ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿ ವಿಷಯದಲ್ಲಿ ಪಾಕ್ ಪರ ಹೇಳಿಕೆ ನೀಡಿ ವ್ಯಾಪಕ ಟೀಕೆ, ಖಂಡನೆ, ವಿವಾದಕ್ಕೆ ಗುರಿಯಾಗುತ್ತಿದ್ದಂತೆಯೇ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ತನ್ನ ಜನಪ್ರಿಯ ಕಪಿಲ್ ಕಾಮಿಡಿ ಶೋದಿಂದ ಕಿತ್ತು ಹಾಕಿರುವುದಾಗಿ ಹೇಳಿದ್ದ ಕಪಿಲ್ ಶರ್ಮಾ ಈಗ ಉಲ್ಟಾ ಹೊಡೆದಿದ್ದಾರೆ.
”ಸಿಧು ಅವರನ್ನು ನನ್ನ ಶೋ ದಿಂದ ತೆಗೆದು ಹಾಕಿದ ಮಾತ್ರಕ್ಕೆ ಮೂಲ ಸಮಸ್ಯೆ ಪರಿಹಾರವಾಗುವುದಿಲ್ಲ; ನಾವೆಲ್ಲ ಒಗ್ಗೂಡಿ ಆ ಸಮಸ್ಯೆಯನ್ನು ಪರಿಹರಿಸಬೇಕಿದೆ; ಆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದೇ ಮುಖ್ಯ” ಎಂದು ಹೇಳುವ ಮೂಲಕ ಕಪಿಲ್ ಶರ್ಮಾ ಈಗ ಸಿಧು ಬೆಂಬಲಕ್ಕೆ ನಿಂತಿದ್ದಾರೆ.
ಪುಲ್ವಾಮಾ ಉಗ್ರ ದಾಳಿ ಒಬ್ಬ ಉಗ್ರನ ಕೃತ್ಯವಾಗಿದ್ದು ಅದಕ್ಕಾಗಿ ಇಡಿಯ ಪಾಕಿಸ್ಥಾನವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಸಿಧು ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿಶೇಷವೆಂದರೆ ಪಾಕಿಸ್ಥಾನದಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಧಾನಿ ಅಗುವುದರೊಂದಿಗೆ ಸಿಧು, ಪಾಕಿಸ್ಥಾನಕ್ಕೆ ನಿಕಟರಾಗಿದ್ದಾರೆ !
ಕಪಿಲ್ ಶರ್ಮಾ ಈ ರೀತಿ ಉಲ್ಟಾ ಹೊಡೆದಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ, ಖಂಡನೆ, ಆಕ್ರೋಶ ವ್ಯಕ್ತವಾಗಿದೆ. ಕಪಿಲ್ ಶರ್ಮಾ ಅವರ ಕಾಮಿಡಿ ಶೋ ಮಾತ್ರವಲ್ಲದೆ ಅವರ ಶೋ ಪ್ರಸಾರಿಸುವ ಟಿವಿ ಚ್ಯಾನಲನ್ನೇ ನಿಷೇಧಿಸಬೇಕು ಎಂಬ ಆಂದೋಲನ ಈಗ ಟ್ವಿಟರ್ ನಲ್ಲಿ ಆರಂಭವಾಗಿದೆ.
ಆದರೆ ಇದೇ ವೇಳೆ ಪಾಕ್ ಕಲಾವಿದರನ್ನು ನಿಷೇಧಿಸುವ ಸರಕಾರದ ನಿರ್ಧಾರವನ್ನು ಕಪಿಲ್ ಶರ್ಮಾ ಬೆಂಬಲಿಸಿದ್ದಾರೆ.
ಪುಲ್ವಾಮಾ ಉಗ್ರ ದಾಳಿಯನ್ನು ಅನುಸರಿಸಿ ಆಲ್ ಇಂಡಿಯಾ ಸಿನೆ ವರ್ಕರ್ಸ್ ಅಸೋಸಿಯೇಶನ್ (ಎಐಸಿಡಬ್ಲ್ಯುಎ), ಹಿಂದಿ ಚಿತ್ರಗಳಲ್ಲಿ ಪಾಕ್ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಪ್ರಕಟಿಸಿದೆ.