ಚಳ್ಳಕೆರೆ: ರಾಜ್ಯದ ಬಹುಸಂಖ್ಯಾತ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನೀಡುವಂತೆ ಒತ್ತಾಯಿಸಲು ಈಗಾಗಲೇ ಸರ್ಕಾರ ಗಮನ ಸೆಳೆಯಲು ಹೋರಾಟಗಳನ್ನು ನಡೆಸಲಾಗಿದೆ. ಸರ್ಕಾರದ ನಿರ್ಲಕ್ಷ್ಯವನ್ನು ವಿರೋಧಿಸಿ ಜನವರಿಯಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ನಡೆಸಿ ಸರ್ಕಾರ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ಚಿತ್ರದುರ್ಗ ಮಡಿವಾಳ ಪೀಠದ ಶ್ರೀಬಸವ ಮಾಚಿದೇವ ಸ್ವಾಮಿ ಹೇಳಿದರು.
ಭಾನುವಾರ ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮುದಾಯದ ರಾಜ್ಯಮಟ್ಟದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ ಸುಮಾರು 40 ಲಕ್ಷಕ್ಕೂ ಹೆಚ್ಚು ಜನ ಮಡಿವಾಳ ಸಮುದಾಯವಿದ್ದು ಕಳೆದ ಹಲವಾರು ದಶಕಗಳಿಂದ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಪಡೆಯದೆ ವಂಚಿತವಾಗಿದೆ. ಸಮುದಾಯದಲ್ಲಿ ಜಾಗೃತಿ ಮೂಡದ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಸಮುದಾಯ ಸಂಘಟಿತವಾಗಿ ಹೋರಾಟದಲ್ಲಿ ಪಾಲ್ಗೊಂಡು ನ್ಯಾಯುತವಾಗಿ ದೊರೆಯಬೇಕಾದ ಬೇಡಿಕೆಗಳನ್ನು ಪಡೆಯುವ ನಿಟ್ಟಿನಲ್ಲಿ ಬೃಹತ್ ರಾಜ್ಯ ಮಟ್ಟದ ಸಮ್ಮೇಳ ಚಿತ್ರದುರ್ಗದಲ್ಲಿ ನಡೆಸಲಾಗುವುದು ಎಂದರು.
ಸಮ್ಮೇಳನಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಪಕ್ಷಗಳ ಗಣ್ಯರನ್ನು ಆಹ್ವಾನಿಸಲಿದ್ದು ಸಮುದಾಯದ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ವರ್ಗದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಬೇಕು. ಈಗಾಗಲೇ ರಾಜ್ಯ ವ್ಯಾಪಿ ಪ್ರವಾಸ ಕೈಗೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ದೊರಕಿದಲ್ಲಿ ಮಾತ್ರ ಈ ಸಮುದಾಯದ ಅಭ್ಯುದಯ ಸಾಧ್ಯ. ಅದ್ದರಿಂದ ತಾಲೂಕಿನ ಎಲ್ಲಾ ಮಡಿವಾಳ ಸಮುದಾಯ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಮುದಾಯದ ಬಂಧುಗಳು ರಾಜ್ಯಮಟ್ಟದ ಸಮವೇಶದಲ್ಲಿ ಪಾಲ್ಗೊಳ್ಳಬೇಕು, ಸಮಾವೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದರು.
ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರಾಜ್ಯಮಟ್ಟದ ಪದಾಧಿ ಕಾರಿಗಳು ನಿರಂತರ ಹೋರಾಟ ನಡೆಸಿದರೂ ಸಹ ನಿರೀಕ್ಷಿತ ಫಲವನ್ನು ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಈ ಸಮುದಾಯದ ಬೇಡಿಕೆಯ ಬಗ್ಗೆ ನಿರ್ಲಕ್ಷ್ಯವಹಿಸಿದೆ. ಸಮುದಾಯದ ಹಲವಾರು ಪ್ರಮುಖ ನಾಯಕರು ಸಹ ಹೋರಾಟದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸಮುದಾಯದ ಪೂಜ್ಯ ಸ್ವಾಮೀಜಿ ಬಸವಮಾಚಿದೇವ ನೇತೃತ್ವದಲ್ಲಿಯೇ ರಾಜ್ಯಮಟ್ಟದ ಸಮಾವೇಶ ನಡೆಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ತಾಲೂಕು ಅಧ್ಯಕ್ಷ ಎನ್.ಮಂಜುನಾಥ ಮಾತನಾಡಿ, ಸಮಾವೇಶನಕ್ಕೆ ನಗರವೂ ಸೇರಿದಂತೆ ಗ್ರಾಮೀಣ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ತಪ್ಪದೆ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾಧ್ಯಕ್ಷ ರಮೇಶ್, ರಾಜ್ಯ ಮಡಿವಾಳ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಯುವ ಘಟಕದ ರಾಜ್ಯಾಧ್ಯಕ್ಷ ಧ್ರುವಕುಮಾರ್, ಅಂಜಿನಪ್ಪ, ಹನುಮಂತರಾಯ, ತಾಲೂಕು ಮಡಿವಾಳ ಯುವ ಘಟಕದ ಅಧ್ಯಕ್ಷ ಕರೀಕೆರೆ ನಾಗರಾಜು, ವೀರಣ್ಣ, ನಾಗೇಶ್, ತಿಪ್ಪೇಸ್ವಾಮಿ, ರಾಘವೇಂದ್ರ, ಎನ್. ತಿಪ್ಪೇಶ್, ಸಿದ್ದೇಶ್, ರಾಮಣ್ಣ, ನಾಗರಾಜು ಇತರರು ಇದ್ದರು.