Advertisement

ಕೊಲಿಜಿಯಂ ಸೂಕ್ತ, ಸಮತೋಲಿತ ಮಾರ್ಗ: ನಿವೃತ್ತ ಸಿಜೆಐ ಯು.ಯು.ಲಲಿತ್‌ ಅಭಿಮತ

10:13 PM Nov 13, 2022 | Team Udayavani |

ನವದೆಹಲಿ: ನ್ಯಾಯಮೂರ್ತಿಗಳನ್ನು ನೇಮಿಸಲು ಇರುವ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸರಿಯಾದ ಮತ್ತು ಸಮತೋಲಿತ ಮಾರ್ಗವಾಗಿದೆ ಎಂದು ನಿವೃತ್ತ ಸಿಜೆಐ ಯು.ಯು.ಲಲಿತ್‌ ಅಭಿಪ್ರಾಯಪಟ್ಟರು.
ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾದ ನಂತರ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಕೊಲಿಜಿಯಂ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ನೀಡಿರುವ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ,’ ಎಂದರು.

Advertisement

“ಕೊಲಿಜಿಯಂ ಪ್ರತಿಯೊಂದು ದೃಷ್ಟಿಕೋನವನ್ನು ಪರಿಗಣಿಸುವ ವ್ಯವಸ್ಥೆಯಾಗಿದೆ. ಸರ್ಕಾರ ಸೇರಿದಂತೆ ಹಲವು ಹಂತದ ಪರಿಶೀಲನೆಯ ನಂತರವೇ ಕೊಲಿಜಿಯಂ ನ್ಯಾಯಮೂರ್ತಿಗಳ ನೇಮಕಾತಿಯನ್ನು ಅನುಮೋದಿಸುತ್ತದೆ.,’ ಎಂದು ಅವರು, “ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯು ಸರ್ಕಾರ ಮತ್ತು ಕೊಲಿಜಿಯಂ ನಡುವಿನ ಮಾತುಕತೆಯೊಂದಿಗೆ ನಡೆಯಬೇಕು. ನೇಮಕದಲ್ಲಿ ತಡ ಮಾಡದೇ ಪ್ರಕ್ರಿಯೆ ಪೂರ್ಣಗೊಳ್ಳಬೇಕು,’ ಎಂದು ಆಶಿಸಿದರು.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರ ಹೆಸರು ಅಂತಿಮಗೊಳಿಸಲು ಕೇಂದ್ರ ಸರ್ಕಾರದ ವಿಳಂಬ ಧೋರಣೆ ಕುರಿತು ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ನಿವೃತ್ತ ಸಿಜೆಐ ಯು.ಯು.ಲಲಿತ್‌, “ಪ್ರಕ್ರಿಯೆಯಲ್ಲಿ ವಿಳಂಬ ಸ್ವೀಕಾರಾರ್ಹವಲ್ಲ,’ ಎಂದು ಹೇಳಿದರು.

ಸಿಜೆಐ ಆಗಿ ತಮ್ಮ 74 ದಿನಗಳ ಅಧಿಕಾರಾವಧಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ 10,000 ಪ್ರಕರಣಗಳ ವಿಲೇವಾರಿ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ನಾನು ಸಹ ನ್ಯಾಯವಾದಿಯಾಗಿದ್ದೆ:
“ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರ ಪರವಾಗಿ ವಾದ ಮಂಡಿಸಿದ್ದು ಹಿರಿಯ ನ್ಯಾಯವಾದಿ ರಾಮ್‌ ಜೇಠ್ಮಲಾನಿ. ನಾನು ಆ ಪ್ರಕರಣದ ಮತ್ತೂಬ್ಬ ಆರೋಪಿಯ ಪರ ವಕಾಲತ್ತು ವಹಿಸಿದ್ದೆ. ಆದರೆ ಪ್ರಮುಖ ಪ್ರಕರಣದಲ್ಲಿ ವಾದ ಮಂಡಿಸಲಿಲ್ಲ,’ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದರು.

Advertisement

ಹುದ್ದೆ ಅಲಂಕರಿಸುವುದು ಸರಿಯಲ್ಲ
ನ್ಯಾಯಮೂರ್ತಿಗಳು ತಮ್ಮ ನಿವೃತ್ತಿಯ ನಂತರ ರಾಜ್ಯಸಭೆ ಅಥವಾ ರಾಜ್ಯಪಾಲರ ಸ್ಥಾನಗಳನ್ನು ಒಪ್ಪಿಕೊಳ್ಳುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿವೃತ್ತ ನ್ಯಾ.ಲಲಿತ್‌, “ಅದು ಸರಿಯಲ್ಲ, ಈ ರೀತಿ ಹುದ್ದೆಗಳನ್ನು ಅಲಂಕರಿಸುವುದು ಮುಖ್ಯ ನ್ಯಾಯಮೂರ್ತಿಗಳ ಘನತೆಗೆ ತಕ್ಕುದಲ್ಲ,’ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next