Advertisement

ಬದುಕಿಗೆ ರಂಗು ತಂದ ಕಾಮದೇವ

02:30 PM Mar 17, 2022 | Team Udayavani |

ರಬಕವಿ-ಬನಹಟ್ಟಿ: ಹೋಳಿ ಹುಣ್ಣಿಮೆ ಎಂದಾಕ್ಷಣ ಎಲ್ಲರ ಸ್ಮೃತಿ ಪಟಲಕ್ಕೆ ಬಂದು ನಿಲ್ಲುವುದು ಹಲಗೆ ರಿಂಗಣ ಬೊಬ್ಬೆ ಹೊಡೆಯುವುದು. ಬಣ್ಣಗಳಲ್ಲಿ ಮಿಂದೇಳುವುದು..

Advertisement

ಹೌದು..ಇದು ಹೋಳಿ ಹಬ್ಬದ ಸಂಭ್ರಮದ ಒಂದು ಭಾಗ. ಇದರಾಚೆ ನಿಂತು ನೋಡಿದಾಗ ಮೂರ್ತಿ ತಯಾರಿಕೆ, ಬಣ್ಣ-ಪಿಚಕಾರಿ-ಹಲಗೆ ಮಾರಾಟದಿಂದಲೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಜನ. ಇವೆರಡರಲ್ಲೂ ಬದುಕಿನ ಎರಡೂ ಮುಖಗಳಿವೆ. ಕೆಲವರಿಗೆ ಹಬ್ಬ ಸಂಭ್ರಮ ಎನಿಸಿದರೆ, ಇನ್ನೂ ಕೆಲವರಿಗೆ ಬದುಕಿಗೆ ಆಸರೆಯಾಗುವ ಕ್ಷಣ..

ಇಂದಿನ ಆಧುನಿಕತೆ ದಿನಗಳಲ್ಲಿ ಮೂರ್ತಿ ತಯಾರಿಕೆ ಗೌಣವಾಗುತ್ತ ಸಾಗುತ್ತಿರುವಾಗ ಮೂರ್ತಿಯನ್ನೇ ಆಧಾರವಾಗಿಟ್ಟುಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಜನರೂ ಕೂಡ ಸಾವಿರಾರು. ಈ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಕರೆ ಸಹೋದರರು ಕೂಡ ಒಬ್ಬರು. ಅವರ ಮನೆಯಲ್ಲಿ ತಯಾರಾದ ವೈವಿಧ್ಯಮಯ ಕಾಮಣ್ಣನ ಮೂರ್ತಿಗಳು ಬದುಕಿಗೆ ಆಸರೆಯಾಗುವ ಜತೆಗೆ ಹೋಳಿ ಹಬ್ಬದ ವೈಭವ ಹೆಚ್ಚಿಸುತ್ತಿವೆ.

ನಾರಾಯಣ ಬಕರೆ ಮನೆಯ ಸದಸ್ಯರು ಆರು ದಶಕಗಳಿಂದ ಕಾಮಣ್ಣನ ಮೂರ್ತಿ ಮಾಡುತ್ತ ಹೊಟ್ಟೆಗೆ ಹಿಟ್ಟು ಕಂಡುಕೊಂಡಿದ್ದಾರೆ. ಬಕರೆ ಕುಟುಂಬದವರು ತಯಾರಿಸಿದ ಕಾಮಣ್ಣನ ಮೂರ್ತಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಯುದ್ಧ ಭೂಮಿಯಲ್ಲಿನ ಕಾಮಣ್ಣ, ಜೋಕಾಲಿ ಆಡುತ್ತಿರುವ ಕಾಮಣ್ಣ, ಮೊಸಳೆ ಮೇಲೆ ಕುಳಿತ ಕಾಮಣ್ಣ, ದ್ವಿಚಕ್ರ ವಾಹನದ ಮೇಲೆ ಕುಳಿತ ಕಾಮಣ್ಣ, ಹುಂಜದ ಮೇಲೆ ಕುಳಿತ ಕಾಮಣ್ಣ ಮತ್ತು ಅದೇ ರೀತಿಯಾಗಿ ವಿವಿಧ ಪ್ರಾಣಿಗಳ ಮೇಲೆ ಕುಳಿತ ಕಾಮಣ್ಣನ ಮೂರ್ತಿಗಳು ಆಕರ್ಷಣೀಯವಾಗಿವೆ. ಆಧುನಿಕತೆಗೆ ತಕ್ಕಂತೆ ಜನರನ್ನು ವಿವಿಧ ಆಕಾರಗಳಲ್ಲಿ ಕಾಮಣ್ಣನ ಮೂರ್ತಿಗಳು ಆಕರ್ಷಿಸುತ್ತಿವೆ.

ಪ್ರತಿ ವರ್ಷ 250 ರಿಂದ 300 ಮೂರ್ತಿ ಮಾಡುತ್ತಿದ್ದ ಸಂಜಯ ಮತ್ತು ನಿತ್ಯಾನಂದ ಬಕರೆ ಸಹೋದರರು ಈ ಬಾರಿ 400ಕ್ಕೂ ಹೆಚ್ಚು ಮೂರ್ತಿ ತಯಾರಿಸಿದ್ದಾರೆ. ಈ ಬಾರಿ ಕಾಮಣ್ಣನ ಮೂರ್ತಿಗಳಿಗೆ ಬೇಡಿಕೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಒಂದು ತಿಂಗಳಿಂದ ಮೂರ್ತಿ ಮಾಡುತ್ತಿದ್ದು, ಈಗ ಬಣ್ಣಗಳನ್ನೂ ಕೂಡ ಹಚ್ಚಲಾಗಿದೆ ಎಂದು ಬಕರೆ ಕುಟುಂಬದವರು ಪತ್ರಿಕೆಗೆ ತಿಳಿಸಿದ್ದಾರೆ.

Advertisement

100 ರೂ. ನಿಂದ ಆರಂಭವಾಗುವ ಕಾಮಣ್ಣನ ಮೂರ್ತಿಗಳು 550 ರೂ. ಬೆಲೆಯ ಮೂರ್ತಿಗಳಳನ್ನು ತಯಾರಿಸಿದ್ದಾರೆ. ಮಣ್ಣಿನ ಮೂರ್ತಿಗಳಿಗೆ ನೈಸರ್ಗಿಕ ಬಣ್ಣನೀಡಿ ಕಾಮಣ್ಣನ ಅಂದ ಹೆಚ್ಚಿಸಿದ್ದಾರೆ. ಆರೇಳು ವರ್ಷದ ಹಿಂದೆ ಒಂದೇ ನಮೂನೆ ಮೂರ್ತಿ ಮಾಡುತ್ತಿದ್ದೇವು. ಆದರೆ ಇಂದಿನ ಯುವಕರು ವಿಶಿಷ್ಟ ಕಾಮಣ್ಣನ ಮೂರ್ತಿಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಬೇಡಿಕೆಗೆ ತಕ್ಕಂತೆ ವೈವಿಧ್ಯಮಯ ಕಾಮಣ್ಣನ ಮೂರ್ತಿ ಮಾಡುತ್ತಿದ್ದೇವೆ ಎನ್ನುತ್ತಾರೆ ಬಕರೆ ಕುಟುಂಬದವರು.

ಇಂತಹ ಮೂರ್ತಿ ಮಾಡುವ ಕಲೆ ಉಳಿಸಿ-ಬೆಳೆಸಿಕೊಂಡು ಹೋಗುತ್ತಿರುವ ಬಕರೆ ಕುಟುಂಬ ಮಣ್ಣಿನಿಂದ ಮಾಡಿದ ಗಣೇಶ ಹಾಗೂ ವಿವಿಧ ಮೂರ್ತಿ ಮಾಡುತ್ತ ಬದುಕಿನ ಬಂಡಿ ದೂಡುತ್ತಿದ್ದಾರೆ.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next