ಉಡುಪಿ: ಸರಕಾರಿ ಪಬ್ಲಿಕ್ ಶಾಲೆಯ ಬದಲಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರ ಜಿಲ್ಲಾ ಸಮಿತಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನೂರಾರು ಪ್ರತಿಭಟನೆಕಾರರು ಮಳೆಯನ್ನು ಲೆಕ್ಕಿಸದೆ ಕೊಡೆ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಜಿಲ್ಲಾ ಪ್ರ. ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ಜಿಲ್ಲೆಯ 54 ಸರಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಪ್ರಾರಂಭವಾಗಿದೆ. ಇದ‌್ದರಿಂದ ಅಂಗನವಾಡಿಗೆ ಬರಬೇಕಿದ್ದ ಮಕ್ಕಳು ಪಬ್ಲಿಕ್ ಶಾಲೆಗಳಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ 30 ರಿಂದ 3ಕ್ಕೆ ಕುಸಿತವಾಗಿದೆ. ಕಳೆದ 40 ವರ್ಷದಿಂದ ಐಸಿಡಿಎಸ್ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಬೀದಿಪಾಲಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬೇಡಿಕೆಗಳು
1995ರಲ್ಲಿ ಆಯ್ಕೆಯಾದ ಹಾಗೂ ಎಸ್‌ಎಸ್‌ಎಲ್ಸಿ ಪಾಸಾದ ಅಂಗನವಾಡಿ ಶಿಕ್ಷಕರಿಗೆ ತರಬೇತಿ ನೀಡಿ ಅಂಗನವಾಡಿಯಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿಯಲ್ಲಿ ಮೂಲಭೂತ ಸೌಕರ್ಯ ನೀಡಬೇಕು. ಮಕ್ಕಳಿಗೆ ಸಮವಸ್ತ್ರ ನೀಡಬೇಕು. ನಿವೃತ್ತಿ ಸೌಲಭ್ಯವನ್ನು ಬದಲಿಸಿ ಐ.ಎಲ್ಸಿ ಆಧಾರಿತ ನಿವೃತ್ತಿ ಪಿಂಚಣಿ ನೀಡಬೇಕು. ಸೇವಾ ಜೇಷ್ಠ ಆಧಾರದ ಮೇಲೆ ವೇತನ ಜಾರಿ, ಮೇಲ್ವೀಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣವಾಗಿ ಅಂಗನವಾಡಿ ಕಾರ್ಯಕರ್ತರಿಗೆ ನೀಡಬೇಕು. ಪ್ರಾಥಮಿಕ ಶಾಲೆಗಳ ಪ್ರವೇಶಕ್ಕೂ ಮುನ್ನ ಅಂಗನವಾಡಿ ಕೇಂದ್ರದಿಂದ ಯುಕೆಜಿ ಪೂರೈಸಿದ ಮಕ್ಕಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷೆ ಭಾರತಿ, ಖಚಾಂಚಿ ಯಶೋದಾ ಕೆ., ಕುಂದಾಪುರ ತಾಲೂಕು ಅಧ್ಯಕ್ಷೆ ಬಿ.ಆಶಾಲತಾ ಶೆಟ್ಟಿ, ಖಜಾಂಚಿ ಭಾಗ್ಯ, ಪ್ರ.ಕಾರ್ಯದರ್ಶಿ ಶಾಂತಾ, ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ ಎಸ್ ಶೆಟ್ಟಿ, ಸರೋಜಿನಿ, ಉಡುಪಿ ತಾಲೂಕು ಸಮಿತಿ ಅಧ್ಯಕ್ಷೆ ಅಂಬಿಕಾ, ಖಜಾಂಚಿ ಪ್ರಮೀಳಾ ಉಪಸ್ಥಿತರಿದ್ದರು.