Advertisement

ರಂಗಮಂದಿರ ರಿಹರ್ಸಲ್‌ನಿಂದ ರಂಗಕ್ಕೆ  ಬರಲಿ

02:48 PM Jul 08, 2018 | Team Udayavani |

ಮಂಗಳೂರಿನಲ್ಲಿ ರಂಗಮಂದಿರ ನಿರ್ಮಾಣದ ಕನಸು ನನೆಗುದಿಯಲ್ಲಿದೆ. ಯೋಜನೆ ಮಂಜೂರು ಆಗಿ ಹಲವು ವರ್ಷಗಳು ಸಂದಿವೆ. ಭೂಮಿಯನ್ನು ಗುರುತಿಸಲಾಗಿದೆ. ಹಲವು ಬಾರಿ ಶಿಲಾನ್ಯಾಸಗಳು ನೆರವೇರಿವೆ. ಆದರೆ ರಂಗಮಂದಿರ ಮಾತ್ರ ನಿರ್ಮಾಣ ಭಾಗ್ಯ ಕಂಡಿಲ್ಲ. ಈಗ ಹೊಸ ಸರಕಾರ ಬಂದಿದೆ. ಈ ಕಾಲಘಟ್ಟದಲ್ಲಾದರೂ ರಂಗಮಂದಿರ ನಿರ್ಮಾಣ ಸೆಟ್‌ಗೇರುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶನಗೊಳ್ಳಬೇಕಾಗಿದೆ. ಈ ಮೂಲಕ ಯೋಜನೆಯನ್ನು ಶಾಪವಿಮೋಚನೆಗೊಳಿಸಬೇಕಾಗಿದೆ.

Advertisement

ಸ್ಮಾರ್ಟ್‌ ನಗರ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಮಂಗಳೂರು ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪೂರಕವಾಗಿ ಒಂದಷ್ಟು ಮೂಲಸೌಕರ್ಯಗಳು ಅಭಿವೃದ್ಧಿಗೊಳ್ಳಬೇಕಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಬಹುತೇಕ ರಂಗ ಚಟುವಟಿಕೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುರಭವನವನ್ನೇ ಆಶ್ರಯಿಸಬೇಕಾಗಿದೆ. ಅದು ಬಿಟ್ಟರೆ ಡಾನ್‌ಬಾಸ್ಕೊ ಹಾಲ್‌ನಲ್ಲಿ ನಾಟಕ, ನೃತ್ಯ
ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿದೆ.

ಮಂಗಳೂರು ಪುರಭವನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿಲ್ಲ. ಸಭೆ, ಸಮಾರಂಭ, ರಾಜಕೀಯ ಸಮಾವೇಶಗಳಿಗೂ ಪ್ರಧಾನ ಕೇಂದ್ರವಾಗಿದೆ. ಈಗ ನವೀಕರಣಗೊಂಡು ಆಧುನಿಕತೆಯ ಸ್ಪರ್ಶ ಪಡೆದಿದೆ.
ಎಲ್ಲ ಕಾರ್ಯಕ್ರಮಗಳಿಗೆ ಹೊಂದಿಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮಿತಿಯೊಳಗೆ ನಾಟಕ ಸಹಿತ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ರಂಗಚಟುವಟಿಕೆಗಳಿಗೆ ರಂಗಮಂದಿರದ ಕೊರತೆ ಬಗ್ಗೆ ಇತ್ತೀಚೆಗೆ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹಿರಿಯ ಸಾಹಿತಿಯೋರ್ವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಹಲವು ವರುಷಗಳ ಕನಸು
ಮಂಗಳೂರಿನಲ್ಲಿ ಸುಮಾರು 25 ವರ್ಷಗಳ ಹಿಂದೆಯೇ ರಂಗಮಂದಿರ ನಿರ್ಮಾಣ ಚಿಂತನೆ ಆರಂಭವಾಗಿ ನೆಹರೂ ಮೈದಾನದಿಂದ ಆರಂಭವಾಗಿ ಹಲವು ಕಡೆ ನಿವೇಶನಗಳನ್ನು ಗುರುತಿಸಿದ್ದರೂ ಇದಕ್ಕೊಂದು ಸ್ಪಷ್ಟ ರೂಪುರೇಷೆ ದೊರಕಿದ್ದು 2001ರಲ್ಲಿ. ರಂಗಮಂದಿರದ ನೀಲಿ ನಕಾಶೆ ತಯಾರಿಸಿ ನಗರ ಕದ್ರಿ ಹಿಲ್ಸ್‌ನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು. ಶಿಲಾನ್ಯಾಸ ಕೂಡ ನೆರವೇರಿತ್ತು. ಆದರೆ ತೋಟಗಾರಿಕೆ ಇಲಾಖೆಯ ಆಕ್ಷೇಪವಿದ್ದ ಕಾರಣ ಇದನ್ನು ಕೈಬಿಡಲಾಯಿತು.

ಬಳಿಕ ನಿರಂತರವಾಗಿ ಈ ಬಗ್ಗೆ ಪ್ರಯತ್ನಗಳು ನಡೆದರೂ, ಯಶಸ್ವಿಯಾಗಿಲ್ಲ. ಪರಿಣಾಮವಾಗಿ ಆರಂಭದಲ್ಲಿ 4ಕೋಟಿಯಷ್ಟು ಇದ್ದ ಯೋಜನೆ ಈಗ 24 ಕೋಟಿ ರೂ. ಗಳಿಗೆ ಏರಿಕೆಯಾಯಿತು. ಅಂತಿಮವಾಗಿ ಬೊಂದೇಲ್‌ನ ಮಹಿಳಾ ಪಾಲಿಟೆಕ್ನಿಕ್‌ ಸಮೀಪ ಲಭ್ಯವಿರುವ 7 ಎಕ್ರೆ ಸರಕಾರಿ ಭೂಮಿಯ ಸುಮಾರು 3.35 ಎಕ್ರೆ ಸರಕಾರಿ ಸ್ಥಳವನ್ನು ಇದಕ್ಕೆ ಮೀಸಲಿರಿಸಲಾಗಿದೆ. ಇದು ಆಗಿ 3
ವರ್ಷಗಳಾಗುತ್ತಾ ಬಂದರೂ ಅನುದಾನದ ಹೊಂದಾಣಿಕೆ ಸಮಸ್ಯೆಯಿಂದಾಗಿ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಸಾಧ್ಯವಾಗಿಲ್ಲ.

Advertisement

ಪ್ರಸ್ತಾವನೆ ಸಲ್ಲಿಸಲಾಗಿತ್ತು
24 ಕೋಟಿ ರೂ. ನಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯು ಠಾಗೋರ್‌ ಕಲ್ಚರಲ್‌ ಕಾಂಪ್ಲೆಕ್ಸ್‌ ಸ್ಕೀಂನಡಿ ರಂಗ ಮಂದಿರಕ್ಕೆ ಶೇ. 60ರಷ್ಟು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಂತೆ 14.4 ಕೋ.ರೂ. ಅನುದಾನ ನಿರೀಕ್ಷಿಸಿ ಉಳಿದ ಮೊತ್ತ 9.6 ಕೋ. ರೂ. ರಾಜ್ಯ ಸರಕಾರದ ಪಾಲು ಎಂದು ಅಂದಾಜಿಸಲಾಗಿತ್ತು. ಆದರೆ ಠಾಗೋರ್‌ ಕಲ್ಚರಲ್‌ ಕಾಂಪ್ಲೆಕ್ಸ್‌ ಸ್ಕೀಂನಡಿ ಅನುದಾನ ದೊರೆಯದಿದ್ದಾಗ ಯೋಜನೆಯನ್ನು ಪರಿಷ್ಕರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನಿರ್ಮಿಸಲು ಉದ್ದೇಶಿಸಲಾಯಿತು.

ರಂಗ ಮಂದಿರದ ಮೂಲ ವಿನ್ಯಾಸದಂತೆ ಮುಖ್ಯ ಸಭಾಂಗಣ (1200 ಪ್ಲಸ್‌ ಸಾಮರ್ಥ್ಯ), ಸಣ್ಣ ಸಭಾಂಗಣ (500 ಮಂದಿ ಸಾಮರ್ಥ್ಯ)ಗಳಿರುತ್ತವೆ. ಜತೆಗೆ ನಾಟಕ ಇತ್ಯಾದಿಗಳನ್ನು ಅಭ್ಯಾಸ ಮಾಡುವ ಕೊಠಡಿ, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಕಚೇರಿಗಳು, ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳು, ಕ್ಯಾಂಟೀನ್‌ಗಳನ್ನು ವಿನ್ಯಾಸ ಒಳಗೊಂಡಿತ್ತು. ಲೈಬ್ರೆರಿ, ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುವ ರಂಗಮಂದಿರದಲ್ಲಿ ಆಕರ್ಷಕ ರೀತಿಯ ಒಳವಿನ್ಯಾಸ ರೂಪಿಸಲು
ನಿರ್ಧರಿಸಲಾಗಿದೆ. 

ಮಂಗಳೂರಿನಲ್ಲಿ ರಂಗಮಂದಿರ ನಿರ್ಮಾಣ ಯೋಜನೆ ಸಿದ್ಧವಾದ ಬಳಿಕ ಹಲವು ಸರಕಾರಗಳು ಬಂದು ಹೋಗಿವೆ. ಹಲವು ಮಂದಿ ಜಿಲ್ಲಾ ಉಸ್ತುವಾರಿ ಸಚಿವರುಗಳಾಗಿದ್ದಾರೆ. ಇದಕ್ಕೆ ಹಲವು ಬಾರಿ ಶಿಲಾನ್ಯಾಸಗಳು ಆಗಿ ಇನ್ನೇನು ರಂಗಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎನ್ನುವ ಮಟ್ಟಕ್ಕೆ ಬಂದಿತ್ತು. ಸ್ವತಃ ಮುಖ್ಯಮಂತ್ರಿಗಳೇ ಶಿಲಾನ್ಯಾಸ ಮಾಡಿದರು. ಆದರೂ ರಂಗಮಂದಿರ ಇನ್ನೂ ಕನಸಾಗಿಯೇ ಉಳಿದಿದೆ. 

ಶೀಘ್ರದಲ್ಲೇ ಸಭೆ
ಮಂಗಳೂರಿನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಯೋಜನೆ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯಲಾಗುವುದು. 
– ಯು.ಟಿ. ಖಾದರ್‌,
ನಗರಾಭಿವೃದ್ಧಿ ಹಾಗೂ ವಸತಿ ಖಾತೆ
ಸಚಿವರು

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next