Advertisement

ಸರ್ಕಾರಿ ಶಾಲೆ ಅಭಿಮಾನ-ಸುಣ್ಣ ಬಣ್ಣದ ಅಭಿಯಾನ

04:54 PM May 08, 2022 | Niyatha Bhat |

ಶಿವಮೊಗ್ಗ: ಖಾಸಗಿ ಶಾಲೆಗಳ ಹಾವಳಿ ಮುಂದೆ ಮಂಕಾಗಿದ್ದ ಸರಕಾರಿ ಶಾಲೆಗಳು ಗ್ರಾಮ ಪಂಚಾಯತ್‌, ದಾನಿಗಳ ನೆರವಿನಿಂದ ಈಗ ಹೊಸ ರೂಪ ಪಡೆದು ಹೊಳೆಯುತ್ತಿವೆ. ಸುಣ್ಣ ಬಣ್ಣ ಕಂಡು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಶಾಲೆ ಆವರಣ ಕೂಡ ಸ್ವಚ್ಛವಾಗುತ್ತಿದೆ.

Advertisement

ಸರಕಾರದಿಂದ ಬರುವ ಅನುದಾನವು ಶಾಲೆಗಳ ದುರಸ್ತಿಗೆ ಸೀಮಿತವಾಗಿತ್ತು. ಸುಣ್ಣ ಬಣ್ಣ ಕಾಣುವುದು ಕನಸಿನ ಮಾತೇ ಆಗಿತ್ತು. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಜಿಪಂ ಸಿಇಒ ಎಂ.ಎಲ್.ವೈಶಾಲಿ ಅವರು ಗ್ರಾಪಂಗಳಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್‌ಗಳು ದಾನಿಗಳ ನೆರವಿನಿಂದ ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚುವ ಕಾರ್ಯ ಕೈಗೊಂಡಿವೆ. ಈ ಕಾರ್ಯಕ್ಕೆ ಗ್ರಾಪಂ ಸದಸ್ಯರು, ಅಧ್ಯಕ್ಷರು, ಪಿಡಿಒ, ಅ ಧಿಕಾರಿಗಳು, ತಾಪಂ ಅ ಧಿಕಾರಿಗಳು, ಊರಿನ ಪ್ರಮುಖರು, ಆಯಾ ಶಾಲೆಗಳ ಹಿರಿಯ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ನಮ್ಮೂರ ಶಾಲೆ ಎಂಬ ಅಭಿಮಾನಕ್ಕೆ 500, ಸಾವಿರ ರೂ. ಹೆಚ್ಚಿನ ಧನಸಹಾಯ ನೀಡಿ ಖುದ್ದು ತಾವೇ ಬಣ್ಣ ಖರೀದಿಸಿ ಶಾಲೆಗಳನ್ನು ಸುಂದರಗೊಳಿಸುತ್ತಿದ್ದಾರೆ. ಖುದ್ದು ಖರೀದಿಯಿಂದ ಖರ್ಚು, ವೆಚ್ಚ ಉಳಿತಾಯವಾಗಿದೆ.

300 ಕ್ಕೂ ಹೆಚ್ಚು ಶಾಲೆಗಳಿಗೆ ಬಣ್ಣ

ಜಿಲ್ಲೆಯಲ್ಲಿ 262 ಗ್ರಾಪಂಗಳಿದ್ದು ಒಟ್ಟು 1839 ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆ ಹಾಗೂ 164 ಪ್ರೌಢಶಾಲೆಗಳಿವೆ. ಇದರಲ್ಲಿ ಶೇ.50ರಷ್ಟು ಶಾಲೆಗಳಿಗೆ ಸುಣ್ಣಬಣ್ಣದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 300ಕ್ಕೂ ಶಾಲೆಗಳು ಸುಂದರಗೊಂಡಿದ್ದು ಮೇ ಕೊನೆವರೆಗೂ ಅಭಿಯಾನ ಮುಂದುವರೆಯಲಿದೆ. ಸಾವಿರಾರು ಶಾಲೆಗಳು ಗ್ರಾಮ ಪಂಚಾಯತ್‌ ನೆರವಿನಿಂದ ಅಭಿವೃದ್ಧಿ ಕಾಣುತ್ತಿವೆ. ಸಣ್ಣ ಶಾಲೆಗಳಿಗೆ 10ರಿಂದ 20 ಸಾವಿರ, ದೊಡ್ಡ ಶಾಲೆಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.

Advertisement

ಸರಕಾರಿ ಶಾಲೆ ಅಭಿವೃದ್ಧಿ ಸಂಬಂಧ ಜಿಪಂ ಮನವಿ ಮಾಡಿತ್ತು. ಊರಿನಲ್ಲಿ ಸಭೆ ನಡೆಸಿದ ಮೇಲೆ ಎಲ್ಲ ಗ್ರಾಪಂ ಸದಸ್ಯರು, ಸಂಘ, ಸಂಸ್ಥೆಗಳು ಊರಿನ ಮುಖಂಡರೆಲ್ಲ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕೆಲಸ ಆರಂಭವಾಗಿದೆ. ಜನರ ಉತ್ಸಾಹ ನೋಡಿ ಸರಕಾರ ಮಾಡಬೇಕಾದ ಕೆಲಸವನ್ನು ನಾವೇ ಮಾಡಬಹುದು ಎಂದೆನಿಸಿತು. – ಶಿವನಗೌಡ, ಅಧ್ಯಕ್ಷ, ಹರಮಘಟ್ಟ ಗ್ರಾ.ಪಂ.

ನಾವು ಓದಿದ ಶಾಲೆ ದೇವಾಲಯ ಇದ್ದಂತೆ. ಜಿಪಂ ಅವರು ಅಭಿಯಾನ ಮಾಡಲು ಕೇಳಿದ್ದರು. ಸದಸ್ಯರೆಲ್ಲ ಸೇರಿ ವೈಯಕ್ತಿಕವಾಗಿ ಹಣ ಹಾಕಿದ್ದೇವೆ. ಶಾಲೆ ಎಸ್‌ಡಿಎಂಸಿ, ಶಿಕ್ಷಕರು, ಇದೇ ಶಾಲೆಯಲ್ಲಿ ಓದಿದ ಊರಿನ ಮುಖಂಡರು ಹಣ ಕೊಡಲು ಮುಂದೆ ಬಂದಿದ್ದಾರೆ. ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. -ಎ.ಜಿ.ಮಲ್ಲನಗೌಡ, ಅಧ್ಯಕ್ಷ, ದಾಸರಕಲ್ಲಹಳ್ಳಿ ಗ್ರಾಪಂ

-ಶರತ್‌ ಭದ್ರಾವತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next