ಮಹಾನಗರ: ನಗರದ ಬಲ್ಮಠ ರಸ್ತೆಯ ಕಲೆಕ್ಟರ್ ಗೇಟ್ ಜಂಕ್ಷನ್‌ನಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿರುವ ಕಟ್ಟಡಕ್ಕೆ ಶೀಘ್ರ ಮುಕ್ತಿ ಸಿಗುವ ಸಾಧ್ಯತೆ ಇದೆ.
ಈ ಕಟ್ಟಡವನ್ನು ಕೆಡಹಿ ಅಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವ ಕುರಿತಂತೆ ಮಹಾನಗರ ಪಾಲಿಕೆ ಮತ್ತು ಈ ಕಟ್ಟಡದ ಮಾಲಕರ ನಡುವೆ ಮಾತುಕತೆಗಳು ನಡೆದಿವೆ.
ಇದೊಂದು ಖಾಸಗಿ ಕಟ್ಟಡವಾಗಿದ್ದು, ರಸ್ತೆ ವಿಸ್ತರಣೆಗೆ ಜಾಗ ಪಡೆಯಲು ಮಹಾನಗರ ಪಾಲಿಕೆಗೆ ಸಾಧ್ಯವಾಗದ ಕಾರಣ ಇಲ್ಲಿ ರಸ್ತೆ ಅಭಿವೃದ್ಧಿಗೆ ಅಡಚಣೆ ಉಂಟಾಗಿತ್ತು. ಜ್ಯೋತಿ ಜಂಕ್ಷನ್‌ನಿಂದ ಕಲೆಕ್ಟರ್ ಗೇಟ್ ತನಕ ರಸ್ತೆ ವಿಸ್ತರಣೆ ಆಗಿದ್ದರೂ ಕಲೆಕ್ಟರ್ ಗೇಟ್ ಜಂಕ್ಷನ್‌ನಿಂದ ಆಚೆಗೆ ಬೆಂದೂರ್‌ವೆಲ್ ಕಡೆಗೆ ಹೋಗುವ ರಸ್ತೆಯು ಈ ಕಲೆಕ್ಟರ್ ಗೇಟ್ ಬಳಿಯಲ್ಲಿಯೇ ಇಕ್ಕಟ್ಟಾಗಿದ್ದು, ಕೇವಲ ಒಂದು ಬಸ್ ಚಲಿಸುವಷ್ಟು ಅಗಲ ಮಾತ್ರ ಇದೆ. ಈ ಖಾಸಗಿ ಕಟ್ಟಡದ ಮಾಲಕರು ಜಾಗ ಬಿಟ್ಟು ಕೊಡುವ ಬಗ್ಗೆ ಈ ಹಿಂದೆ ಪಾಲಿಕೆ ವತಿಯಿಂದ ಸೌಹಾರ್ದಯುತ ಮಾತುಕತೆ ನಡೆಯದ ಕಾರಣ ಇಲ್ಲಿ ರಸ್ತೆ ವಿಸ್ತರಣೆ ಆಗಿರಲಿಲ್ಲ. ಹಾಗಾಗಿ ಇಲ್ಲಿ ಪೀಕ್ ಆವರ್‌ಗಳಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಇದರಿಂದ ಸಂಚಾರ ನಿರ್ವಹಣೆ ಪೊಲೀಸರಿಗೂ ಕಷ್ಟವಾಗುತ್ತಿತ್ತು.
ಪಾಳು ಬಿದ್ದಿರುವ ಕಟ್ಟಡ :
ಈ ಕಟ್ಟಡದಲ್ಲಿ ಈ ಹಿಂದೆ ಕೆನರಾ ಬ್ಯಾಂಕಿನ ಕಲೆಕ್ಟರ್ಗೇಟ್ ಶಾಖೆ ಕಾರ್ಯ ನಿರ್ವಹಿಸುತ್ತಿತ್ತು. ಇಕ್ಕಟ್ಟಾದ ಜಾಗ ಹಾಗೂ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಕೆಲವು ವರ್ಷಗಳ ಹಿಂದೆ ಬ್ಯಾಂಕ್ ಶಾಖೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆ ಬಳಿಕ ಹಲವಾರು ವರ್ಷಗಳಿಂದ ಈ ಕಟ್ಟಡದ ಬ್ಯಾಂಕ್ ಇದ್ದ ಭಾಗ ಖಾಲಿ ಇದೆ. ಕಟ್ಟಡಕ್ಕೆ ಹೊರಗಿನಿಂದ ಸುಣ್ಣ, ಬಣ್ಣ ನೀಡದೆ ಹಲವು ವರ್ಷಗಳೇ ಕಳೆದಿದ್ದು, ಈಗಲೂ ಪಾಳು ಬಿದ್ದಿದೆ.
ಕಟ್ಟಡದ ಮಾಲಕರ ಜತೆ ಮಾತುಕತೆ :
ಇದೀಗ ಇತ್ತೀಚೆಗೆ ಪಾಲಿಕೆ ವತಿಯಿಂದ ಈ ಕಟ್ಟಡದ ಮಾಲಕರ ಜತೆ ಮಾತುಕತೆ ನಡೆದಿದ್ದು, ಹೊಸ ಕಟ್ಟಡ ಕಟ್ಟಿಸಲು ಪಾಲಿಕೆಯಿಂದ ಅಗತ್ಯವಾಗಿ ಬೇಕಾಗಿರುವ ಸಹಕಾರ ನೀಡುವ ಭರವಸೆ ನೀಡಲಾಗಿದೆ. ಸೆಟ್ ಬ್ಯಾಕ್ ಬಿಟ್ಟು ಕೊಟ್ಟು ಕಟ್ಟಡ ಕಟ್ಟಿಸಲು, ಇದಕ್ಕೆ ಅನುಸಾರವಾಗಿ ಸೂಕ್ತ ಟಿಡಿಆರ್ ಸೌಲಭ್ಯ ಒದಗಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ಸ್ಥಳೀಯ ಕಾರ್ಪೋರೆಟರ್ ನವೀನ್ ಆರ್. ಡಿ’ಸೋಜಾ ಅವರು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.
ಜಂಕ್ಷನ್ ಕೂಡ ಅಭಿವೃದ್ಧಿ ಆಗಿಲ್ಲ :
ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರಿನ ಬಹುತೇಕ ರಸ್ತೆಗಳು ವಿಸ್ತರಣೆಗೊಂಡಿವೆ. ಕೆಲವು ರಸ್ತೆಗಳ ಕಾಮಗಾರಿ ಈಗಲೂ ನಡೆಯುತ್ತಿದೆ. ಆದರೆ ಕಲೆಕ್ಟರ್ಗೇಟ್ ಜಂಕ್ಷನ್ ಬಳಿ ರಸ್ತೆ ಅಭಿವೃದ್ಧಿ ಆಗಿಲ್ಲ. ರಸ್ತೆ ವಿಸ್ತರಣೆ ಆಗದ ಕಾರಣ ಈ ಜಂಕ್ಷನ್ ಕೂಡ ಅಭಿವೃದ್ಧಿ ಆಗಿಲ್ಲ. ಇಲ್ಲಿರುವ ಈ ಹಳೆಯ ಕಟ್ಟಡ ಸ್ಮಾರ್ಟ್ ಸಿಟಿಗೆ ಕಪ್ಪು ಚುಕ್ಕೆಯಂತಾಗಿತ್ತು.