆ ಸಲ್ಲಿಸಿದ್ದರು. ಎಂ.ವಿ.ಹೆಗ್ಡೆಯವರು ಯಕ್ಷಗಾನ ತಾಳಮದ್ದಲೆಯನ್ನೂ ರಚಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಅವರು ಬರೆದ “ಸ್ವರಾಜ್ಯ ವಿಜಯ’ ಪ್ರಸಂಗವನ್ನು 1947ರ ಆಗಸ್ಟ್‌ 14ರ ರಾತ್ರಿ ಉಡುಪಿ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಪ್ರಸ್ತುತಪಡಿಸಲಾಗಿತ್ತು. ಮರು ವರ್ಷ ಹೈದರಾಬಾದ್‌ ಪ್ರಾಂತ ನಿಜಾಮನಿಂದ ಭಾರತದೊಂದಿಗೆ ವಿಲೀನಗೊಂಡಾಗ “ಹೈದರಾಬಾದ್‌ ವಿಜಯ’ ಪ್ರಸಂಗವನ್ನು ಬರೆದು ಪ್ರಸ್ತುತಪಡಿಸಿದ್ದರು. ಇವೆರಡು ಪ್ರಸಂಗಗಳ ಸ್ಮರಣಾರ್ಥವಾಗಿ ದೇಶದ 70ನೆಯ ಸ್ವಾತಂತ್ರೊéàತ್ಸವದ ಸಂದರ್ಭ ಶ್ರೀಕೃಷ್ಣಮಠದಲ್ಲಿ ಪೇಜಾವರ ಶ್ರೀಗಳ ಐದನೆಯ ಪರ್ಯಾಯೋತ್ಸವದ ಅವಧಿಯಲ್ಲಿ ಸಂಘಟಕ ಸುಧಾಕರ ಆಚಾರ್ಯರು ಮರುಸೃಷ್ಟಿಸಿ ಪ್ರಸ್ತುತಪಡಿಸಿದ್ದರು. ಭೂಮಸೂದೆ ಕಾನೂನು ಬರುವಾಗ ತನ್ನೆಲ್ಲ ಆಸ್ತಿಗಳನ್ನು ಯಾವುದೇ ತಕರಾರು ಇಲ್ಲದೆ ಗೇಣಿದಾರರಿಗೆ ಕೊಡುವ ಮೂಲಕ “ನಡೆ-ನುಡಿ’ಯನ್ನು ಏಕತ್ರಗೊಳಿಸಿದ್ದರು.

ಬನ್ನಂಜೆ ರಾಮಾಚಾರ್ಯ 1917-2010
ಬನ್ನಂಜೆ ರಾಮಾಚಾರ್ಯರು ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ವರು. ತಂದೆ ಪಡಮುನ್ನೂರು ನಾರಾಯಣ ಆಚಾರ್ಯರು ಆ ಕಾಲದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ತಂದೆಯವರ ಪ್ರಭಾವದಿಂದ ಭಾಷಾಶುದ್ಧತೆಯನ್ನು ರೂಢಿಸಿಕೊಂಡ ಬನ್ನಂಜೆಯವರು ಪತ್ರಿಕೆಯಲ್ಲೂ ಈ ಶುದ್ಧತೆಗೆ ಮಹತ್ವ ನೀಡಿದರು. ಆರ್‌.ಎಸ್‌.ಶೆಣೈ ಅವರು ಆರಂಭಿಸಿದ “ವರ್ತಕ ಧುರೀಣ’ ಎಂಬ ಪತ್ರಿಕೆ ಯಲ್ಲಿ ಸೇರಿಕೊಂಡ ಬನ್ನಂಜೆಯವರು ಅದನ್ನು “ಧುರೀಣ’ ಎಂಬ ಸಾಹಿತ್ಯ ಪತ್ರಿಕೆಯನ್ನಾಗಿ ಪರಿವರ್ತಿ ಸಿದರು. ಬಳಿಕ ನವಶಕ್ತಿ ಎಂಬ ಮಾಸಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. 1946ರಲ್ಲಿ “ಯುಗಪುರುಷ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ ಮೂವರಲ್ಲಿ ಬನ್ನಂಜೆಯವರೂ ಓರ್ವರು. 1950ರಲ್ಲಿ ಬನ್ನಂಜೆಯವರು ಸ್ವತಂತ್ರವಾಗಿ ಪತ್ರಿಕೆಯೊಂದನ್ನು ಪ್ರಕಟಿಸುವ ಕಾರ್ಯಕ್ಕೆ ಮುಂದಾದರು. ಇದರ ಪರಿಣಾಮವಾಗಿ “ಸುದರ್ಶನ’ ಎಂಬ ಪತ್ರಿಕೆ ಹೊರಬಂದಿತು. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ “ನವಭಾರತ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ (1960ರಿಂದ 69ರ ತನಕ ) ಸೇರಿಕೊಂಡ ಅನಂತರ “ಸುದರ್ಶನ’ವು ನಿಂತು ಹೋಯಿತು. 1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಸೇರಿಕೊಂಡ ರಾಮಾಚಾರ್ಯರು ಇದರÇÉೆ ಹಲವು ವರ್ಷಗಳ ಕಾಲ ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದರು. ಉದಯವಾಣಿಯಲ್ಲಿ ಬನ್ನಂಜೆಯವರು ಬರೆದ ಸಂಪಾದಕೀಯವು ಪುಸ್ತಕ ರೂಪದಲ್ಲಿ ಹೊರಬಂದಿದೆ. ಉದಯವಾಣಿ ಪತ್ರಿಕೆಯ ಮೂಲಕ ಅನೇಕ ಯುವ ಬರೆಹಗಾರರನ್ನು ಪ್ರೋತ್ಸಾಹಿಸಿ ಬೆಳೆಸಿದ ಬನ್ನಂಜೆಯವರು ಈ ಪತ್ರಿಕೆಯನ್ನು ಜನಸಾಮಾನ್ಯರ ಮಟ್ಟದಲ್ಲೂ ಜನಪ್ರಿಯವಾಗುವಂತೆ ಮಾಡಿದರು.

Advertisement

ಪಾ.ವೆಂ.ಆಚಾರ್ಯ 1915-1992
ಪಾಡಿಗಾರು ವೆಂಕಟರಮಣ ಆಚಾರ್ಯರು ಪಾ.ವೆಂ.ಆಚಾರ್ಯರೆಂದು ಪ್ರಸಿದ್ಧರು. ಲಾಂಗೂಲಾಚಾರ್ಯರೆಂಬ ಹೆಸರಿನಲ್ಲಿಯೂ ಬರೆಯುತ್ತಿದ್ದರು. ಇವರ ಪತ್ರಿಕಾರಂಗದ ವ್ಯವಸಾಯ ಆರಂಭಗೊಂಡದ್ದು ಮಣಿಪಾಲದ “ಅಂತರಂಗ’ ಪತ್ರಿಕೆಯ ಮೂಲಕ. 1937ರಿಂದ 42ರ ವರೆಗೆ ಉಡುಪಿಯಲ್ಲಿದ್ದಾಗ, 1942ರಿಂದ 74ರ ವರೆಗೆ ಕರ್ಮವೀರ, ಕಸ್ತೂರಿ ಪತ್ರಿಕೆಯ ಮೂಲಕ, 1974ರಿಂದ 92ರ ವರೆಗೆ ನಿವೃತ್ತಿ ಅವಧಿಯಲ್ಲಿ “ತುಷಾರ’, “ತರಂಗ’, “ಸುಗುಣಮಾಲಾ’ ಮೊದಲಾದ ಪತ್ರಿಕೆಗಳ ಮೂಲಕ ಅವರ ಲೇಖನಿ ವ್ಯವಸಾಯವನ್ನು ಗುರುತಿಸಬಹುದು. ಪಾವೆಂ ಕುತೂಹಲ ದಿಗ್ಭ್ರಮೆ ಹುಟ್ಟಿಸುತ್ತದೆ. ಕಲಿತದ್ದು ಕೇವಲ ಹತ್ತನೆಯ ತರಗತಿ. ಆದರೆ ವಿಜ್ಞಾನದ ಖಗೋಳ ಶಾಸ್ತ್ರ, ಭೌಗೋಳಿಕ, ಸಸ್ಯಪ್ರಪಂಚ, ಪ್ರಾಣಿ ಪ್ರಪಂಚ, ಮನೋವಿಜ್ಞಾನ, ಲೈಂಗಿಕ ವಿಜ್ಞಾನ, ವೈದ್ಯಕೀಯ, ಯೋಗ, ಯಂತ್ರೋಪಕರಣ ಹೀಗೆ ಬಹುಪ್ರಕಾರಗಳಲ್ಲಿ ಕೈಯಾಡಿಸಿ ಲೇಖನ ರೂಪದಲ್ಲಿ ಜನಸಾಮಾನ್ಯರಿಗೆ ವಿಜ್ಞಾನದ ಅರಿವು ಮೂಡಿಸಿದ್ದಾರೆ. ಶಬ್ದಗಳ ಮೂಲ, ಸ್ಥಳನಾಮಗಳ ಮೂಲವನ್ನು ಕೆದಕಿ ಬರೆಯುತ್ತಿದ್ದರು. ಪಾ.ವೆಂ. ಅವರ ಪುತ್ರ ಡಾ| ಶ್ರೀನಿವಾಸ ಪಾಡಿಗಾರರು ಧಾರವಾಡ ವಿ.ವಿ. ಪುರಾತತ್ವ ವಿಭಾಗದ ಮುಖ್ಯಸ್ಥರಾಗಿದ್ದಾಗ ಸ್ಥಳನಾಮದ ಕುರಿತು ತಂದೆಯ ತಂತ್ರವನ್ನು ಅನುಸರಿಸಿ ಪ್ರಬಂಧ ಮಂಡಿಸಿದ ಮರು ವರ್ಷ ಬರೋಡಾದಲ್ಲಿ ನಡೆದ ವಾರ್ಷಿಕ ಅಧಿವೇಶನದ ಅಧ್ಯಕ್ಷ ಸ್ಥಾನ ಪ್ರಾಪ್ತಿಯಾಯಿತು. ಅವರು ಹತ್ತಾರು ವಿಷಯಗಳಲ್ಲಿ ಏಕಕಾಲಕ್ಕೆ ಚಿಂತನೆ ನಡೆಸುತ್ತಿದ್ದುದು ಏಕಕಾಲದಲ್ಲಿ ಹೊರಬಂದ ಬರೆವಣಿಗೆಗಳಲ್ಲಿ ಕಂಡುಬರುತ್ತದೆ. ಅವರು ಕಲಿತದ್ದಕ್ಕಿಂತ ಓದಿದ್ದು ಜಾಸ್ತಿ. ಪಾಶ್ಚಾತ್ಯ ಜಗತ್ತಿನ ಮೇಧಾವಿಗಳನ್ನು ಅವರು ಆ ಕಾಲದಲ್ಲಿ ಕನ್ನಡಿಗರಿಗೆ ಪರಿಚಯಿಸಿದ್ದು ವಿಶೇಷ.

ಬೈಕಾಡಿ ಕೃಷ್ಣಯ್ಯ 1918-1992
ಬೈಕಾಡಿ ಕೃಷ್ಣಯ್ಯನವರು 1937ರಲ್ಲಿ ಎಸ್‌.ಯು.ಪಣಿಯಾಡಿಯವರು ಮಣಿಪಾಲ ದಲ್ಲಿ ಪ್ರಸ್‌ ಸ್ಥಾಪಿಸಿದಾಗ ವ್ಯವಸ್ಥಾಪಕರಾಗಿ ಸೇವೆಯನ್ನು ಆರಂಭಿಸಿದವರು. ಪಣಿಯಾಡಿ ಯವರ ಬಳಿಕ ಮಣಿಪಾಲದ ಪೈ ಬಂಧುಗಳು ಪ್ರಸ್‌ನ್ನು ಮುಂದುವರಿಸಿದಾಗ ವ್ಯವಸ್ಥಾಪಕರಾಗಿಯೇ ಸೇವೆಯಲ್ಲಿ ಮುಂದುವರಿದರು. ಇವರ ಕರ್ತವ್ಯಪರಾಯಣತೆ ಬಲು ವಿಶಿಷ್ಟವಾದುದು. ಬೆಳಗ್ಗೆ 8.30ಕ್ಕೆ ಕೆಲಸಕ್ಕೆ ಹಾಜರಾದರೆ ಮತ್ತೆ ಮನೆಗೆ ಹಿಂದಿರುಗುವುದು ರಾತ್ರಿ 12.30ರ ಬಳಿಕ. ಈ ನಡುವೆ ಊಟಕ್ಕೆ ಮನೆಗೆ ಹೋಗಿ ಬರುವು ದಿತ್ತು. ಇದು ಸುಮಾರು 50 ವರ್ಷಗಳ ಕಾಲ ಮುಂದುವರಿದಿತ್ತು. ಕೊನೆಯ ಐದು ವರ್ಷ ಮಾತ್ರ ರಾತ್ರಿ ಊಟಕ್ಕೆ ಹೋದರೆ ಮತ್ತೆ ಪ್ರಸ್‌ಗೆ ಹಿಂದಿರು ಗುತ್ತಿರಲಿಲ್ಲ. ಇವರು ಓದಿದ್ದು ಹತ್ತನೆಯ ತರಗತಿ ಯಾದರೂ ಇಂಗ್ಲಿಷ್‌ನಲ್ಲಿ ಹಿಡಿತ ಅಮೋಘವಾ ದುದು. ಹತ್ತಾರು ಸಂಸ್ಥೆಗಳೊಂದಿಗೆ ಪತ್ರ ವ್ಯವಹಾರ ನಡೆಯುತ್ತಿದ್ದಾಗ ಈ ಗ್ರಾ.ಪಂ. ಮಟ್ಟದಿಂದ ಬಂದ ಉತ್ತರ ನೋಡಿ ಇವರ ವೃತ್ತಿಪರತೆಗೆ ಬೆರುಗು ಆದದ್ದುಂಟು. ಉದಯವಾಣಿ ಆರಂಭದಲ್ಲಿ ಮುದ್ರಣ ವಿಭಾಗದ ಜವಾಬ್ದಾರಿಯನ್ನೂ ನೋಡಿಕೊಂಡರು. ಒಟ್ಟಾರೆ ಮೊದಲು “ಅಂತರಂಗ’, ಬಳಿಕ “ಉದಯವಾಣಿ’ಯ ಮುದ್ರಣದಲ್ಲಿ ಕೃಷ್ಣಯ್ಯನವರ ಯೋಗದಾನ ಮಹತ್ವಪೂರ್ಣವಾದುದು. “ನೋಡಲು ವಾಮನಮೂರ್ತಿಯಾದರೂ ಪರಾಕ್ರಮದಲ್ಲಿ ತ್ರಿವಿಕ್ರಮನಾಗಿದ್ದರು. ನಿಷ್ಠೆ ಮತ್ತು ಕಾಯಕಕ್ಕೆ ಇನ್ನೊಂದು ಹೆಸರು ಕೃಷ್ಣಯ್ಯ. ಅವರ ಹೆಸರು ಬಿ.ಕೃಷ್ಣಯ್ಯ. ಬಿ (ಬಿಇ ಇಂಗ್ಲಿಷ್‌ನಲ್ಲಿರಬೇಕು) ಕೃಷ್ಣಯ್ಯ- ಕೃಷ್ಣಯ್ಯನಂತೆ ಇರಿ, ಈಗಲ್ಲವಾದರೆ ಮುಂದಾದರೂ ಆಗಿರಿ’ ಎಂದು ಬರೆದಿದ್ದರು ಸಾಹಿತಿ, ಅಂಕಣಕಾರ ಪ್ರೊ| ಕು.ಶಿ.ಹರಿದಾಸ ಭಟ್‌.

1960ರಲ್ಲೇ ಉಡುಪಿ ಜಿಲ್ಲೆ, 1970ರಲ್ಲೇ ಕೊಂಕಣ ರೈಲ್ವೇ ಕನಸು
ಉಡುಪಿ ಜಿಲ್ಲೆಯ ಹುಟ್ಟು ಮತ್ತು ಕೊಂಕಣ ರೈಲ್ವೇ ಕುರಿತು ಬನ್ನಂಜೆ ರಾಮಾಚಾರ್ಯರು ಬಹುಹಿಂದೆಯೇ ಪ್ರತಿಪಾದಿಸಿದ್ದರು. ಉಡುಪಿ ಪುರಸಭೆ ರಜತ ಮಹೋತ್ಸವ (1960-61) ಸ್ಮರಣ ಸಂಚಿಕೆಯಲ್ಲಿ ಕುಂದಾಪುರ ಉಪವಿಭಾಗದ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ಕ್ಷೇತ್ರವನ್ನು ಉಡುಪಿ ಜಿಲ್ಲೆ ಎಂದು ಹೆಸರಿಸಿ ಪ್ರತ್ಯೇಕಿಸಬೇಕು. ಉಳಿದ ಪ್ರದೇಶವು “ಮಂಗಳೂರು ಜಿಲ್ಲೆ’ಯಾಗಿ ಉಳಿಯಬೇಕು. ಎರಡೂ ಪ್ರದೇಶದ ಜನರಲ್ಲಿ ಭಾವನಾತ್ಮಕ ಏಕತ್ವವಿದ್ದರೂ ಯಕ್ಷಗಾನ, ಆಚಾರ ಅಭಿರುಚಿಗಳೂ ಸಹಿತ ಅನೇಕ ವಿಚಾರಗಳಲ್ಲಿ ಭಿನ್ನತೆ ಇರುವುದನ್ನು ಗಮನಿಸದಿರಲಾಗುವುದಿಲ್ಲ. ಕೇಂದ್ರ ಸ್ಥಾನ ಉಡುಪಿಯೇ ಆಗಬೇಕೆಂದು ವಾದಿಸುವುದಿಲ್ಲ. ಅಂತೂ ನಿಯೋಜಿತ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಸ್ಥಳವಾಗಲು ಅರ್ಹತೆಯುಳ್ಳ ಜಾಗಕ್ಕೇನೂ ಬರಗಾಲವಿಲ್ಲ ಎಂದು ಬರೆದಿದ್ದರು.

1-1-1970ರಂದು ಆರಂಭಗೊಂಡ “ಉದಯವಾಣಿ’ಯ 6-1-1070ರ ಸಂಚಿಕೆಯ ಸಂಪಾದಕೀಯದಲ್ಲಿ ಮೈಸೂರಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಬಾರಕೂರು ಸೇತುವೆಯನ್ನು ಉದ್ಘಾಟಿಸುವ ವೇಳೆ ಮಂಗಳೂರು- ಮುಂಬಯಿ ರೈಲು ಮಾರ್ಗ ರಚಿಸುವಂತೆ ಮೈಸೂರು ಮತ್ತು ಮಹಾರಾಷ್ಟ್ರ ಸರಕಾರಗಳು ಕೂಡಿ ಪ್ರಯತ್ನಿಸುವ ಕುರಿತು ಪ್ರಸ್ತಾವಿಸಿರುವುದು ಉತ್ಸಾಹಕರ. ಹೆದ್ದಾರಿಯೊಂದು ಈಗಾಗಲೇ ಪೂರ್ತಿಗೊಳ್ಳುತ್ತಲಿದೆ. ಕರಾವಳಿ ರೈಲು ಮಾರ್ಗವೂ ರಚನೆಗೊಂಡರೆ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ರಾಜಮಾರ್ಗ ತೆರೆದಂತಾದೀತು. ಇದೊಂದು ದೀರ್ಘ‌ ಯೋಜನೆ. ಗಟ್ಟಿಮುಟ್ಟಿನ ಪ್ರಯತ್ನವಿಲ್ಲದೆ ಕಾರ್ಯಗತವಾಗುವಂತಿಲ್ಲ ಎಂದು ಪ್ರತಿಪಾದಿಸಲಾಗಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next