ಉಡುಪಿ: ಪಠ್ಯಪುಸ್ತಕ ವಿಷಯವಾಗಿ ಊಹಾಪೋಹಗಳನ್ನು ಸೃಷ್ಟಿಸುವವರು “ವಿಚಾರ ನಪುಂಸಕರು’. ಸಾಹಿತಿಗಳಾಗಿದ್ದು ಬರೆಯುವುದನ್ನು ಬಿಟ್ಟು ಮೈಕ್ ಮುಂದೆ ಮಾತಾಡುವ ಮೈಕಾಸುರರಾಗಿದ್ದಾರೆ. ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲೆಸೆದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಡಿ.ಕೆ.ಶಿ., ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ, ದೇವನೂರ ಮಹದೇವ ಮೊದಲಾದವರು ಸುಳ್ಳು ಹಬ್ಬಿಸುತ್ತಿದ್ದಾರೆ.
ಬಹಿರಂಗ ಚರ್ಚೆಗೆ ಇವರ್ಯಾರು ಸಿದ್ಧರಿಲ್ಲ. ಭಗತ್ಸಿಂಗ್, ನಾರಾಯಣ ಗುರು ಅವರ ಪಠ್ಯಗಳನ್ನು ಕೈಬಿಟ್ಟಿಲ್ಲ. ದೇವನೂರು ಮಹದೇವ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಕಾಂಗ್ರೆಸ್ ಪರ ಪ್ರಚಾರ ಬಿಟ್ಟು ಪೆನ್ನು ಹಿಡಿದು ಒಳ್ಳೆಯ ಕೃತಿ ಬರೆಯುವಂತಾಗಲಿ ಎಂದು ಉಡುಪಿಯಲ್ಲಿ ಶನಿವಾರ ಸುದ್ದಿಗಾರರಿಗೆ ಅವರು ತಿಳಿಸಿದರು.
ಸೋನಿಯಾ ಮೂಲ ತಿಳಿಸಲಿ
ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ಸೋನಿಯಾ ಗಾಂಧಿಯವರನ್ನು ಏಕವಚನದಲ್ಲಿ ಬೈದಿದ್ದರು. ಈಗ ಅವರಿಗೆ ಸೋನಿಯಾ ಮಹಾ ನಾಯಕಿ. ಸಿದ್ದರಾಮಯ್ಯ ಆರೆಸ್ಸೆಸ್ ಮೂಲ ಕೆದಕುವ ಮೊದಲು ಸೋನಿಯಾ ಮೂಲ ಯಾವುದು ಎಂದು ಜನತೆಗೆ ತಿಳಿಸಲಿ ಎಂದು ಸವಾಲು ಎಸೆದರು.
Related Articles
ವೈಯಕ್ತಿಕ ಟೀಕೆ ಸರಿಯಲ್ಲ
ರೋಹಿತ್ ಚಕ್ರತೀರ್ಥರು ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಓದಿದ್ದೇನೆ. ಈ ಬಗ್ಗೆ ಸಿದ್ದರಾಮಯ್ಯ ಸರಕಾರ ಇದ್ದಾಗಲೇ ಪೊಲೀಸ್ ಕೇಸ್ ದಾಖಲಾಗಿ, ಬಿ-ರಿಪೋರ್ಟ್ ಕೂಡ ಹಾಕಲಾಗಿದೆ. ವೈಯಕ್ತಿಕ ವಿಷಯವನ್ನು ಕೆದಕಿ ಯಾರನ್ನು ತೇಜೋವಧೆ ಮಾಡುವುದು ಸರಿಯಲ್ಲ. ಇದೊಂದು ಅನಗತ್ಯ ಟೀಕೆ ಎಂದರು.
ಆದೇಶ ಪಾಲಿಸಬೇಕು
ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಕಡ್ಡಾಯವಾಗಿರುವ ಅದನ್ನು ಧಿಕ್ಕರಿಸುವುದು ಸರಿಯಲ್ಲ ಎಂದು ಪ್ರತಾಪ್ಸಿಂಹ ಹೇಳಿದರು.