ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಆಗಸ್ಟ್ 1ರಿಂದ ಬೆಳಗ್ಗೆ 9ರಿಂದ ತರಗತಿ ಪ್ರಾರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಹೊಸದಾಗಿ ಸುತ್ತೋಲೆ ಹೊರಡಿಸಿದೆ.
ಕಾಲೇಜಿನ ತರಗತಿಗಳನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಿಸುವಂತೆ ಈ ಹಿಂದೆ ಸೂಚಿಸಲಾಗಿತ್ತು. ಇದರಿಂದ ಅನನುಕೂಲವಾಗುತ್ತದೆ ಎಂದು ಮಲೆನಾಡು, ಕರಾವಳಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಆದರೆ, ಈ ಬದಲಾವಣೆಯಿಂದ ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್, ಎಸ್‌ಸಿಸಿ, ಕೌಶಲಾಭಿವೃದಿಟಛಿ ತರಬೇತಿ, ವಿಶೇಷ ತರಗತಿಗಳು, ಕ್ರೀಡಾ ಚಟುವಟಿಕೆಗಳನ್ನು ಯಾವುದೇ ರೀತಿಯಲ್ಲೂ ಕಡಿತಗೊಳಿಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದೆ.
ಗೊಂದಲವೋ ಗೊಂದಲ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಪೂರ್ವದಲ್ಲಿ ಕಾಲೇಜು ಶಿಕ್ಷಣ ಇಲಾಖೆ
ಹೊರಡಿಸಿದ್ದ ಸುತ್ತೋಲೆಯಲ್ಲಿ, ಕಡ್ಡಾಯವಾಗಿ ಎಲ್ಲ ಕಾಲೇಜುಗಳನ್ನು ಬೆಳಗ್ಗೆ 8 ಗಂಟೆಯಿಂದಲೇ ಆರಂಭಿಸುವಂತೆ ನಿರ್ದೇಶಿಸಿತ್ತು.
ಇದಕ್ಕೆ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ತೀರ್ಮಾನ ಬದಲಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಹಳೇ ವೇಳಾಪಟ್ಟಿಯಂತೆ ಬೆಳಗ್ಗೆ 10 ಗಂಟೆಯಿಂದ ತರಗತಿ ಆರಂಭಿಸಲು ಸೂಚಿಸಿದ್ದರು. ಆದರೂ, ಕೆಲವು ಕಾಲೇಜುಗಳಲ್ಲಿ ಇದು ಅನುಷ್ಠಾನಗೊಳ್ಳದೆ 8ರಿಂದಲೇ ತರಗತಿ ಅರಂಭವಾಗಿದ್ದವು. ಇದರಿಂದಾಗಿ, ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಎರಡು ತರಗತಿಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ.10ಕ್ಕೆ ಇಳಿದಿತ್ತು. ಅಂದರೆ, ಒಂದೊಂದು ಕಾಲೇಜಿನಲ್ಲಿ ಬೆಳಗ್ಗಿನ ಮೊದಲ ತರಗತಿಯಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ಗೈರಾಗುತ್ತಿದ್ದರು. ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು.