ವಿಜಯಪುರ: ಜಾಗತಿಕ ಹಿರಿಮೆಯ ವಿಜಯಪುರ ಪಾರಂಪರಿಕ ನಗರದಲ್ಲಿರುವ ಗೋಲಗುಂಬಜದ ಸಜ್ಜಾ ತಿಂಗಳ ಹಿಂದೆ ಕುಸಿದು ಬಿದ್ದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಗೋಲಗುಂಬಜ ಸ್ಮಾರಕದ ಪೂರ್ವ ಭಾಗದ ಸಜ್ಜಾ ಕುಸಿದಿದೆ. ಎಎಸ್ ಐ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಕೊರತೆಯೆ ಸ್ಮಾರಕ ಅಪಾಯಕ್ಕೆ ಸಿಲುಕಲು ಪ್ರಮುಖ ಕಾರಣ ಎಂದು ಆರೋಪಿಸಲಾಗುತ್ತಿದೆ.
ವಿಜಯಪುರ ಶಾಹಿ ಮನೆತನದ ಪ್ರಸಿದ್ಧ ದೊರೆ ಮೊಹಮ್ಮದ್ ಅದಿಲ್ ಶಹಾ 1626 ರಲ್ಲಿ ನಿರ್ಮಾಣ ಆರಂಭಿಸಿ ಸತತ ಮೂವತ್ತು ವರ್ಷಗಳ ಬಳಿಕ ವಿಶಿಷ್ಟ ವಿನ್ಯಾಸದ ಈ ಸ್ಮಾರಕ ಮುಕ್ತಾಯ ಕಂಡಿದೆ. ಇನ್ನು ಐದು ವರ್ಷ ಗತಿಸಿದರೆ ನಾಲ್ಕು ಶತಮಾನದ ಸಂಭ್ರಮ ಕಾಣಲಿದೆ.
ಇದನ್ನೂ ಓದಿ:ಬೊಮ್ಮಾಯಿ ಅವರನ್ನು ನಾವೇನು ರಬ್ಬರ್ ಸ್ಟ್ಯಾಂಪ್ ಎಂದಿಲ್ಲ: ಸಿದ್ದರಾಮಯ್ಯ
ಕಂಬಗಳ ಆಸರೆ ಇಲ್ಲದೇ ಏಳು ಅಂತಸ್ತಿನ ಈ ಪಾರಂಪರಿಕ ಸ್ಮಾರಕ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದಕ್ಕಿಂತ ವಿಶಿಷ್ಟ ಎಂದರೆ ಪಿಸುಗುಟ್ಟುವ ಗ್ಯಾಲರಿ. ಹೀಗೆ ವಾಸ್ತು ವಿನ್ಯಾಸದಲ್ಲಿ ಜಗತ್ತಿನಲ್ಲೇ ವಿಭಿನ್ನತೆಯಿಂದ ನಿರ್ಮಾಣಗೊಂಡ ಈ ಸ್ಮಾರಕ ಮೊಹಮ್ಮದ್ ಆದಿಲ್ ಶಾಹಿ ತನ್ನ ಸಮಾಧಿಗಾಗಿ ನಿರ್ಮಿಸಿಕೊಂಡಿದ್ದ. ಇಂಥ ವಿಶಿಷ್ಟತೆಯ ಸ್ಮಾರಕ ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿ ಇದ್ದು, ನಿರ್ವಹಣೆ ಕೊರತೆಯ ಕಾರಣ ಇದೀಗ ಅವಸಾನ ಹಾದಿಹಿಡಿದಿದೆ.
ತಿಂಗಳ ಹಿಂದೆ ಸ್ಮಾರಕದ ಸಜ್ಜಾ ಕಳಚಿ ಬಿದ್ದಿರುವ ಪ್ರಕರಣ ಧಾರವಾಡದಲ್ಲಿರುವ ಎಎಸ್ಐ ಕಛೇರಿಗೆ ಗೋಲಗುಂಬಜ ಸ್ಮಾರಕದ ನಿರ್ವಹಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾರವಾಡ ಎಎಸ್ಐ ಅಧಿಕಾರಿಗಳು ಭೇಟಿ ನೀಡಿದ್ದರೂ, ದೇಶದ ಪಾರಂಪರಿಕ ಆಸ್ತಿಯಾಗಿರುವ ಗೋಲಗುಂಬಜ ವಿಶ್ವ ಪಾರಂಪರಿಕ ಸ್ಮಾರಕ ಪಟ್ಟಿಗೆ ಸೇರಿಸುವ ಕೂಗಿಗೆ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಎಎಸ್ಐ ಅಧಿಕಾರಿಗಳು ಸ್ಮಾರಕ ಸಂರಕ್ಷಣೆ ವಿಷಯದಲ್ಲಿ ತೋರುತ್ತಿರುವ ನಿರ್ಲಕ್ಷಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದೆ.
ಸ್ಮಾರಕ ಅಪಾಯಕ್ಕೆ ಸಿಲುಕಿರುವ ಗಂಭೀರ ವಿಷಯವನ್ನು ಸ್ಥಳೀಯರ ಗಮನಕ್ಕೆ ತರದೇ, ಎಲ್ಲವನ್ನೂ ಗುಪ್ತವಾಗಿ ಇರಿಸಿ ಸ್ಮಾರಕ ನಾಶಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.