Advertisement

ಕಾಲೇಜು ಮೆಟ್ಟಿಲು ಹತ್ತುವ ಭಾಗ್ಯವಿದೆಯಾ?

01:13 PM Jun 21, 2021 | Team Udayavani |

ಸುಂದರ ಪ್ರಪಂಚದಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡುತ್ತಾ ಇದ್ದ ನಾವುಗಳು ಕೊರೊನಾ ಮಹಾಮಾರಿಗೆ ಸಿಲುಕಿ ನೆಲೆ ಇಲ್ಲದ ಹುಡುಕಾಟದ ಜೀವನಕ್ಕೆ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ. ಅತ್ತ ಕಾಲೇಜಿನ ಸವಿ, ಸಡಗರ ಇಲ್ಲ. ಇತ್ತ ಮುಂದಿನ ಜೀವನದ ಸ್ಪಷ್ಟತೆ ಕಣ್ಣೆದುರಿಗಿಲ್ಲ. ಎಲ್ಲವೂ ಸರಿ ಇದ್ದಿದ್ದರೆ ಅಂತಿಮ ವರ್ಷದ ಪದವಿ ಮುಗಿಸಿ ಎಲ್ಲೋ ಒಂದು ಕಡೆ ನೆಲೆ ಕಂಡು ಕೊಳ್ತಾ ಇದ್ವಿ. ಆದರೆ ಈ ಕಾಣದ ಕೊರೊನಾ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿದೆ. ತರಗತಿ ಗೋಡೆಯ ಮಧ್ಯೆ ಇದ್ದ ವಿದ್ಯಾರ್ಥಿ ಉಪನ್ಯಾಸಕರ ಅವಿನಾಭಾವ ಸಂಬಂಧ ಈಗ ಅಂತರ್ಜಾಲದ ಮಡುವಿಗೆ ಸಿಲುಕಿ ಒಬ್ಬರನ್ನೊಬ್ಬರು ನೋಡುವಂತಹ ದಿನಮಾನಕ್ಕೆ ಬಂದಿದೆ. ಮಕ್ಕಳೇ ಎಲ್ಲರೂ ಸುಮ್ಮನೆ ಪಾಠ ಕೇಳಿ ಎನ್ನುವ ಕಾಲಘಟ್ಟ ಹೋಗಿ ಮಾತಾಡಿ ಮಕ್ಕಳೇ ಎನ್ನುವ ಉಪನ್ಯಾಸಕರ ಮಾತು, ಕೋಪ ಬಂದಾಗ ಮುಖ ತೋರಿಸಬೇಡಿ ಅಂತ ಗದರುತ್ತಿದ್ದ ಉಪನ್ಯಾಸಕರು ಇಂದು ಒಮ್ಮೆ ವೀಡಿಯೋ ಆನ್‌ ಮಾಡಿ ಅಂತಾ ಇದ್ದಾರೆ.

Advertisement

ಇದನ್ನೂ ಓದಿ: ಮತ್ತೆ ಹುಟ್ಟಲಿ ಸೂರ್ಯ ವಿದ್ಯಾರ್ಥಿಗಳ ಬಾಳಲಿ…

ಎಲ್ಲವೂ ಬದಲಾಗಿವೆ. ಕಾರಿಡಾರ್‌ನಲ್ಲಿ ನಿಂತು ಹರಟೆ ಹೊಡೆಯೋ ಹಾಗೆ ಇಲ್ಲ, ಫ್ರೆಂಡ್ಸ್‌ ಜತೆ ಗಲಾಟೆ ಇಲ್ಲ, ಗೆಳೆಯರೊಂದಿಗೆ ತಮಾಷೆ ಇಲ್ಲ, ಕ್ಲಾಸ್‌ನಲ್ಲಿ ತರ್ಲೆ ಮಾಡೋ ಹಾಗಿಲ್ಲ, ಡೌಟ್‌ ಇದೆ ಮೇಡಂ ಅಂತ ಉಪನ್ಯಾಸಕರ ಬಳಿ ಓಡೋ ಹಾಗಿಲ್ಲ, ಕ್ಯಾಂಟೀನ್‌ನಲ್ಲಿ ಕುಳಿತು ಹರಟೆ ಹೊಡೆಯೋ ಹಾಗೆ ಇಲ್ಲ, ಗ್ರೌಂಡ್‌ನ‌ಲ್ಲಿ ಆಟವಂತೂ ಮೊದಲೇ ಇಲ್ಲ, ಗೇಲಿ ಮಾತುಗಳಿಲ್ಲ, ಶಿಸ್ತಿನಿಂದ ನಡಿಯೋ ಕಾರ್ಯಕ್ರಮ ಇಲ್ಲ, ಕಾಲೇಜ್‌ ಡೇ ತಯಾರಿ, ಟ್ಯಾಲೆಂಟ್‌ ಡೇ ತರಾತುರಿ ಯಾವುದು ಇಲ್ಲ. ಸಂಭ್ರಮ, ಸಡಗರ, ಕಣ್ಣೀರು, ಹತಾಶೆ, ತಮಾಷೆ ಕಾಲೇಜು ಜೀವನದ ಅತೀ ಸುಂದರ ಕ್ಷಣಗಳಾವುದೂ ನಮ್ಮ ಪಾಲಿಗೆ ಇಲ್ಲ. ಕೇವಲ ನನ್ನ ಮಾತು ಕೇಳ್ತಾ ಇದ್ಯ ಮಕ್ಕಳೇ, ಹೇಳಿದ್ದು ಅರ್ಥ ಆಯ್ತಾ ಮಕ್ಕಳೇ ಅನ್ನೋದ್ರಲ್ಲೇ ಎಲ್ಲಿ ಕಾಲೇಜು ಜೀವನ ಕೊನೆಯಾಗುತ್ತೋ ಎನ್ನುವ ಭಯ ಕಾಡ್ತಾ ಇದೆ. ನೆಟ್‌ವರ್ಕ್‌ ಇಲ್ಲದೆ ಊರೆಲ್ಲ ಅಲೆದಾಡೋ ವಿದ್ಯಾರ್ಥಿಗಳು ಒಂದೆಡೆಯಾದರೆ ಕೇವಲ ಅರ್ಧ ಗಂಟೆಯ ತರಗತಿಗಾಗಿ ದಿನವಿಡೀ ಚಿಂತಿಸಿ ಏನೇ ಆದರೂ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಲೇಬೇಕು ಎಂದು ಒದ್ದಾಡೋ ಉಪನ್ಯಾಸಕರು ಇನ್ನೊಂದೆಡೆ. ಕಾಲೇಜಿನ ಸಡಗರ ಮಿಸ್‌ ಮಾಡಿಕೊಳ್ತಾ ಇರೋ ವಿದ್ಯಾರ್ಥಿಗಳು ಒಂದೆಡೆಯಾದರೆ ವಿದ್ಯಾರ್ಥಿಗಳನ್ನ ನೋಡದೆ ಹಂಬಲಿಸುತ್ತಿರುವ ಉಪನ್ಯಾಸಕರು ಮತ್ತೂಂದೆಡೆ. ದಿನ ಕ್ಲಾಸ್‌ ಮುಗಿಸುವಾಗಲೂ stay home stay safe  ಮಕ್ಕಳೇ ಅನ್ನೋವಾಗ ಅವರಲ್ಲಿನ ಕಾಳಜಿ ಅರ್ಥವಾಗುತ್ತಿದೆ. ಅದೇ ಕಾಲೇಜಿನಲ್ಲಿ ಇರಬೇಕಾದರೆ ಎಲ್ಲೋ ಹಾಸ್ಯಾಸ್ಪದ ಅನ್ನಿಸ್ತಾ ಇತ್ತು.

ಈಗ ನಾವು ವಿದ್ಯಾರ್ಥಿಗಳ ಕಷ್ಟ ಹೇಳ್ತಾ ಇದ್ದೇವೆಯೇ ಹೊರತು ಉಪನ್ಯಾಸಕರ ಬಗ್ಗೆ ಸ್ವಲ್ಪವೂ ಯೋಚನೆ ಕೂಡ ಮಾಡ್ತಾ ಇಲ್ಲ. ಆನ್‌ಲೈನ್‌ ಕ್ಲಾಸ್‌ ಆದರೂ ಸಮೇತ ಅಂತಿಮ ವರ್ಷದವರನ್ನ ದಡ ಸೇರಿಸಲು ಒದ್ದಾಡ್ತಾ ಇರೋದನ್ನ ನೋಡಿದ್ರೆ ಎಲ್ಲೋ ಒಂದು ಕಡೆ ನಮ್ಮ ಉಪನ್ಯಾಸಕರ ಬಗ್ಗೆ ಹೆಮ್ಮೆ ಅನಿಸುತ್ತೆ. ಪರದಾಟದ ಜೀವನದಲ್ಲಿ ನಮ್ಮನ್ನ ನಾವು ಕಳೆದುಕೊಂಡರು ಸಮೇತ ಮರಳಿ ಗೂಡಿಗೆ ಸೇರಿದ ಹಾಗೆ ಪುನಃ ಕಾಲೇಜು ದಿನಗಳನ್ನು ಸಂಭ್ರಮಿಸುವ ಆಸೆ.

ಇದನ್ನೂ ಓದಿ: ವೀರ ಪಥ: ನುರಾನಂಗ್‌ನ ವೀರ ಮಣಿ

Advertisement

ನಮ್ಮತನವನ್ನು ಅರಿವಾಗಿಸಿದವರ ಜತೆ ಸಮಯ ಕಳೆಯೋ ಆಸೆ. ಉಪನ್ಯಾಸಕರ ಜತೆ ಜೀವನದ ಹಾದಿ ಚರ್ಚಿಸೋ ಆಸೆ. ಯಾವಾಗ ಆ ಕ್ಷಣ ಸಮೀಪಿಸಿ ಕಾಲೇಜು ಮೆಟ್ಟಿಲು ಹತ್ತುತ್ತೇವೋ ನಾ ಅರಿಯೆ. ಆದರೆ ಆದಷ್ಟು ಬೇಗ ಆ ದಿನ ಬರಲಿ ಎನ್ನುವುದೇ ನನ್ನ ಹಂಬಲ.

 

 ಸುಪ್ರೀತಾ ಶೆಟ್ಟಿ
ಡಾ| ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next