ಮೈಸೂರು: ಆಡಳಿತದಲ್ಲಿ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದ್ದು ರಾಜ್ಯ ಸರ್ಕಾರದ ವಿಷನ್-2025 ಮುನ್ನೋಟ ತಯಾರಿಸಲು ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಸರ್ಕಾರ ಸ್ವರೂಪ ದರ್ಶನ-2025 ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಳೆದ 4 ವರ್ಷದ ಆಡಳಿತದಲ್ಲಿ ರಾಜ್ಯ ಸರ್ಕಾರ ಅನೇಕ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಂತೆ 2025ಕ್ಕೆ ಕರ್ನಾಟಕ ಯಾವ ರೀತಿ ಇರಬೇಕೆಂಬ ಕುರಿತು ಈಗಿನಿಂದಲೇ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 2025ಕ್ಕೆ ಕರ್ನಾಟಕ ಹೇಗಿರಬೇಕೆಂಬ ಬಗ್ಗೆ ಮುನ್ನೋಟ ರೂಪಿಸಲು ಸೂಚಿಸಿದ್ದಾರೆಂದರು.
ಈಗಾಗಲೇ ಸ್ಮಾರ್ಟ್ ಸಿಟಿ, ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ ಸೇವೆ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಆಡಳಿತ ಕಾನೂನು ಮತ್ತು ನ್ಯಾಯ ಎಂಬ 5 ವಲಯಗಳನ್ನು ಗುರುತಿಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಸ್ವರೂಪ ದರ್ಶನ-2025 ಯೋಜನೆ ಉಸ್ತುವಾರಿ ಐಎಎಸ್ ಅಧಿಕಾರಿ ರೇಣುಕಾ ಚಿದಂಬರಂ, ಮುನ್ನೋಟ ತಯಾರಿಸುವ ಪ್ರಯತ್ನ ದೇಶದಲ್ಲಿ ಇದು ಮೊದಲಲ್ಲ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಇಂತಹ ಪ್ರಯತ್ನ ಮಾಡಲಾಗಿದೆ. ಈಗಾಗಲೇ 6 ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕಾರ್ಯಾಗಾರದ ಜತೆಗೆ ಫೇಸ್‌ಬುಕ್, ಟಿಟರ್‌ಗಳ ಮೂಲಕವೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದರು.
ಜಿಲ್ಲಾಧಿಕಾರಿ ರಂದೀಪ್, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಮತ್ತಿತರರಿದ್ದರು.