Advertisement

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುಂದಾಗಿ: ಜಿಲ್ಲಾಧಿಕಾರಿ

11:55 AM May 12, 2022 | Team Udayavani |

ಗದಗ: ಜಿಲ್ಲೆಯಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ಆರೋಗ್ಯ ಇಲಾಖಾ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಐಡಿಎಸ್‌ಪಿ, ಎನ್‌ಆರ್‌ ಸಿಪಿ ಕಾರ್ಯಕ್ರಮದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೊಳ್ಳೆಗಳಿಂದ ಹರಡಬಹುದಾದ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಹಾಗೂ ಮೆದುಳು ಜ್ವರ ಪ್ರಕರಣಗಳನ್ನು ತಡೆಗಟ್ಟಲು ಚರಂಡಿ, ಗಟಾರುಗಳಲ್ಲಿ ನೀರು ನಿಲ್ಲದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ನಿಂತ ನೀರಿನಲ್ಲಿ ಸೊಳ್ಳೆ ಪ್ರಮಾಣ ಹೆಚ್ಚಾಗದಂತೆ ಲಾರ್ವಾ ಸಮೀಕ್ಷೆ ತೀವ್ರಗೊಳಿಸಬೇಕೆಂದರು.

ನಿಯಮಿತವಾಗಿ ಕುಡಿಯುವ ನೀರಿನ ಮೂಲಗಳಿಂದ ಓಎಚ್‌ಟಿಗಳನ್ನು ವರ್ಷದಲ್ಲಿ 2 ಬಾರಿ ಸ್ವತ್ಛಗೊಳಿಸಬೇಕು. ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್‌ ಮಾಡಬೇಕು. ನಾಯಿ ಕಡಿತ ಸಂಬಂಧಿಸಿದಂತೆ ಲಸಿಕೆಗಳನ್ನು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಕಾಯ್ದಿರಿಸಲು ಸಂಬಂಧಿತ ಆರೋಗ್ಯ ಇಲಾಖೆಯ ಅನುಷ್ಠಾನಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಪೂರೈಕೆ ವ್ಯವಸ್ಥಿತವಾಗಿ ನಡೆಯಬೇಕು. ಮೂಲಭೂತ ಸೌಕರ್ಯಗಳು ಆಸ್ಪತ್ರೆಗೆ ಆಗಮಿಸುವ ಎಲ್ಲ ರೋಗಿಗಳಿಗೆ ದೊರಕಬೇಕು. ಈ ಬಗ್ಗೆ ಅಲ್ಲಿನ ವೈದ್ಯಾ ಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

Advertisement

ಜಿಲ್ಲೆಯ ಮುಳಗುಂದ ಮತ್ತು ನರೇಗಲ್‌ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕಾರ್ಯಪ್ರವೃತ್ತರಾಗಬೇಕೆಂದರು.

ಗದಗ ಹಾಗೂ ನರೇಗಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಈ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹಾಗೂ ಈ ಎರಡೂ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹುದ್ದೆ ಭರ್ತಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಶೀಘ್ರವೇ ಈ ಆಸ್ಪತ್ರೆಗಳಿಗೆ ಬರುವ ರೋಗಿಗಳ ಚಿಕಿತ್ಸೆಗೆ ನೆರವಾಗುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.

ಮುಳಗುಂದ, ಹೊಳೆಆಲೂರ ಹಾಗೂ ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಆಸ್ಪತ್ರೆಗಳಿಗೆ ನಿವೇಶನ, ಕಟ್ಟಡ ಸೇರಿದಂತೆ ಇನ್ನಿತರ ಸೌಲಭ್ಯಗಳು ಮತ್ತು ಅಗತ್ಯ ವೈದ್ಯಕೀಯ ಸಿಬ್ಬಂದಿ ಪೂರೈಕೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಆರೋಗ್ಯ ಇಲಾಖಾಧಿಕಾರಿಗಳು ನಿರಂತರ ಸಮನ್ವಯ ಸಾಧಿಸುವಂತೆ ತಿಳಿಸಿದರು.

ಜಿಪಂ ಸಿಇಒ ಡಾ|ಸುಶೀಲಾ ಬಿ. ಮಾತನಾಡಿ, ಇಲಾಖೆಯ ವಿವಿಧ ಕಾರ್ಯಕ್ರಮಗಳ ಮುಖ್ಯಸ್ಥರು ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ನಿಗದಿಪಡಿಸಿದ ಗುರಿಯನ್ನಷ್ಟೇ ಸಾಧಿಸಿರುವುದನ್ನು ಗಮನಿಸಿದ ಅವರು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು. ಅಲ್ಲದೇ, ಆದಷ್ಟು ನಾರ್ಮಲ್‌ ಹೆರಿಗೆ ಮಾಡಿಸಲು ಪ್ರಯತ್ನ ವಹಿಸಬೇಕು. ಅನಗತ್ಯವಾಗಿ ಸೀಸರಿಯನ್‌ ಮಾಡಿಸುವವರ ಬಗ್ಗೆ ಇಲಾಖಾಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಜಗದೀಶ ನುಚ್ಚಿನ್‌ ಮಾತನಾಡಿ, ರೇಬಿಸ್‌ ಕಾಯಿಲೆ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ, ಸಮುದಾಯ ಆರೋಗ್ಯ ಅಧಿಕಾರಿಗಳಿಗೆ, ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ, ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಷ್ಟ್ರೀಯ ರೇಬಿಸ್‌ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ 224 ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪೂರ್ವ ಮಾನ್ಯತೆ ರೋಗ ನಿರೋಧಕ ಲಸಿಕೆ ಈಗಾಗಲೇ ನೀಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಬಿ.ಎಂ.ಗೊಜನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್‌ ಎ., ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಅರುಂಧತಿ ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಎಸ್‌.ಎಸ್‌.ನೀಲಗುಂದ, ಸಹಾಯಕ ಔಷಧ ನಿಯಂತ್ರಕ ಸಂಗಣ್ಣ ಶಿಳ್ಳೆ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಗುರುರಾಜ ಮನಗೂಳಿ, ತಾಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ವಿವಿಧ ಅಧಿಕಾರಿಗಳು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next