Advertisement

ಮುಕ್ತ ಮುಕ್ತ; ಬೀಸುವ ದೊಣ್ಣೆಯಿಂದ ಬಚಾವ್‌?

08:32 PM Nov 10, 2019 | Sriram |

ಭಾರತದ ಮಾರುಕಟ್ಟೆಯನ್ನು ಇನ್ನಷ್ಟು ಉದಾರೀಕರಣಗೊಳಿಸುವ ಒಪ್ಪಂದಕ್ಕೆ(ಆರ್‌.ಸಿ.ಇಪಿ.) ತಾತ್ಕಾಲಿಕ ವಿರಾಮ ಬಿದ್ದಿದೆ. ಒಪ್ಪಂದದಿಂದಾಗಿ ಬಟ್ಟೆ, ಎಲೆಕ್ಟ್ರಾನಿಕ್ಸ್‌, ಮತ್ತಿತರ ವಸ್ತುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿತ್ತು ನಿಜ. ಆದರೆ ಅದರಿಂದಾಗಿ ದೇಶದ ಹಲವು ಉದ್ಯಮಗಳಿಗೆ ಹೊಡೆತ ಬೀಳುವ ಅಪಾಯವೂ ಇತ್ತು. ಹೀಗಾಗಿ ಆ ಕುರಿತು ಪರಾಮರ್ಶಿಸಲು ಸಮಯಸಿಕ್ಕಿದೆ.

Advertisement

ಅಂತಾರಾಷ್ಟ್ರೀಯ ವ್ಯಾಪಾರವು, ಒಂದು ನಿರ್ದಿಷ್ಟ ಜಾಗತಿಕ ನೀತಿ- ನಿಯಮಾವಳಿ ಮತ್ತು ಕಾನೂನಿನ ಚೌಕಟ್ಟಿನೊಳಗೆ ನಡೆಯುವಂತಾಗಲು, 1947ರಲ್ಲಿ ಭಾರತವೂ ಸೇರಿ 23 ದೇಶಗಳು ಗ್ಯಾಟ್‌ ಒಪ್ಪಂದ (General Agreement On Tariff Trade & GATT) ಮಾಡಿಕೊಂಡವು. ಅಂತಾರಾಷ್ಟ್ರೀಯ ವ್ಯಾಪಾರ- ವ್ಯವಹಾರದಲ್ಲಿನ ಅಡೆ- ತಡೆಗಳನ್ನು ನಿವಾರಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟವು. ಮುಂದೆ 1994- 95ರಲ್ಲಿ ಈ ಸಂಸ್ಥೆ ದೊಡ್ಡದಾಗಿ 123 ದೇಶಗಳು ಸೇರಿಕೊಂಡವು. ಮುಂದೆ ಇದರ ಹೆಸರು ಡಬ್ಲ್ಯು.ಟಿ.ಓ – ವಿಶ್ವ ವಾಣಿಜ್ಯ ಒಪ್ಪಂದ (World Trade Orgnisation) ಎಂದು ಬದಲಾಯಿತು. ಭಾರತವೂ ಸೇರಿ ಈಗ ಈ ಸಂಸ್ಥೆಯಲ್ಲಿ 164 ದೇಶಗಳು ಸೇರಿಕೊಂಡಿವೆ. ಅಂತಾರಾಷ್ಟ್ರೀಯ ವಾಣಿಜ್ಯ- ವ್ಯಾಪಾರವನ್ನು ಇನ್ನಷ್ಟು ಉದಾರೀಕರಣಗೊಳಿಸುವ ಮತ್ತು ಅದರ ಮೇಲ್ವಿಚಾರಣೆ ನೋಡಿಕೊಳ್ಳುವ ಉದ್ದೇಶ ಇದರ ಸ್ಥಾಪನೆಯ ಹಿಂದಿತ್ತು.

ಜಾಗತಿಕ ರಂಗದಲ್ಲಿ ಗ್ಯಾಟ್‌ ಇದ್ದಂತೆ, ಇದೇ ಮಾದರಿಯಲ್ಲಿ ಪ್ರಾದೇಶಿಕವಾಗಿ, ಪ್ರಾದೇಶಿಕ ಸಮಗ್ರ ಅರ್ಥಿಕ ಸಹಭಾಗಿತ್ವ (Regional Comprehensive Economic Partnership) ಒಪ್ಪಂದವನ್ನು ದಕ್ಷಿಣಪೂರ್ವ ಏಷ್ಯಾದ 10 ರಾಷ್ಟ್ರಗಳು (ಆಸಿಯಾನ್‌) ಸೇರಿದಂತೆ, ಚೀನಾ, ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದ.ಕೊರಿಯಾ ಮತ್ತು ಜಪಾನ್‌ ಸೇರಿ 16 ರಾಷ್ಟ್ರಗಳ ಮಧ್ಯೆ ಏರ್ಪಡಿಸುವ ಪ್ರಯತ್ನ ಸಾಗಿದೆ. ಈ ಒಪ್ಪಂದದ ನಿಟ್ಟಿನಲ್ಲಿ ಪೂರ್ವಭಾವಿ ಮಾತುಕತೆಗಳು 2012ರಲ್ಲಿ ಕಾಂಬೋಡಿಯಾದಲ್ಲಿ ನಡೆದ ಶೃಂಗಸಭೆಯಲ್ಲಿ ನಡೆದಿದ್ದು, ನವೆಂಬರ್‌ 4ರಂದು ಒಪ್ಪಂದಕ್ಕೆ ಸಹಿ ಹಾಕುವ ಸಿದ್ಧತೆ ನಡೆದಿತ್ತು. ಈ ಒಪ್ಪಂದ ಜಾರಿಗೆ ಬಂದರೆ, ಇದರ ಸದಸ್ಯ ರಾಷ್ಟ್ರಗಳು 80- 95% ಸರಕುಗಳನ್ನು ಯಾವುದೇ ಅಮದು ಸುಂಕವಿಲ್ಲದೆ ಆಮದು ಮಾಡಿಕೊಳ್ಳಬಹುದಿತ್ತು.

ಭಾರತ, ಚೀನಾ, ಜಪಾನ, ದ. ಕೊರಿಯಾ, ಫಿಲಿಫೈನ್ಸ್‌, ಕಾಂಬೋಡಿಯಾ, ಅಸ್ಟ್ರೇಲಿಯಾ, ನ್ಯೂಜಿಲೆಂಡ್‌, ಲಾವೋಸ್‌, ಮಲೇಷ್ಯಾ ಸಿಂಗಾಪೂರ್‌, ಥಾಯ್ಲೆಂಡ್‌, ವಿಯೆಟ್ನಾಂ, ಮ್ಯಾನ್ಮಾರ್‌, ಇಂಡೊನೇಷಿಯಾ ಮತ್ತು ಬ್ರುನೈ ದೇಶಗಳು ಈ ಒಪ್ಪಂದದ ವ್ಯಾಪ್ತಿಗೆ ಬರುತ್ತದೆ.

ಭಾರತದ ಮೇಲೆ ಪರಿಣಾಮ ಏನು?
ಈ ಒಪ್ಪಂದದ ವ್ಯಾಪ್ತಿಯ ರಾಷ್ಟ್ರಗಳಿಂದ ಅಮದಾಗುವ ಬಹುತೇಕ ಸರಕುಗಳಿಗೆ ಅಮದು ಸುಂಕ ಇರುವುದಿಲ್ಲ. ಅಂತೆಯೇ ಭಾರತವು ಮುಂದಿನ 15 ವರ್ಷಗಳ ಕಾಲ 85-90% ಸರಕುಗಳನ್ನು ಯಾವುದೇ ಸುಂಕವಿಲ್ಲದೇ ಆಮದು ಮಾಡಿಕೊಳ್ಳಬಹುದು ಎನ್ನಲಾಗಿದೆ. ಈ ಸರಕುಗಳು ಭಾರತದಲ್ಲಿ ಉತ್ಪಾದನೆಯಾದ ಸರಕುಗಳಿಗಿಂತ ಕಡಿಮೆ ದರದಲ್ಲಿ ದೊರಕುವುದರಿಂದ ಭಾರತದ ಉತ್ಪಾದನಾ ವಲಯಕ್ಕೆ ತೀವ್ರ ಹೊಡೆತ ಬೀಳುತ್ತದೆ. ಇದು ದೇಶದ ನಿರುದೋಗ ಸಮಸ್ಯೆಯನ್ನು ಉಲ½ಣಗೊಳಿಸುತ್ತದೆ ಮತ್ತು ಜಿಎಸ್‌ಟಿ ಸಂಗ್ರಹವನ್ನು ಕಡಿಮೆಗೊಳಿಸುತ್ತದೆ.

Advertisement

ಹೈನುಗಾರಿಕೆ, ಕೃಷಿಗೆ ಹೊಡೆತ
ಈ ಒಪ್ಪಂದದ ಸದಸ್ಯರಾಷ್ಟ್ರಗಳಾದ ನ್ಯೂಜಿಲೆಂಡ್‌ ಮತ್ತು ಅಸ್ಟ್ರೇಲಿಯಾ, ದೊಡ್ಡ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಹೈನುಗಾರಿಕಾ ಉತ್ಪನ್ನಗಳ ಬಳಕೆಯಲ್ಲಿ ಭಾರತ ದೊಡ್ಡ ಮಾರುಕಟ್ಟೆಯಾಗಿರುವುದರಿಂದ, ಈ ರಾಷ್ಟ್ರಗಳ ಹಾಲು ಮತ್ತು ಹಾಲಿನ ಉತ್ಪನ್ನಗಳು ನಮ್ಮ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಲಗ್ಗೆ ಇಡಲಿವೆ. ವಿದೇಶಿ ಹಾಲು ಸಾಕಷ್ಟು ಕಡಿಮೆ ಬೆಲೆಗೂ ದೊರಕಲಿದೆ. ಕಡಿಮೆ ಬೆಲೆಯ ಡೇರಿ ಉತ್ಪನ್ನಗಳತ್ತ ನಮ್ಮ ಗ್ರಾಹಕರು ಹೆಚ್ಚು ಆಸಕ್ತಿ ತೋರಿದರೆ, ಮುಂದಿನ ದಿನಗಳಲ್ಲಿ ಸ್ಥಳೀಯ ಹೈನುಗಾರಿಕೆ ಉದ್ಯಮವೇ ಹಳ್ಳ ಹಿಡಿಯಬಹುದು. ಹೈನುಗಾರಿಕೆ, ಭಾರತದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದ್ದು ಸುಮಾರು 10 ಕೋಟಿ ಜನರು ಇದರಲ್ಲಿ ಜೀವನೋಪಾಯ ಕಂಡುಕೊಂಡಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದವೇನಾದರೂ ಜಾರಿಗೆ ಬಂದರೆ, ಅದರ ನೇರ ಪರಿಣಾಮ ಹೈನುಗಾರಿಕೆಯ ಮೇಲಾಗಿಬಿಡುತ್ತದೆ. ಜೊತೆಗೆ ಈ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದರೆ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಅಮದು ಸುಂಕ ಶೂನ್ಯಕ್ಕೆ ಇಳಿಯುತ್ತಿದ್ದು, ಭಾರತದ ಚಹಾ, ಕಾಫಿ, ರಬ್ಬರ್‌, ಕಾಳು ಮೆಣಸು ಮತ್ತು ಅಡಕೆಗಳ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ.

ಅಪಾಯದಲ್ಲಿ ಜವಳಿ ಉದ್ಯಮ
ಬಾಂಗ್ಲಾದೇಶ, ಚೀನಾ ವಿಯೆಟ್ನಾಂ ದೇಶಗಳಿಂದ ಸುಂಕ ರಹಿತವಾಗಿ ಪಾಲಿಯೆಸ್ಟರ್‌ ಜವಳಿ ಫ್ರಾÂಬ್ರಿಕ್‌ಗಳು ಭಾರತದ ಮಾರುಕಟ್ಟೆಗೆ ಬಂದು ಬೀಳುತ್ತಿವೆ. ಗ್ರಾಹಕರು, ಕಡಿಮೆ ದರದ ಈ ಸರಕುಗಳತ್ತ ಒಲಿಯುತ್ತಿದ್ದಾರೆ. ವಿದೇಶಿ ಸರಕುಗಳ ಬೆಲೆಯ ಜೊತೆ ಪೈಪೋಟಿ ನಡೆಸಲು, ತನ್ನ ಸರಕುಗಳ ಉತ್ಪನ್ನ ವೆಚ್ಚವನ್ನು ತಗ್ಗಿಸಲು ಭಾರತವು ತಂತ್ರಜ್ಞಾನದ ಮೊರೆ ಹೋಗಬೇಕಾಗುತ್ತದೆ. ಈ ಪ್ರಕ್ರಿಯೆ, ಯಂತ್ರಗಳನ್ನು ಒಳಗೊಳ್ಳುವುದರಿಂದ ಕೆಲಸಗಾರರ ಸ್ಥಳವನ್ನು ಯಂತ್ರಗಳು ಆಕ್ರಮಿಸಿಕೊಂಡು ನಿರುದ್ಯೋಗ ಹೆಚ್ಚುವ ಅಪಾಯವೂ ಇದೆ.

ಭಾರತಕ್ಕೆ ಏನು ಲಾಭ?
ಈ ಒಪ್ಪಂದದಿಂದ ಭಾರತೀಯರಿಗೆ ಕೃಷಿ ಉತ್ಪನ್ನಗಳು, ಜವಳಿ, ಅಟೊಮೊಬೈಲ…, ಎಲೆಕ್ಟ್ರಾನಿಕ್‌ ವಸ್ತುಗಳು ಅಗ್ಗದಲ್ಲಿ ಇರುತ್ತಿದ್ದು, ದೇಶದಲ್ಲಿ ಹಣದುಬ್ಬರ ಗಮನಾರ್ಹ ಪ್ರಮಾಣದಲ್ಲಿ ತಗ್ಗಬಹುದು ಎನ್ನುವ ಆಶಯವೂ ಇದೆ.

“ಮೇಕ್‌ ಇನ್‌ ಇಂಡಿಯಾ’ ಅಪಾಯದಲ್ಲಿ
ನಿಯಂತ್ರಣ ಇದ್ದರೂ, ಸಾಕಷ್ಟು ಅಮದು ಶುಲ್ಕ ಇದ್ದರೂ, ಭಾರತದಲ್ಲಿ ಚೀನಾ ಸರಕುಗಳ ಪ್ರಾಬಲ್ಯ ಹೆಚ್ಚು. ಕೃಷಿ ಉತ್ಪನ್ನದೊಂದಿಗೆ, ವಿದ್ಯುನ್ಮಾನ, ತಂತ್ರಜ್ಞಾನ ಮತ್ತು ಅಟೋಮೊಬೈಲ್‌ಗ‌ಳ ದೊಡ್ಡ ನಿರ್ಮಾಣ ಯಂತ್ರ ಚೀನಾ. ಈ ಒಪ್ಪಂದ ಜಾರಿಯಾದರೆ, ದೊಡ್ಡ ಪ್ರಮಾಣದಲ್ಲಿ ಅಲ್ಲಿಂದ ಹಲವು ವಸ್ತುಗಳು ಭಾರತಕ್ಕೆ ಲಗ್ಗೆ ಇಡುವುದರಲ್ಲಿ ಸಂಶಯವಿಲ್ಲ. ಅಂತಿಮವಾಗಿ, ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಪೆಟ್ಟು ನೀಡುವುದು ಖಚಿತವಾದಂತೆ ತೋರುತ್ತಿದೆ.

ಮುಂದಿನ ಸಮ್ಮೇಳನ 2020ರಂದು, ವಿಯೆಟ್ನಾಂ ದೇಶದಲ್ಲಿ ನಡೆಯಲಿದೆ. ಮುಂದಿನ ಸಮ್ಮೇಳನಕ್ಕೂ ಮೊದಲು, ಈ ಒಪ್ಪಂದದಿಂದ ಏನೆಲ್ಲಾ ತೊಂದರೆಗಳಿವೆ ಎಂಬುದನ್ನು ವಿವರಿಸಿ ಹೇಳಲು, ಭಾರತಕ್ಕೆ ಸಾಕಷ್ಟು ಸಮಯ ದೊರಕುತ್ತಿದೆ. ಮಾತುಕತೆಯ ಸಂದರ್ಭದಲ್ಲಿ, ಭಾರತಕ್ಕೆ ಅತಂಕಕಾರಿಯಾದ ಅಂಶಗಳನ್ನು ವಿಸ್ತ್ರತವಾಗಿ ಚರ್ಚಿಸಿ ಪರಿಹರಿಸಿಕೊಳ್ಳಬಹುದು. ಆಗ ಈ ಒಪ್ಪಂದದ ವಿರುದ್ದದ ಪ್ರತಿಭಟನೆಯ ಕಾವೂ ತಿಳಿಯಾಗಬಹುದು. ಒಪ್ಪಂದದ ಮಾತುಕತೆ ಸದ್ಯ ಮುಂದೂಡಲ್ಪಟ್ಟಿದ್ದು, ಸದ್ಯಕ್ಕೆ ಭಾರತಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತಾಗಿದೆ. ಅಮೆರಿಕ ಜೊತೆಗಿನ ಸುಂಕ ಯುದ್ದದಲ್ಲಿ ಸಂಕಷ್ಟಕ್ಕೀಡಾಗಿರುವ ಚೀನಾ ಈ ಒಪ್ಪಂದದ ಮೂಲಕ ಭಾರತಕ್ಕೆ ಲಗ್ಗೆ ಇಡುವ ಅವಕಾಶ ಕಳೆದುಕೊಂಡಿದ್ದು, ಅದಕ್ಕೆ ನಿರಾಶೆಯಾಗಿದೆ.

– ರಮಾನಂದ ಶರ್ಮಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next