ಗುವಾಹಟಿ: ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ಭಯೋತ್ಪಾದಕರು ನಡೆಸಿದ ಹೊಂಚುದಾಳಿಯಲ್ಲಿ ಭಾರತೀಯ ಸೇನೆಯ ಕರ್ನಲ್, ಅವರ ಪತ್ನಿ, ಪುತ್ರ ಹಾಗೂ ನಾಲ್ವರು ಯೋಧರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ(ನವೆಂಬರ್ 13) ನಡೆದಿದೆ.
ಇತ್ತೀಚೆಗಿನ ದಿನಗಳಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಒಂದಾಗಿದೆ. ಇಂದು ಬೆಳಗ್ಗೆ 10ಗಂಟೆಗೆ ಮಣಿಪುರದ ಚುರಾಚಂದ್ ಪುರ್ ಜಿಲ್ಲೆಯ ಸಮೀಪ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
46 ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ ಅವರು ಶನಿವಾರ ಸೇನಾ ಶಿಬಿರದತ್ತ ತೆರಳಿದ್ದರು. ನಂತರ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆ ಸೇರಿದಂತೆ ಎರಡೂ ವಾಹನಗಳ ಮೇಲೆ ಹೊಂಚುಹಾಕಿ ದಾಳಿ ನಡೆಸಿರುವುದಾಗಿ ವರದಿ ಹೇಳಿದೆ.
ಮಣಿಪುರ ಮೂಲದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ) ಈ ದಾಳಿಯ ಹಿಂದಿರುವುದಾಗಿ ಶಂಕಿಸಲಾಗಿದೆ. ಈವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
2015ರಲ್ಲಿಯೂ ಸೇನೆ ಬಂಡುಕೋರರ ಶಿಬಿರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಉಗ್ರರು ನಡೆಸಿದ ದಾಳಿಯಲ್ಲಿ 20 ಯೋಧರು ಹುತಾತ್ಮರಾದ ಘಟನೆ ಮಣಿಪುರದಲ್ಲಿ ನಡೆದಿತ್ತು. ಅಸ್ಸಾಂ ರೈಫಲ್ಸ್ ಅರೆಸೇನಾ ಪಡೆಯಾಗಿದ್ದು, ಇದು ಸೇನೆಯ ನಿಯಂತ್ರಣದಲ್ಲಿದೆ. ಅಸ್ಸಾಂ ರೈಫಲ್ಸ್ ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸಲು ಬಳಸಲಾಗುತ್ತದೆ.