“ಪಾಕೆಟ್ ಮನಿ ಕೊಡ್ತೀವಿ. ಬೈಕ್ ತೆಗೆಸಿಕೊಡ್ತೀವಿ. ಈ ಹುಡುಗನಿಗೆ ಓದೋದಿಕ್ಕೇನು ಕಷ್ಟ?’ ಎನ್ನುವ ಇವತ್ತಿನ ತಂದೆ- ತಾಯಿಗಳ ಆತಂಕಕ್ಕೆ ಕೊನೆಯೇ ಇಲ್ಲ. ಸಂಪತ್ತನ್ನು ಗಳಿಸಬೇಕೇ ವಿನಾಃ ಗಳಿಸಿದ ಸಂಪತ್ತಿನ ನಡುವೆ ನಾವಿರಬೇಕೆಂದು ಬಯಸುವುದು ತಪ್ಪು ಎನ್ನುವ ಸತ್ಯವನ್ನು ಅವರೂ ಕಂಡುಕೊಂಡಿಲ್ಲ. ಕಂಫರ್ಟ್ ಝೋನ್‌ನಿಂದ ಆಚೆ ಹೆಜ್ಜೆ ಇಡುವುದೇ ಯಶಸ್ಸಿಗೆ ಇರುವ ಏಕೈಕ ದಾರಿ.
ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿ ಕುಳಿತಿದ್ದ, ಆ ಹುಡುಗನಲ್ಲಿ ಒಂದು ಟೆನನ್ ಇತ್ತು. “ಯಾಕಪ್ಪಾ, ಹೀಗೆ ಭಾರದ ಮುಖವನ್ನು ಹೊತ್ತು ಕುಳಿತಿದ್ದೀ?’, ಅಂತ ಭುಜದ ಮೇಲೆ ಕೈಯಿಟ್ಟು ಕೇಳಿದೆ. ಅವನು ತನ್ನ ಒಂದೊಂದೇ ಚಿಂತೆಯನ್ನು ತೋಡಿಕೊಂಡ. ಅವನಿಗೆ ಕಾಲೇಜಿಗೆ ಬರಲು ಬೈಕ್ ಇಲ್ಲವಂತೆ. ಸೈಕಲ್ ತುಳಿದೇ ಬರುತ್ತಿದ್ದ. ಬೇರೆಲ್ಲರಂತೆ ಚೆಂದದ ಡ್ರೆಸ್ ಮಾಡಿಕೊಳ್ಳಲು ಅವನ ಹತ್ತಿರ ಹಣವಿರಲಿಲ್ಲ. ಮಾಸಿದ ಬಟ್ಟೆ ಧರಿಸಿ ಬರುತ್ತಿದ್ದ. ಕೂಲಿಗೆ ಹೋಗುವ ಅಪ್ಪ- ಅಮ್ಮ ಅವನಿಗೊಂದು ಮೊಬೈಲ್ ಕೊಡಿಸಿರಲಿಲ್ಲ… ಇವೆಲ್ಲ “ಇಲ್ಲ’ಗಳ ಕಾರಣಕ್ಕೆ, ಅವನು ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ನಾನು ಅವನಿಗೆ ಕೇಳಿದೆ: “ಆಯ್ತಪ್ಪಾ… ನಿನಗೆ ಈ ಕ್ಷಣವೇ 1 ಕೋಟಿ ರೂ. ದುಡ್ಡು ಸಿಗುತ್ತೆ. ಕಾಲೇಜಿಗೆ ಬರಲು ಜಾಗ್ವಾರ್ ಕಾರು ಸಿಗುತ್ತೆ. ಆ್ಯಪಲ್ ಫೋನೊಂದು ಠಣಕ್ಕನೆ ಜೇಬೊಳಗೆ ಬಂದು ಬೀಳುತ್ತೆ. ಆಗ ನೀನು ಏನ್ಮಾಡ್ತೀಯ?’. ಆತ ಹೇಳಿದ, “ಇಷ್ಟೆಲ್ಲ ಬಂದಮೇಲೆ ನಾನೇಕೆ ಕಾಲೇಜಿಗೆ ಬರಬೇಕು? ಇಲ್ಲಿ ಬಂದು ಕಲಿತು, ನಾನೇಕೆ ಟೈಮ್ ವೇಸ್ಟ್ ಮಾಡಬೇಕು? ಎಲ್ಲಾದರೂ ಸಮುದ್ರ ತೀರದಲ್ಲಿ ವಾಸವಿದ್ದು, ಬದುಕನ್ನು ಬಿಂದಾಸ್ ಆಗಿ ಕಳೆಯುವೆ’ ಎಂದ, ಬಾಯ್ತುಂಬಾ ನಗುತ್ತಾ. “ಇದನ್ನೇ ಕಂಫರ್ಟ್ ಝೋನ್ ಅನ್ನೋದು. ನಿನಗೆ ಈಗಲೇ ಎಲ್ಲವೂ ಸಿಕ್ಕಿಬಿಟ್ಟರೆ, ನೀನು ಸೊನ್ನೆ ಆಗುತ್ತೀ’ ಅಂದೆ. ಅವನು ಮರು ಮಾತಾಡಲಿಲ್ಲ.
ಆತನಷ್ಟೇ ಅಲ್ಲ. ಪಾರಿವಾಳದ ಕಾಲುಬುಡದಲ್ಲಿ ವರ್ಷಕ್ಕೆ ಸಾಲುವಷ್ಟು ಧವಸಧಾನ್ಯಗಳನ್ನು ಸುರಿದುಬಿಟ್ಟರೆ, ಅದು ಕೆಲ ಕಾಲ ತನಗೆ ರೆಕ್ಕೆ ಇರುವುದನ್ನೇ ಮರೆಯುತ್ತದೆ. ಬದುಕಿನಲ್ಲಿ ಅವಶ್ಯಕತೆಗಳು ಜತೆಗಿರಬೇಕು. ಆದರೆ, ಅದು ಮಿತಿಮೀರಿ ವೈಭೋಗವಾದಾಗ, ಹೊಸತು ಸೃಷ್ಟಿಸಲು ದಾರಿಯೇ ಕಾಣುವುದಿಲ್ಲ. “ನಾನು ದುಡಿದು ಇದನ್ನೆಲ್ಲ ಗಳಿಸಿದೆ’ ಎಂದು ಲೋಕಕ್ಕೆ ಹೆಮ್ಮೆಯಿಂದ ತೋರಿಸಲು ಆಗ ನಮ್ಮ ಬಳಿ ಏನೂ ಇರುವುದಿಲ್ಲ.
ಹಾಗೆ ನೋಡಿದರೆ, ಬಳ್ಳಾರಿಯ ಎಟಿಎಂನ ಗೂಡಿನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿ, ಫಸ್ಟ್ ರ್‍ಯಾಂಕ್ ಬಂದು ಚಿನ್ನದ ಪದಕ ಬಾಚಿದವನ ಬಳಿ ಏನೂ ಇರಲಿಲ್ಲ. ಆತನೇನು ಲಕ್ಷುರಿ ಕಾರಿನಲ್ಲಿ ಕ್ಯಾಂಪಸ್ಸಿಗೆ ಬರುತ್ತಿರಲಿಲ್ಲ. ಆತನ ತಂದೆ- ತಾಯಿ ಸಿರಿವಂತರೂ ಆಗಿರಲಿಲ್ಲ. ಕಂಫರ್ಟ್ ಝೋನ್ ಒಳಗೆ ಇಲ್ಲದ ಕಾರಣಕ್ಕೇ ಆತನೊಳಗೆ ಛಲ ಮೂಡಿತು. ಅವನಂತೆ ಎಷ್ಟೋ ಹಳ್ಳಿ ಹುಡುಗರು, ಸಿಟಿಯ ಪುಟ್ಟ ಗೂಡಿನೊಳಗೆ ನೆಲೆನಿಂತು, ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಗಿಟ್ಟಿಸಿಕೊಂಡವರಿದ್ದಾರೆ. ಹಾಗೆ ದುಡಿದು, ಬದುಕನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅವರಿಗೆ ಅಪಾರ ಜೀವನಾನುಭವ ದಕ್ಕಿರುತ್ತದೆ. ಸಕಲ ವೈಭೋಗಗಳು ಕಾಲು ಬುಡದಲ್ಲಿದ್ದಾಗ, ಯಾವ ಅನುಭವಗಳೂ ಆಗುವುದಿಲ್ಲ. ನೀವೊಬ್ಬರು ಉದ್ಯೋಗಿಯಾಗಿ, “ಬಹಳ ಆರಾಮಾಗಿದ್ದೇನೆ. ನಂಗೇನೂ ತೊಂದ್ರೆ ಇಲ್ಲ’ ಎಂದು ಅಂದುಕೊಂಡಿದ್ದರೆ, ಅದು ನಿಮ್ಮ ಮೂರ್ಖತನ. ನೀವು ಬೆಳೆಯುತ್ತಿಲ್ಲ, ಹೊಸತನಕ್ಕೆ ಜಿಗಿಯುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ ಎನ್ನುವ ದೌರ್ಬಲ್ಯಗಳೊಂದಿಗೆ ಜೀವಿಸುತ್ತಿದ್ದೀರಿ ಎಂದರ್ಥ.
ಹುಟ್ಟಿನಿಂದ ಯಾರೂ ಸಿರಿವಂತರಾಗಿರುವುದಿಲ್ಲ. ನಂತರ ಭೂಮಿಗೆ ಬಂದು, ಬೆವರು ಸುರಿಸಿಯೇ ಎಲ್ಲವನ್ನೂ ಕಂಡುಕೊಳ್ಳಬೇಕು. ನಮ್ಮ ಸುತ್ತ ಸೌಲಭ್ಯಗಳು ಜಾಸ್ತಿ ಇದ್ದಷ್ಟು, ನಾವು ಆರಾಮವಾಗಿರಲು ಬಯಸುತ್ತೇವೆ. ಜಡತ್ವ, ಸೋಮಾರಿತನ ಎನ್ನುವುದು ಕಂಫರ್ಟ್ ಝೋನ್‌ನ ಮೊದಲ ಗಿಫ್ಟ್. ಆ ಸುಖವೇ ಎಲ್ಲದಕ್ಕೂ ಅಡ್ಡಿ. ಕಂಫರ್ಟ್ ಝೋನ್‌ನಿಂದ ಆಚೆ ಹೆಜ್ಜೆ ಇಡುವುದೇ ಯಶಸ್ಸಿಗೆ ಇರುವ ಏಕೈಕ ದಾರಿ.
– ಪಾಟೀಲ ಬಸನಗೌಡ, ಧಾರವಾಡ