ಪುತ್ತೂರು: ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಬೆಂಬಲಿಸಿ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಪುತ್ತೂರು ಬಿಜೆಪಿ ಕಚೇರಿ ಎದುರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ವಿಜಯೋತ್ಸವ ನಡೆಸಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಒಂದೇ ದೇಶ, ಒಂದೇ ಧ್ವಜ, ಒಂದೇ ವ್ಯವಸ್ಥೆ ಎಂಬ ಘೋಷವಾಕ್ಯದೊಂದಿಗೆ ಹೋರಾಡಿದ ಭಾರತೀಯ ಜನಸಂಘದ ಸ್ಥಾಪಕ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ನಿಜವಾದ ಶ್ರದ್ಧಾಂಜಲಿ ಇಂದು ಸಂದಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೂ ನೆಮ್ಮದಿ ಲಭಿಸಿದೆ ಎಂದು ಹೇಳಿದರು.
ದೇಶದ 134 ಕೋಟಿ ಜನರಿಗೂ ಒಂದೇ ಕಾನೂನು ತರುವ ಮೂಲಕ ಹೊಸ ಅಧ್ಯಾಯ ಬಂದಿದೆ. ಅಲ್ಪಸಂಖ್ಯಾಕರನ್ನು ತುಷ್ಟೀಕರಣ ಮಾಡುತ್ತಾ ಮುಸ್ಲಿಮರಿಗೆ ಕಾಂಗ್ರೆಸ್‌ನಿಂದ ಮಾತ್ರ ಸೌಲಭ್ಯ ಎಂದು ಬಿಂಬಿಸುವ ನಾಟಕವನ್ನು ದೇಶದ ಪ್ರಧಾನಿ ಸುಳ್ಳಾಗಿಸಿದ್ದಾರೆ. ಅಖಂಡತೆ, ಏಕತೆಗಾಗಿ ಪ್ರಧಾನಿಯವರು ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಉತ್ತಮ ಸಂದೇಶ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಂಗಾರಡ್ಕ ವಿಶ್ವೇಶ್ವರ ಭಟ್ ಮಾತನಾಡಿ, ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನರೇಂದ್ರ ಮೋದಿ ಹಲವು ಬಾರಿ ಪ್ರಯತ್ನಿಸಿದ್ದಾರೆ. ಈಗ ಅನಿವಾರ್ಯವಾಗಿ ಈ ಹಾದಿ ಹಿಡಿಯಬೇಕಾಯಿತು.