Advertisement

ಅಭಿವೃದ್ಧಿಗೆ ಕಾಲೇಜು ಸಂಘ ಅವಶ್ಯ

12:51 AM Jan 11, 2020 | Lakshmi GovindaRaj |

ಬೆಂಗಳೂರು: ಕಾಲೇಜು ಸಂಘಗಳು ವಿದ್ಯಾರ್ಥಿಗಳ ವ್ಯಾವಹಾರಿಕ ಜ್ಞಾನಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಪ್ರತಿ ಕಾಲೇಜುಗಳಲ್ಲಿಯೂ ವಿದ್ಯಾರ್ಥಿ ಸಂಘ ಇರಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗ ದೊಂದಿಗೆ ಕಬ್ಬನ್‌ ಉದ್ಯಾನ ಬಳಿಯ ಸಚಿವಾಲಯ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವ ಸಂಸತ್‌ ಸ್ಪರ್ಧೆಯಲ್ಲಿ ಮಾತನಾಡಿದರು.

Advertisement

ಜ್ಞಾನಾರ್ಜನೆಗೆ ನೆರವು: ಕಾಲೇಜು ಸಂಘ ವಿದ್ಯಾರ್ಥಿಗಳನ್ನು ಸದಾ ಸಕ್ರಿಯವಾಗಿಸುತ್ತದೆ. ಅಲ್ಲಿನ ಸಂಘಕ್ಕೆ ನಡೆಯುವ ಚುನಾವಣೆ ಪ್ರಕ್ರಿಯೆ, ಆಯ್ಕೆಯಾದ ನಂತರ ವಿದ್ಯಾರ್ಥಿಗಳ ಸಮಸ್ಯೆ ಆಲಿಕೆ, ಬಗೆಹರಿಸುವುದು, ಕಾಲೇಜು ಕಾರ್ಯಕ್ರಮ ನಿರ್ವಹಣೆ ವಿದ್ಯಾರ್ಥಿಗಳ ವ್ಯವಹಾರಿಕ ಜ್ಞಾನ ಹೆಚ್ಚಿಸುತ್ತದೆ. ಜತೆಗೆ ಭವಿಷ್ಯದಲ್ಲಿ ನಾಯಕತ್ವ, ನಿರ್ವಹಣೆ ಅಂಶಗಳನ್ನು ಕಲಿಸಿ ಭವಿಷ್ಯದಲ್ಲಿ ಸಾಕಷ್ಟು ಸಹಕಾರಿಯಾಗುತ್ತದೆ. ಹೀಗಾಗಿಯೇ ಪ್ರತಿ ಕಾಲೇಜುಗಳಲ್ಲಿ ಕಾಲೇಜು ಸಂಘ ಇರಬೇಕು. ಕಾಲೇಜು ಸಂಘಗಳ ಜತೆಗೆ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳೂ ವ್ಯಾವಹಾರಿಕ ಜ್ಞಾನಾರ್ಜನೆಗೆ ನೆರವಾಗುತ್ತಿವೆ ಎಂದು ತಿಳಿಸಿದರು.

ಭಾರತ ಅತ್ಯುತ್ತಮ ಪ್ರಜಾಪ್ರಭತ್ವ ವ್ಯವಸ್ಥೆ ಹೊಂದಿದೆ. ಎಲ್ಲಾ ವ್ಯವಸ್ಥೆಯಂತೆಯೇ ಇದರಲ್ಲೂ ಕೆಲ ದೋಷಗಳಿದ್ದು, ಅವುಗಳನ್ನು ಮುಂದಿಟ್ಟು ಅಪನಂಬಿಕೆ ಸೂಕ್ತವಲ್ಲ. ದೋಷಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ಛಲವನ್ನು ಬೆಳೆಸಿಕೊಳ್ಳಬೇಕಿದೆ. ಸಂವಿಧಾನ ನಮಗೆ ಹಕ್ಕು ನೀಡಿದಂತೆ ಅನೇಕ ಕರ್ತವ್ಯಗಳನ್ನೂ ನೀಡಿದ್ದು, ಅವುಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವುದನ್ನು ಯುವಜನತೆ ಕಲಿತುಕೊಳ್ಳಬೇಕಿದೆ ಎಂದು ತಿಳಿಸಿದರು.

ಇಂದು ಸಮಾಜದಲ್ಲಿ ಕಮ್ಯುನಿಸಂ, ನ್ಯಾಷನಲಿಸಂ, ಸೋಷಿಯಲಿಸಂ ಸೇರಿದಂತೆ ಸಾಕಷ್ಟು ಚಿಂತನೆಗಳಿವೆ. ಇವುಗಳ ಪೈಕಿ ದೇಶದ ಅಭಿವೃದ್ಧಿಗೆ ಉತ್ತಮವಾದದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕೆಂದರು. ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀತಿ ನಿಯಮ ರೂಪಿಸಿ ಎಲ್ಲರಿಗೂ ಕಾರ್ಯ ಸೂಚಿಸುವ ಶಾಸಕಾಂಗ ಶ್ರೇಷ್ಠವಾಗಿದೆ. ಈ ಶಾಸಕಾಂಗ ಟೊಳ್ಳಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಹೇಳಿದರು.

ರಾಜಕೀಯಕ್ಕೆ ಬನ್ನಿ: ರಾಜಕಾರಣ ಅಯೋಗ್ಯರಿಗೆ ಮಾತ್ರವಲ್ಲ. ಉತ್ತಮರು ರಾಜಕೀಯದಿಂದ ಎಷ್ಟು ದಿನ ದೂರ ಉಳಿಯುತ್ತಾರೆಯೋ, ಅಷ್ಟೇ ಕೆಟ್ಟ ಪರಿಣಾಮ ಸಮಾಜದ ಮೇಲಾಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಆಲೋಚನೆ ಒಳಗೊಂಡ, ಸಾಕಷ್ಟು ಜ್ಞಾನ ಹೊಂದಿದ ಯುವ ಜನತೆ ರಾಜಕೀಯದತ್ತ ಆಗಮಿಸಿ ರಾಜಕಾರಣ ಉತ್ತಮ ಎನ್ನುವ ಭಾವ ಜನತೆಯಲ್ಲಿ ಮೂಡಿಸಬೇಕೆಂದರು.

Advertisement

ಬಹುಮಾನಿತರು: ಸಭಾ ಕಾರ್ಯಕ್ರಮ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಸನ ಜಿಲ್ಲೆಯ ಮಾಸ್ಟರ್ಸ್‌ ಪಿಯು ಕಾಲೇಜು ವಿದ್ಯಾರ್ಥಿ ಚೇತನ್‌ ಪಟೇಲ್‌ ಪ್ರಥಮ, ಮಡಿಕೇರಿ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿ ಬಿ.ಎಚ್‌.ಅಭಿಷೇಕ್‌ ದ್ವಿತೀಯ ಹಾಗೂ ಬಾಗಲಕೋಟೆ ತುಂಗಳ ಪಿಯು ಕಾಲೇಜಿನ ದೀಪಾ ಹೊಸಮನಿ ತೃತೀಯ ಸ್ಥಾನ ಪಡೆದರು.

ಯುವ ಸಂಸತ್‌ನಲ್ಲಿ ಸಿಎಎ ಚರ್ಚೆ: ಬೆಳಗ್ಗೆಯಿಂದ ನಡೆದ ಕಾಲೇಜು ವಿದ್ಯಾರ್ಥಿಗಳ ಯುವ ಸಂಸತ್‌ ಸ್ಪರ್ಧೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಆರ್‌ಸಿ, ನಿರುದ್ಯೋಗ, ಬೆಲೆ ಏರಿಕೆ, ಸೇರಿದಂತೆ ಸಾಕಷ್ಟು ವಿಚಾರಗಳು ಚರ್ಚೆಯಾದವು. ಸಂಸದರು, ಸಚಿವರಂತೆಯೇ ವಿದ್ಯಾರ್ಥಿಗಳು ಪ್ರಶ್ನಿಸಿದರು ಹಾಗೂ ಚರ್ಚಿಸಿದರು. ಸಾಮಾನ್ಯ ಸಂಸತ್‌ ಅಧಿವೇಶನದಂತೆಯೇ ಇಲ್ಲಿನ ಯುವ ಸಂಸತ್‌ನಲ್ಲಿಯೂ ಮೊದಲು ನಿಧನರಾದವರಿಗೆ ಸಂತಾಪ ಸೂಚಿಸಲಾಯಿತು.

ಬಳಿಕ ಇತ್ತೀಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವರಾದ ಅನಂತಕುಮಾರ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ ಕುರಿತು ಯುವ ಸಂಸದರು ಮಾತನಾಡಿದರು. ಬಳಿಕ ಪ್ರಶ್ನೋತ್ತರ ವೇಳೆ, ನಾಗರಿಕರ ಸಮಸ್ಯೆಗಳನ್ನು ವಿರೋಧ ಪಕ್ಷದ ಯುವ ಸಂಸದರು, ಆಡಳಿತ ಪಕ್ಷಕ್ಕೆ ಪ್ರಶ್ನೆ ರೂಪದಲ್ಲಿ ಕೇಳಿದರು. ಆಡಳಿತ ಪಕ್ಷದ ಯುವ ಸಚಿವರು ಉತ್ತರ ನೀಡಿದರು. ಒಂದಿಷ್ಟು ಆರೋಗ್ಯ ಚರ್ಚೆಗಳು ನಡೆದವು. ಆ ನಂತರ ವಿಧೇಯಕ ಮಂಡನೆ, ವಿಧೇಯಕ ಅಂಗೀಕಾರ ಆದ ಮೇಲೆ ಅನಿರ್ದಿಷ್ಟಾವಧಿಗೆ ಅಧಿವೇಶನವನ್ನು ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next