Advertisement
ಮಂಗಳೂರು ವಿ.ವಿ. ವ್ಯಾಪ್ತಿಯ ಎಲ್ಲ ಸಂಯೋಜಿತ ಕಾಲೇಜುಗಳು ಪ್ರತೀ ವರ್ಷ “ಸಂಯೋಜನೆ’ ಪ್ರಕ್ರಿಯೆ ನಡೆಸಬೇಕು. ಬಳಿಕವಷ್ಟೇ ಅಧಿಕೃತವಾಗಿ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತದೆ. ಆದರೆ ರಾಜ್ಯ ಮಟ್ಟದ ಯುಯುಸಿಎಂಎಸ್ ಪೋರ್ಟಲ್ ತಾಂತ್ರಿಕವಾಗಿ ಸ್ತಬ್ಧವಾಗಿರುವ ಕಾರಣ “ಸಂಯೋಜನೆ’ ಪ್ರಕ್ರಿಯೆಯೇ ಬಾಕಿಯಾಗಿದೆ. ಹೀಗಾಗಿ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಡೆಸುತ್ತಿರುವ ಕಾಲೇಜು ಪ್ರಾಂಶುಪಾಲರು-ಅಧ್ಯಾಪಕರು ಕಂಗಾಲಾಗಿದ್ದಾರೆ.
2023-24ನೇ ಸಾಲಿಗೆ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೊಸ ಕಾಲೇಜುಗಳ ಸಂಯೋಜನೆ, ಸಂಯೋಜಿತ ಕಾಲೇಜುಗಳಿಗೆ ಹೊಸ ವ್ಯಾಸಂಗ ಕ್ರಮ ಹಾಗೂ ಹೊಸ ವಿಷಯಗಳು/ ಮುಂದುವರಿಕೆ/ ವಿಸ್ತರಣ ಸಂಯೋಜನೆ/ ಶಾಶ್ವತ ಸಂಯೋಜನೆ/ವಿದ್ಯಾರ್ಥಿ ಪ್ರಮಾಣ ಹೆಚ್ಚಳ/ಕಾಲೇಜಿನ ಹೆಸರು ಬದಲಾವಣೆ/ಆಡಳಿತ ಮಂಡಳಿ ಬದಲಾವಣೆ ಇತ್ಯಾದಿಗಳಿಗೆ ಕಳೆದ ತಿಂಗಳು ಅರ್ಜಿ ಆಹ್ವಾನಿಸಲಾಗಿತ್ತು. ಪದೇ ಪದೇ ಮುಂದೂಡಿಕೆ
ಎಲ್ಲ ಕಾಲೇಜುಗಳು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಅರ್ಜಿ ಭರ್ತಿ ಮಾಡಿ ಶುಲ್ಕ ವನ್ನು ಅದರಲ್ಲೇ ಸಲ್ಲಿಸಲು ಸೂಚಿಸಲಾಗಿತ್ತು. ಮೇ 6 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ತಪ್ಪಿದರೆ 10 ಸಾವಿರ ರೂ. ದಂಡ ಶುಲ್ಕದೊಂದಿಗೆ ಮೇ 10ರೊಳಗೆ ಸಲ್ಲಿಸಬೇಕಿತ್ತು. ಆದರೆ ಪೋರ್ಟಲ್ ತೆರೆಯದ ಕಾರಣದಿಂದ ಅರ್ಜಿ ಸಲ್ಲಿಕೆ ಕೊನೆಯ ದಿನ ಮೇ 10ಕ್ಕೆ, ದಂಡ ಪಾವತಿಯ ದಿನಾಂಕ ಮೇ 13ಕ್ಕೆ ಮುಂದೂಡಿಕೆ ಆಗಿತ್ತು. ಇದೂ ಕೂಡ ಸಾಧ್ಯವಾಗದೆ ಮತ್ತೆ ಮುಂದೂಡಿಕೆ ತಂತ್ರಕ್ಕೆ ವಿ.ವಿ. ಬಂದು ಮೇ 17 ನಿಗದಿ ಮಾಡಲಾಗಿದೆ. ಅದುವೂ ಸಾಧ್ಯವಾಗದೆ ಇದೀಗ ಮೇ 20ರ ಗಡುವು ನೀಡಲಾಗಿದೆ!
Related Articles
ಆನ್‌ಲೈನ್ ಮೂಲಕವೇ ವಿದ್ಯಾರ್ಥಿಗಳ ಶುಲ್ಕ ಪಾವತಿಸಲು ಸರಕಾರ ತಿಳಿಸಿದರೂ ಆನ್‌ಲೈನ್ ಮೂಲಕ ಪಾವತಿಸಲು ಯುಯು ಸಿಎಂಎಸ್‌ನಲ್ಲಿ ಅವಕಾಶ ಇಲ್ಲ. ಆದರೆ ಸದ್ಯ ಕಾಲೇಜು ಪ್ರವೇಶ ಆಗುತ್ತಿರುವ ವಿದ್ಯಾರ್ಥಿಗಳ ಹಣವನ್ನು ಕಾಲೇಜಿನವರು ಪಡೆಯುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅದನ್ನು ಫೀಡ್ ಮಾಡಲು ಮಾತ್ರ ಸಾಧ್ಯವಾಗುತ್ತಿಲ್ಲ !
Advertisement
ಆನ್‌ಲೈನ್ ಇರುವಾಗ ಹಾರ್ಡ್ ಕಾಪಿ ಯಾಕೆ?“ಆನ್‌ಲೈನ್‌ನಲ್ಲಿ ಕಾಲೇಜಿನವರು ಎಲ್ಲ ಅರ್ಜಿಗಳನ್ನು ಸಲ್ಲಿಸಿದ ಅನಂತರ ಆಯಾ ಕಾಲೇಜಿನವರು “ಹಾರ್ಡ್ ಕಾಪಿ’ ಕೂಡ ಸಿದ್ಧಪಡಿಸುವಂತೆ ವಿ.ವಿ.ಯಿಂದ ಸೂಚನೆ ಬಂದಿದೆ. ಹಾಗಾದರೆ ಆನ್‌ಲೈನ್ ಮೂಲಕ ಯಾಕೆ ಸಲ್ಲಿಸಬೇಕು? ಪೇಪರ್‌ಲೆಸ್ ಎಂದು ಹೇಳಿ ಮತ್ತೆ ಪೇಪರ್ ಬಂಡಲ್ ಸೃಷ್ಟಿಸುವುದು ಯಾಕೆ? ಎಂದು ಪ್ರಾಂಶುಪಾಲರೊಬ್ಬರು ಪ್ರಶ್ನಿಸಿದ್ದಾರೆ. ಪದವಿ ತರಗತಿ ಬೇಗ ಆರಂಭಕ್ಕೆ ಚಿಂತನೆ
ಯುಯುಸಿಎಂಸ್ ಪೋರ್ಟಲ್‌ನಲ್ಲಿ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಇತ್ತು. 2-3 ದಿನದಲ್ಲಿ ಅವು ಸರಿಯಾಗಲಿದೆ. ಸಂಯೋಜನೆ ಕುರಿತಂತೆ ಕಾಲೇಜುಗಳಿಂದ ಅರ್ಜಿ ಪಡೆಯುವ ದಿನ ಮುಂದೂಡಲಾಗಿದೆ. ಪೋರ್ಟಲ್ ಸರಿಯಾದ ವಾರದೊಳಗೆ ಸಂಯೋಜನೆಯ ಕಾರ್ಯ ಪೂರ್ಣವಾಗಲಿದ್ದು, ಬಳಿಕ ವಿದ್ಯಾರ್ಥಿಗಳ ದಾಖಲಾತಿಯ ಶುಲ್ಕ ಅಧಿಕೃತ ಪಾವತಿಗೆ ಅವಕಾಶ ಸಿಗಲಿದೆ. ಆ. 16ರಂದು ಪದವಿ ಹೊಸ ಶೈಕ್ಷಣಿಕ ವರ್ಷ ಆರಂಭದ ನಿರೀಕ್ಷೆ ಇದೆ. ಆದರೆ ಅದಕ್ಕೂ ಮುನ್ನವೇ ಕಾಲೇಜುಗಳ ಸಹಕಾರ ಪಡೆದು ತರಗತಿ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಲಾಗುವುದು.
– ಪ್ರೊ| ಕಿಶೋರ್ ಕುಮಾರ್ ಸಿ.ಕೆ., ಕುಲಸಚಿವರು (ಆಡಳಿತ), ಮಂಗಳೂರು ವಿ.ವಿ. ಪಿಯು ಫಲಿತಾಂಶ ಬಂದರೂ “ಸಂಯೋಜನೆ’ ಮುಗಿದಿಲ್ಲ!
ಈ ಹಿಂದೆ ಮಾ. 31ಕ್ಕೆ ಕಾಲೇಜು ಮುಕ್ತಾಯವಾಗಿ, ಎ. 15ರಿಂದ ಮೇ ವರೆಗೆ ಪದವಿ ಪರೀಕ್ಷೆ ನಡೆಯುತ್ತದೆ. ಜೂ. 15ರಿಂದ ಮತ್ತೆ ಹೊಸ ಶೈಕ್ಷಣಿಕ ವರ್ಷದ ಕಾಲೇಜು ಆರಂಭಗೊಳ್ಳುತ್ತಿತ್ತು. ಡಿಸೆಂಬರ್ ವೇಳೆಗೆ “ಸಂಯೋಜನೆ’ಗೆ ಒಳಪಟ್ಟ ಎಲ್ಲ ಅರ್ಜಿ ಸಲ್ಲಿಸಲಾಗುತ್ತದೆ. ಜನವರಿಯಲ್ಲಿ ಇದರ ಪರಿಶೀಲನೆ ಆಗಿ ಮಾರ್ಚ್‌ನಲ್ಲಿ “ಸಂಯೋಜನೆ’ ಅನುಮತಿ ದೊರೆಯುತ್ತಿತ್ತು. ಹೀಗಾಗಿ ಪಿಯು ಫಲಿತಾಂಶ ಬಂದ ತತ್‌ಕ್ಷಣವೇ ಪದವಿ ದಾಖಲಾತಿ ಅಧಿಕೃತವಾಗಿ ನಡೆಯುತ್ತಿತ್ತು. ಆದರೆ ಈಗ ಪಿಯು ಫಲಿತಾಂಶ ಬಂದು ತಿಂಗಳಾಗುತ್ತ ಬಂದರೂ ಕಾಲೇಜುಗಳಿಗೆ ಇನ್ನೂ “ಸಂಯೋಜನೆ’ ಅನುಮತಿಯೇ ಇಲ್ಲ. – ದಿನೇಶ್ ಇರಾ