ಗುಳೇದಗುಡ್ಡ: ತಾಲೂಕಿನಾದ್ಯಂತ 690 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ. ಲಾಕ್‌ಡೌನ್‌ನಿಂದ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರೇ ಇಲ್ಲದೇ ಮೆಕ್ಕೆಜೋಳದ ಬೆಲೆ ಪಾತಾಳಕ್ಕೆ ಕುಸಿದಿದ್ದು, ಇದರಿಂದ ರೈತರು ಮತ್ತಷ್ಟು ಆತಂಕ್ಕೀಡಾಗಿದ್ದು, ಕೈಗೆ ಬಂದರೂ ಬಾಯಿಗೆ ಬರಲಿಲ್ಲ ಎನ್ನುವ ಹಾಗೇ ಆಗಿದೆ ರೈತರ ಸ್ಥಿತಿ.
ತಾಲೂಕಿನ ಕೋಟೆಕಲ್ 15, ಕಟಗೇರಿ 65, ಹಳದೂರ 25, ಬೂದಿನಗಡ 5, ಕಟಗಿನಹಳ್ಳಿ 10, ಕೊಂಕಣಕೊಪ್ಪ 25, ಪರ್ವತಿ 20 ಹೆಕ್ಟೇರ್ ಪ್ರದೇಶ ಸೇರಿ ಸುಮಾರು 690 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿನ ಬೆಳೆ ಮೆಕ್ಕೆಜೋಳವನ್ನು ರೈತರು ಬಿತ್ತಿದ್ದು, ಬೆಳೆಯನ್ನು ಚೆನ್ನಾಗಿ ಬಂದಿದೆ. ಆದರೆ, ಮಾರಾಟ ಮಾಡಲು ಮಾರುಕಟ್ಟೆಯೇ ಇಲ್ಲವಾಗಿದೆ.
ಫೆಬ್ರವರಿಯಲ್ಲಿ ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ 2070 ರೂ. ದರವಿತ್ತು. ಲಾಕ್‌ಡೌನ್‌ನಿಂದ ದರ ಕುಸಿದು, ಈಗ 1000-1100 ರೂ. ದರವಿದೆ. ರೈತರು ರಾಶಿ ಮಾಡಿ, ಚೀಲಗಳಲ್ಲಿ ಶೇಖರಣೆ ಮಾಡಿಟ್ಟರೆ, ಇನ್ನೂ ಕೆಲವರು ತೆನೆ ಸಮೇತ ಬಿಟ್ಟಿದ್ದಾರೆ. ಮೆಕ್ಕೆಜೋಳ ಮಾರಾಟ ಖರೀದಿಗೆ ಅವಕಾಶ ಸಿಗದಿದ್ದರೇ ಇನ್ನೂ ಸ್ವಲ್ಪ ದಿನಗಳಲ್ಲಿ ಮೆಕ್ಕೆಜೋಳಕ್ಕೆ ನುಸಿ ಆವರಿಸಿ ಬೆಳೆ ಶೇಖರಣೆ ಮಾಡಿಟ್ಟ ಸ್ಥಳದಲ್ಲಿ ಹಾಳಾಗುತ್ತದೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ಕೊರೊನಾ ಹಾಗೂ ಹಕ್ಕಿಜ್ವರದ ನೆಪದಲ್ಲಿ ಬಹುತೇಕ ಕುಕ್ಕುಟೋದ್ಯಮ ನೆಲಕಚ್ಚಿದೆ. ಮೆಕ್ಕೆಜೋಳ ಕೋಳಿಗೆ ಆಹಾರವಾಗಿ ಬಳಕೆಯಾಗುತ್ತಿತ್ತು. ಈಗ ಫಾರಂಗಳು ಸಹ ಹೇಳಿಕೊಳ್ಳುವಷ್ಟರ ಮಟ್ಟಿಗೆ ಆರಂಭವಿಲ್ಲ. ಇದರಿಂದ ಮೆಕ್ಕೆಜೋಳ ಖರೀದಿಸಲು ಯಾರೂ ಮುಂದಾಗುತ್ತಿಲ್ಲ.
ಈ ಬಾರಿ ಮೆಕ್ಕೆಜೋಳ ಫಸಲು ಚೆನ್ನಾಗಿ ಬಂದಿದೆ. ಆದರೆ, ಅದನ್ನು ಕೊಂಡುಕೊಳ್ಳುವವರೇ ಇಲ್ಲವಾಗಿದೆ. ಈಗ ನಾವು ಅದಕ್ಕೆ ಖರ್ಚು ಮಾಡಿದ ಹಣವು ಸಹ ಬರದ ಸ್ಥಿತಿ ಬಂದಿದೆ. ಸರಕಾರವೇ ಇದಕ್ಕೆ ಪರಿಹಾರ ಕಲ್ಪಿಸಬೇಕು.
-ಶಂಕ್ರಪ್ಪ ಕೋಟಿ, ದಂಡಪ್ಪ ಅಬಕಾರಿ ಕೋಟೆಕಲ್ಲ ರೈತರು
ತಾಲೂಕಿನಲ್ಲಿ 690 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿ ಬೆಳೆ ಮೆಕ್ಕೆಜೋಳ ಬೆಳೆದಿದ್ದಾರೆ. ಬೆಂಬಲ ಬೆಲೆ ಘೋಷಣೆ ಮಾಡಬೇಕಾಗಿದೆ. ಬೆಂಬಲ ಬೆಲೆ ಬಂದ ಕೂಡಲೇ ರೈತರಿಗೆ ಮಾಹಿತಿ ನೀಡಲಾಗುವುದು. ಅಲ್ಲಿಯವರೆಗೆ ರೈತರು ಗೋವಿನ ಜೋಳ ಸಂಗ್ರಹಿಸಿಟ್ಟು ಮಾರಾಟ ಮಾಡಬಹುದು. ಮೆಕ್ಕೆಜೋಳ ಬೇಗನೆ ಕೆಡುವುದಿಲ್ಲ.
-ಆನಂದ ಗೌಡರ, ಕೃಷಿ ಇಲಾಖೆ ಅಧಿಕಾರಿ
–ಮಲ್ಲಿಕಾರ್ಜುನ ಕಲಕೇರಿ