ಕಾಲೇಜ್ ಲವ್‌ಸ್ಟೋರಿಗಳನ್ನಿಟ್ಟುಕೊಂಡು ದಿನದಿಂದ ದಿನಕ್ಕೆ ಹೊಸ ಹೊಸ ಸಿನಿಮಾಗಳು ಬರುತ್ತಲೇ ಇವೆ. ಕಾಲೇಜಿನೊಳಗಿನ ಕಲರ್‌ಫುಲ್ ಲವ್‌ಸ್ಟೋರಿಯನ್ನು ತಮ್ಮದೇ ಶೈಲಿಯಲ್ಲಿ ಹೇಳುವ ಉತ್ಸಾಹ ನಿರ್ದೇಶಕರದು. ಈಗ ಆ ಲವ್‌ಸ್ಟೋರಿಗಳ ಸಾಲಿಗೆ ಹೊಸ ಸೇರ್ಪಡೆ “ರಂಗ್‌ಬಿರಂಗಿ’. ಇದು ಕೂಡಾ ಸಂಪೂರ್ಣ ಹೊಸಬರ ಸಿನಿಮಾ. ಆದರೆ, ನಿರ್ದೇಶಕರಿಗೆ ಮಾತ್ರ ಈಗಾಗಲೇ ಒಂದು ಸಿನಿಮಾ ಮಾಡಿದ ಅನುಭವವಿದೆ.
ಈ ಹಿಂದೆ “ಮದರಂಗಿ’ ಎಂಬ ಸಿನಿಮಾ ಮಾಡಿದ್ದ ಮಲ್ಲಿಕಾರ್ಜುನ ಮುತ್ತಲಗೇರಿ ಈಗ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಒಂದು ಅಪ್ಪಟ ಲವ್‌ಸ್ಟೋರಿಯನ್ನು ಸದ್ದಿಲ್ಲದೇ ಮಾಡಿ ಮುಗಿಸಿದ್ದಾರೆ. “ರಂಗ್‌ಬಿರಂಗಿ’ ಚಿತ್ರಕ್ಕೆ “ಹುಚ್ಚು ಕುದುರೆಯ ಬೆನ್ನೇರಿ’ ಎಂಬ ಟ್ಯಾಗ್‌ಲೈನ್ ಇದೆ. ಹೆಸರಿಗೆ ತಕ್ಕಂತೆ ಇದು ಕಲರ್‌ಫುಲ್ ಲವ್‌ಸ್ಟೋರಿ. “ಇಲ್ಲಿ ನಾವು ಕಾಲೇಜ್ ಲವ್‌ಸ್ಟೋರಿ ಹೇಳಿದ್ದೇವೆ.
ಟೀನೇಜ್‌ನಲ್ಲಿ ನಡೆಯುವ ಘಟನೆಗಳನ್ನು ತುಂಬಾ ಸ್ವಾರಸ್ಯಕರವಾಗಿ ಹೇಳಲು ಪ್ರಯತ್ನಿಸಿದ್ದೇವೆ. ಇಡೀ ಸಿನಿಮಾ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಕಲರ್‌ಫುಲ್ ಆಗಿರುತ್ತದೆ. ಮನಸ್ಸೆಂಬ ಹುಚ್ಚು ಕುದುರೆಯ ಬೆನ್ನೇರಿ ಹೊರಟಾಗ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಇಲ್ಲಿ ಸಂಪೂರ್ಣ ಹೊಸ ಕಲಾವಿದರನ್ನೇ ಆಯ್ಕೆ ಮಾಡಿದ್ದೇನೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ಮಲ್ಲಿಕಾರ್ಜುನ ಮುತ್ತಲಗೇರಿ.
ಹೊಸಬರಿಗೇ ಸಿನಿಮಾ ಮಾಡಬೇಕೆಂದುಕೊಂಡ ಮಲ್ಲಿಕಾರ್ಜುನ್, ಅನೇಕ ನಿರ್ಮಾಪಕರ ಬಳಿ ಹೋದರಂತೆ. ಆದರೆ, ಹೊಸಬರಿಗೆ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಹಿಂದೇಟು ಹಾಕಿದರಂತೆ. ಹೀಗಿರುವಾಗ ಸಿಕ್ಕಿದ್ದು ರಾಮನಗರದ ಶಾಂತಕುಮಾರ್. ಇನ್ನು, ಚಿತ್ರದ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿ, ಅವರಿಗೆ ತರಬೇತಿ ಕೂಡಾ ಕೊಡಿಸಲಾಗಿದೆಂತೆ. ಚಿತ್ರದಲ್ಲಿ ತನ್ವಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕಿಯಾಗಿ ಇವರಿಗಿದು ಮೊದಲ ಸಿನಿಮಾ.
“ಇಲ್ಲಿ ನಿರ್ದೇಶಕರು ಹೈಟು, ಗಾತ್ರ ನೋಡಿ ಆಯ್ಕೆ ಮಾಡಿಲ್ಲ. ಬದಲಾಗಿ ಪರ್‌ಫಾರ್ಮೆನ್ಸ್ ನೋಡಿ ಅವಕಾಶ ಕೊಟ್ಟಿದ್ದಾರೆ. ಇದು ಕಾಲೇಜ್ ಲವ್‌ಸ್ಟೋರಿ. ಪಾತ್ರ ತುಂಬಾ ಸೊಗಸಾಗಿದೆ. ಹೆಚ್ಚಿನದ್ದನ್ನು ನಾನು ಬಿಟ್ಟುಕೊಡುವಂತಿಲ್ಲ’ ಎಂದು ಮೊದಲ ಪತ್ರಿಕಾಗೋಷ್ಠಿಯಲ್ಲೇ ಜಾಣ್ಮೆ ಪ್ರದರ್ಶಿಸಿದರು ತನ್ವಿ. ನಾಯಕ ನಟರಾಗಿ ಶ್ರೀಜಿತ್, ಪಂಚಾಕ್ಷರಿ, ಚರಣ್ ನಟಿಸಿದ್ದಾರೆ. ಮೂವರು ಕೂಡಾ ಮೊದಲ ಅವಕಾಶಕ್ಕೆ ಥ್ಯಾಂಕ್ಸ್ ಹೇಳುತ್ತಾ ಖುಷಿಯಾದರು.
ಪ್ರೀತಿ, ಭಾವನೆಗಳಿಗೆ ಬೆಲೆ ಕೊಡುವ ಪಾತ್ರದಲ್ಲಿ ಶ್ರೀಜಿತ್ ಕಾಣಿಸಿಕೊಂಡರೆ, ಚರಣ್, ಲೈಫ್ ಬಗ್ಗೆ ಉಡಾಫೆಯಿಂದ ಇರುವ ಪಾತ್ರವಂತೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿರುವ ಅವರಿಗೆ, ನಿರ್ದೇಶಕರು ಮಾಡಿಕೊಂಡ ಕಥೆ ತುಂಬಾ ಫ್ರೆಶ್ ಎನಿಸಿದೆಯಂತೆ. ಎಲ್ಲಾ ಕಾಲೇಜ್ ಲವ್‌ಸ್ಟೋರಿಗಳಿಗಿಂತ ಭಿನ್ನ ಎನಿಸಿತಂತೆ. ನಿರ್ಮಾಪಕ ಶಾಂತಕುಮಾರ್ ಹೆಚ್ಚು ಮಾತನಾಡಲಿಲ್ಲ. ಚಿತ್ರಕ್ಕೆ ರವಿವರ್ಮ ಹಾಗೂ ನಂದಕಿಶೋರ್ ಛಾಯಾಗ್ರಹಣವಿದೆ.