Advertisement

ಭತ್ತದನಾಡಿಗೆ ಬಂದು ಜಾನುವಾರು..!

04:06 PM Dec 15, 2018 | Team Udayavani |

ಸಿರುಗುಪ್ಪ: ತಾಲೂಕಿಗೆ ನೀರು, ಮೇವು ಅರಸಿ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ವ್ಯಾಪ್ತಿಯ ಮಲ್ಲಾಪುರ, ಬಂಕಾಪುರ ಗ್ರಾಮಗಳ ಸಾವಿರಾರು ಜಾನುವಾರುಗಳು ವಲಸೆ ಬಂದಿದ್ದು, ಭತ್ತ ಕಟಾವು ಮಾಡಿದ ಗದ್ದೆಗಳಲ್ಲಿ ಬೀಡು ಬಿಟ್ಟಿವೆ. ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳಲ್ಲಿ ಸರಿಯಾಗಿ ಮಳೆಯಾಗದೆ ಬರಪರಿಸ್ಥಿತಿ ಆವರಿಸಿರುವುದರಿಂದ ಜಾನುವಾರು ಹೊಂದಿರುವ ಮಾಲೀಕರು ಜಾನುವಾರುಗಳೊಂದಿಗೆ ತಾಲೂಕಿಗೆ ವಲಸೆ ಬಂದಿದ್ದಾರೆ.

Advertisement

ಸದ್ಯ ತಾಲೂಕಿನ ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಕಾಲುವೆ ವ್ಯಾಪ್ತಿಯಲ್ಲಿ ಭತ್ತ ಕಟಾವು ಮಾಡಲಾಗಿದ್ದು, ಗದ್ದೆಯಲ್ಲಿ ಹಸಿ ಮೇವು, ಒಣ ಮೇವು ಸಿಗುತ್ತಿದೆ. ತಾಲೂಕಿನ ಸಿರಿಗೇರಿ ಕ್ರಾಸ್‌ ಸುತ್ತಮುತ್ತಲಿನ ಹೊಲ ಗದ್ದೆಗಳಲ್ಲಿ ವಲಸೆ ಬಂದಿರುವ ಜಾನುವಾರುಗಳು ಬೀಡು ಬಿಟ್ಟಿದ್ದು, ಕುರಿ ತರುಬುವಂತೆಯೇ ಗದ್ದೆಗಳಲ್ಲಿ ಜಾನುವಾರುಗಳನ್ನು ತರುಬಿ ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡುತ್ತಿರುವ ಜಾನುವಾರು ಮಾಲೀಕರು ಹೇಗಾದರೂ ಮಾಡಿ ತಮ್ಮ ದನಕರುಗಳನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ನೂರಾರು ದೇಸಿ ಹಸುಗಳನ್ನು ಸಾಕುತ್ತಿರುವ ಜಾನುವಾರುಗಳ ಮಾಲೀಕರು ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಭೀಕರ ಬರಗಾಲ ಉಂಟಾಗಿರುವ ಕಾರಣ ಜಾನುವಾರುಗಳಿಗೆ ಮೇವು, ನೀರಿಗೆ ತೊಂದರೆಯಾಗಿದೆ. ಇದರಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಆಕಳುಗಳನ್ನು ಸಾಕಿರುವ ಮಾಲೀಕರು ಈ ಭಾಗಕ್ಕೆ ವಲಸೆ ಬಂದಿದ್ದಾರೆ.

ಭೀಕರ ಬರಗಾಲದಿಂದ ಮೇವು, ನೀರು ಸಿಗದೆ ಕಂಗೆಟ್ಟು ಹೋಗಿದ್ದ ಜಾನುವಾರುಗಳಿಗೆ ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹಸಿ ಮೇವು, ಒಣ ಮೇವು ಸಿಗುತ್ತಿದ್ದು, ಇದನ್ನು ತಿಂದು ಜಾನುವಾರುಗಳು ತಮ್ಮ ಹಸಿವು ನೀಗಿಸಿಕೊಳ್ಳುತ್ತಿವೆ. ಕಾಲುವೆಯಲ್ಲಿ ಹರಿಯುವ ನೀರನ್ನು ಕುಡಿದು ಹೊಟ್ಟೆ ತಂಪು ಮಾಡಿಕೊಳ್ಳುತ್ತಿವೆ. 

ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳಿಗೆ ಮೇವು, ನೀರು ಸಿಗುವ ಸ್ಥಳಗಳನ್ನು ಹುಡುಕಿ ಅಲ್ಲೇ ತಮ್ಮ ವಾಸ್ತವ್ಯ ಹೂಡುತ್ತಿದ್ದಾರೆ. ಜಾನುವಾರು ಮೇಯಿಸಲು ಬಂದವರಿಗೆ ಊಟ, ಒಂದಿಷ್ಟು ಖರ್ಚಿಗೆ ಹಣ ಮಾತ್ರ ನೀಡಬೇಕಾಗಿದೆ.

Advertisement

ಜಾನುವಾರುಗಳ ಸಗಣಿ, ಗಂಜಲಿನಿಂದ ಭೂಮಿಯ ಫಲವತ್ತತೆ ಹೆಚ್ಚಾಗುವ ಕಾರಣ ಕೆಲವು ರೈತರು ತಮ್ಮ ಹೊಲಗಳಲ್ಲಿ ಜಾನುವಾರುಗಳನ್ನು ತರುಬುವಂತೆ ದುಂಬಾಲು ಬಿದ್ದಿದ್ದಾರೆ. ಈ ಬಾರಿ ನಮ್ಮ ಭಾಗದಲ್ಲಿ ಮಳೆ ಬೆಳೆ ಇಲ್ಲದೆ ಭೀಕರ ಬರ ಬಂದಿದೆ. ನಮ್ಮ ಊರಿನ ಸುತ್ತಮುತ್ತ ಜಾನುವಾರುಗಳಿಗೆ ಮೇವು, ನೀರು ಸಿಗದ ಪರಿಸ್ಥಿತಿ ಉಂಟಾಗಿದೆ. ಈ ಭಾಗದ ಗದ್ದೆಗಳಲ್ಲಿ ಒಣ ಮತ್ತು ಹಸಿ ಮೇವಿನೊಂದಿಗೆ ಕುಡಿಯಲು ನೀರು ದೊರೆಯುತ್ತಿದೆ. ಆದ್ದರಿಂದ ಈ ಕಡೆ ನಮ್ಮ ಜಾನುವಾರು ಹೊಡೆದುಕೊಂಡು ಬಂದಿದ್ದೇವೆ. 
 ಯಮುನೂರಪ್ಪ, ಮಲ್ಲಾಪುರ ಗ್ರಾಮ, ಕೊಪ್ಪಳ ಜಿಲ್ಲೆ.

ಹೇಗಾದರೂ ಮಾಡಿ ನಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಊರೂರು ತಿರುಗುತ್ತಿದ್ದೇವೆ. ನಮ್ಮ ಜಾನುವಾರುಗಳ ಬಗ್ಗೆ ಜನ ಅನುಕಂಪ ತೋರಿಸುತ್ತಿದ್ದಾರೆ. ದನ ತರುಬಾಕ ನಾವು ಹೆಚ್ಚಿಗೆ ಹಣ ಕೇಳುವುದಿಲ್ಲ. ದನಕ್ಕೆ ಒಂದಷ್ಟು ಮೇವು, ನಮ್ಮ ಊಟ, ಬೇರೆ ಊರಿಗೆ ಹೋಗಲು ಒಂದಿಷ್ಟು ರೊಕ್ಕ ಕೊಡುತ್ತಿದ್ದಾರೆ.
 ಯಂಕಪ್ಪ, ಬಂಕಾಪುರ, ಕೊಪ್ಪಳ ಜಿಲ್ಲೆ. 

Advertisement

Udayavani is now on Telegram. Click here to join our channel and stay updated with the latest news.

Next