Advertisement

ಸೀಟು ಕೈತಪ್ಪುವ ಆತಂಕ: ಸಿಇಟಿಗೆ ಮುನ್ನವೇ ಕಾಮೆಡ್‌-ಕೆ ಸೀಟು ಹಂಚಿಕೆ: ಆಕಾಂಕ್ಷಿಗಳಲ್ಲಿ ಆತಂಕ

12:29 AM Aug 08, 2022 | Team Udayavani |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕಿಂತ ಮೊದಲೇ ಕಾಮೆಡ್‌-ಕೆ ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದು, ಇದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಸಿಇಟಿ ಸೀಟು ಕೈತಪ್ಪುವ ಆತಂಕ ಆರಂಭ ವಾಗಿದೆ. ಖಾಸಗಿ ಲಾಬಿಗೆ ಮಣಿದು ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಗಂಭೀರ ಆರೋಪವೂಕೇಳಿ ಬಂದಿದೆ.

Advertisement

ಎಂಜಿನಿಯರಿಂಗ್‌ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ಕಾಮೆಡ್‌-ಕೆ ಆ. 26ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಲಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇನ್ನೂ ಪ್ರಕ್ರಿಯೆ ಆರಂಭಿಸದಿರುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸೀಟು ಆಯ್ಕೆ ವೇಳೆ ಕಾಲೇಜಿನಲ್ಲಿರುವ ಉತ್ತಮ ಮೂಲಸೌಕರ್ಯ, ಬೋಧನೆ, ಕಾಲೇಜಿನ ವಾತಾವರಣ, ಕ್ಯಾಂಪಸ್‌ ಮತ್ತು ಪ್ಲೇಸ್‌ಮೆಂಟ್‌ಗಳನ್ನು ಮಾನದಂಡವಾಗಿ ಪರಿಗಣಿಸಿ ಆಯ್ಕೆ ಮಾಡುತ್ತಾರೆ. ಇದರ ಜತೆಗೆ ಶುಲ್ಕವನ್ನೂ ಪರಿಗಣಿಸುತ್ತಾರೆ.

ಸಿಇಟಿಯಲ್ಲಿ ಕಾಲೇಜು ಶುಲ್ಕ ಕಾಮೆಡ್‌-ಕೆಗಿಂತ ಕಡಿಮೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸೀಟು ಆಯ್ಕೆಯಲ್ಲಿ ಸಿಇಟಿ ಕೋಟಾಕ್ಕೆ ಆದ್ಯತೆ ನೀಡುತ್ತಾರೆ, ಕಾಮೆಡ್‌-ಕೆ ಅನಂತರದ ಆಯ್ಕೆಯಾಗಿರುತ್ತದೆ. ಈ ಕಾರಣದಿಂದ ವಿದ್ಯಾರ್ಥಿಗಳು ಸಿಇಟಿ ಮತ್ತು ಕಾಮೆಡ್‌-ಕೆ ಎರಡೂ ಪರೀಕ್ಷೆಗಳನ್ನು ಬರೆದು, ಸಿಇಟಿಯಲ್ಲಿ ಸೀಟು ಸಿಗದಿದ್ದರೆ ಕಾಮೆಡ್‌-ಕೆ ಸೀಟು ಆಯ್ಕೆ ಮಾಡಿಕೊಳ್ಳುತ್ತಾರೆ.

ಕಾಮೆಡ್‌-ಕೆ ವೇಳಾಪಟ್ಟಿ ಪ್ರಕಟ
ಸರಕಾರ ಕೂಡ ಪ್ರತೀ ವರ್ಷ ಆಕಾಂಕ್ಷಿಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಸಿಇಟಿ ದಾಖಲಾತಿ ಪರಿಶೀಲನೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮೊದಲು ನಡೆಸುತ್ತದೆ. ಅನಂತರ ಕಾಮೆಡ್‌-ಕೆ ಈ ಪ್ರಕ್ರಿಯೆ ನಡೆಸುತ್ತದೆ. ಆದರೆ ಈ ಬಾರಿ ಈಗಾಗಲೇ ಕಾಮೆಡ್‌-ಕೆ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ. 18ರಿಂದ ದಾಖಲಾತಿ ಪರಿಶೀಲನೆ ನಡೆಸಲಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ. 26ರಿಂದ ಆರಂಭವಾಗಲಿದೆ. ಆ. 30ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟವಾಗಲಿದೆ. ಅಂದೇ ಮಧ್ಯಾಹ್ನ 1 ಗಂಟೆಯೊಳಗೆ ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳದ ಅಭ್ಯರ್ಥಿಗಳು ಸೀಟುಗಳನ್ನು ವಾಪಸ್‌ ಮಾಡಬೇಕು ಎಂದು ಕಾಮೆಡ್‌-ಕೆ ತಿಳಿಸಿದೆ.

Advertisement

ಪರಿಸ್ಥಿತಿ ಹೀಗಿದ್ದರೂ ಸೆಪ್ಟಂಬರ್‌ನಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಿದ್ದೇವೆ ಎಂದು ಕೆಇಎ ತಿಳಿಸಿದೆ. ಜತೆಗೆ ಆ. 5ರಿಂದ ಆರಂಭವಾಗಬೇಕಿದ್ದ ದಾಖಲಾತಿ ಪರಿಶೀಲನೆಯನ್ನು ಕೂಡ ಮುಂದೂಡಿದೆ. ಅಷ್ಟರಲ್ಲಿ ಕಾಮೆಡ್‌- ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ.

ಇದರಿಂದ ಸಿಇಟಿ ಸೀಟುಗಳನ್ನೇ ನಂಬಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಮೆಡ್‌-ಕೆ ಸೀಟು ಆಯ್ಕೆ ಮಾಡಿಕೊಳ್ಳಬೇಕಾದ ಸನ್ನಿವೇಶವನ್ನು ರಾಜ್ಯ ಸರಕಾರ ನಿರ್ಮಿಸಿದೆ.

ಖಾಸಗಿ ಲಾಬಿ:
ಹೆತ್ತವರ ಆರೋಪ
ಈ ಬಾರಿ ಖಾಸಗಿ ಕಾಲೇಜುಗಳ ಸೀಟುಗಳು ಭರ್ತಿಯಾದ ಅನಂತರ ಸರಕಾರ ಪ್ರವೇಶ ಪ್ರಕ್ರಿಯೆ ಆರಂಭಿಸಲಿದೆ. ಸರಕಾರ ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿದ್ದು, ಹೀಗಾಗಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೆತ್ತವರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವ್ಯತ್ಯಾಸವೇನು?
2022-23ನೇ ಸಾಲಿಗೆ ಸಿಇಟಿ ಕೋಟಾ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಪ್ರವೇಶ ಶುಲ್ಕ 37 ಸಾವಿರ ರೂ. ನಿಗದಿ ಮಾಡಲಾಗಿದೆ. ಅದೇ ಸೀಟನ್ನು ಕಾಮೆಡ್‌-ಕೆ ಮೂಲಕ ಪಡೆದರೆ 1.58 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಸರಕಾರದ ವಿಳಂಬ ನೀತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಕಮರುವಂತಾ ಗಿದೆ ಎಂದು ಸೀಟು ಆಕಾಂಕ್ಷಿ ವಿದ್ಯಾರ್ಥಿನಿ ಸುಧಾ ಕಳವಳ ವ್ಯಕ್ತಪಡಿಸಿದ್ದಾರೆ.

-ಎನ್‌.ಎಲ್‌. ಶಿವಮಾದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next